ಚಂಡೀಗಢ: ತೀವ್ರಗಾಮಿ ಬೋಧಕ, ಖಾಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್‌ಗಾಗಿ ಸತತ ಐದನೇ ದಿನವೂ ಪೊಲೀಸರು ಹುಡುಕಾಟ ಮುಂದುವರೆಸಿದ್ದು, ಪಂಜಾಬ್ ಪೊಲೀಸರು ಮಂಗಳವಾರ ರಾಜ್ಯದಲ್ಲಿ 'ಶಾಂತಿ ಮತ್ತು ಸೌಹಾರ್ದತೆ' ಕದಡಿದ ಆರೋಪದಡಿ 154 ಜನರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ ( ಐಜಿಪಿ) ಸುಖಚೈನ್ ಗಿಲ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತಂದ ಆರೋಪದ ಮೇಲೆ 154 ಮಂದಿಯನ್ನು ಬಂಧಿಸಲಾಗಿದೆ ಎಂದು ಐಜಿಪಿ ಗಿಲ್ ಹೇಳಿದ್ದಾರೆ.
ಅಮೃತಪಾಲ್ ಸಿಂಗ್ ಮತ್ತು ಆತನ ಸಹಾಯಕರ ವಿರುದ್ಧ ಪಂಜಾಬ್ ಪೊಲೀಸರು ಶನಿವಾರ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪರಾರಿಯಾಗಿರುವ ಅಮೃತಪಾಲ್ ಸಿಂಗ್ ವಿರುದ್ಧ ಲುಕ್‌ಔಟ್ ನೋಟಿಸ್ ಮತ್ತು ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಅವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಪಂಜಾಬ್ ಪೊಲೀಸರು ಈ ಕ್ರಮಕ್ಕೆ ಇತರ ರಾಜ್ಯಗಳು ಮತ್ತು ಕೇಂದ್ರ ಏಜೆನ್ಸಿಗಳಿಂದ ಸಂಪೂರ್ಣ ಸಹಕಾರವನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಅಮೃತಪಾಲ್ ಅವರ ಹಲವು ಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಪರಾರಿಯಾದ ವ್ಯಕ್ತಿ ಎಲ್ಲಿದ್ದಾನೆ ಎಂಬುದನ್ನು ಬಹಿರಂಗಪಡಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಜಲಂಧರ್ ಗ್ರಾಮಾಂತರ ಪೊಲೀಸರು ಮಾರ್ಚ್ 18 ರಂದು ಅಮೃತಪಾಲ್ ಅವರ ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ಐಜಿಪಿ ತಿಳಿಸಿದ್ದಾರೆ.
'ಶಾಹಕೋಟ್‌ನ ನವ ಕಿಲ್ಲಾದ ಮನ್‌ಪ್ರೀತ್ ಸಿಂಗ್ ಅಲಿಯಾಸ್ ಮನ್ನಾ (28), ನಕೋದರ್‌ನ ಬಾಲ್ ನೌ ಗ್ರಾಮದ ಗುರುದೀಪ್ ಸಿಂಗ್ ಅಲಿಯಾಸ್ ದೀಪ (34), ಕೋಟ್ಲಾ ನೋದ್ ಸಿಂಗ್ ಗ್ರಾಮದ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ (36), ಫರೀದ್‌ಕೋಟ್‌ನ ಗುರ್ಭೇಜ್ ಸಿಂಗ್ ಅಲಿಯಾಸ್ ಭೇಜಾ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ನಾಲ್ವರು ಆರೋಪಿಗಳು ಅಮೃತಪಾಲ್‌ಗೆ ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಅಮೃತಪಾಲ್ ಸಿಂಗ್ ಮತ್ತು ಅವರ ಸಹಾಯಕರು ನಂಗಲ್ ಅಂಬಿಯಾ ಗ್ರಾಮದ ಗುರುದ್ವಾರ ಸಾಹಿಬ್‌ನಲ್ಲಿ ತಮ್ಮ ಬಟ್ಟೆಗಳನ್ನು ಬದಲಾಯಿಸಿದ್ದಾರೆ ಮತ್ತು ಅಲ್ಲಿಂದ ಎರಡು ಮೋಟಾರ್‌ಸೈಕಲ್‌ಗಳಲ್ಲಿ ಪರಾರಿಯಾಗಿದ್ದಾರೆ’ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.