ಗುರುವಾರ , ಜನವರಿ 27, 2022
21 °C

ಪ್ರಧಾನಿ ನರೇಂದ್ರ ಮೋದಿಯಿಂದ ಗಿಮಿಕ್: ಚರಣ್‌ಜಿತ್ ಸಿಂಗ್ ಚನ್ನಿ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

ಹೋಷಿಯಾರ್‌ಪುರ (ಪಂಜಾಬ್‌): ‘ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಪಂಜಾಬ್‌ ಸರ್ಕಾರವನ್ನು ಉರುಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲು ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಲೋಪದ ಗಿಮಿಕ್ ಮಾಡುತ್ತಿದ್ದಾರೆ’ ಎಂದು ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಆರೋಪಿಸಿದ್ದಾರೆ.

‘ಮೋದಿ ಅವರು ಹೋಗಬೇಕಿದ್ದ ರ‍್ಯಾಲಿಯಲ್ಲಿ ಜನರೇ ಸೇರಿರಲಿಲ್ಲ. ಇದರಿಂದ ರ‍್ಯಾಲಿ ರದ್ದುಪಡಿಸಿದರು. ಪ್ರಧಾನಿ ಜೀವಕ್ಕೆ ಅಪಾಯವಿತ್ತು ಎಂಬ ಆರೋಪದಲ್ಲೂ ಹುರುಳಿಲ್ಲ. ಪ್ರಧಾನಿ ಇದ್ದ ವಾಹನಗಳು ನಿಂತಿದ್ದ ಜಾಗದಿಂದ 1 ಕಿ.ಮೀ. ದೂರದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಮೇಲ್ಸೇತುವೆ ಮೇಲೆ ಪ್ರತಿಭಟನಕಾರರು ಒಂದು ಘೋಷಣೆಯನ್ನೂ ಕೂಗಿಲ್ಲ. ಹೀಗಿದ್ದಾಗ, ಅವರಿಗೆ ಅಪಾಯ ಎದುರಾಗಿದ್ದಾದರೂ ಹೇಗೆ’ ಎಂದು ಚನ್ನಿ ಪ್ರಶ್ನಿಸಿದ್ದಾರೆ. ‘ಜಮ್ಮು–ಕಾಶ್ಮೀರದಲ್ಲಿ ಏನೂ ಸರಿ ಇಲ್ಲ ಎಂದು ಬಿಂಬಿಸಿದಂತೆ, ಪಂಜಾಬ್‌ನಲ್ಲೂ ಬಿಂಬಿಸಲು ಸರ್ಕಾರ ತಂತ್ರ ಹೂಡುತ್ತಿದೆ. ಆ ಮೂಲಕ ಇಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಂಚು ಮಾಡುತ್ತಿದೆ’ ಎಂದಿದ್ದಾರೆ.

ತನಿಖೆಗೆ ಆಗ್ರಹ

ಮಾನ್ಯ ಪ್ರಧಾನಿಯ ಭದ್ರತೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಾವಳಿಗಳು ಇವೆ. ಅವುಗಳನ್ನು ಚಾಚೂತಪ್ಪದೆ ಅನುಷ್ಠಾನಕ್ಕೆ ತರಬೇಕು. ಅವರ ಭೇಟಿಯ ವೇಳೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು

ಓಂ ಪ್ರಕಾಶ್ ಬಿರ್ಲಾ, ಲೋಕಸಭೆ ಸ್ಪೀಕರ್

ಪ್ರಧಾನಿ ಮೋದಿ ಈ ಹಿಂದೆ ಮಾಹಿತಿ ನೀಡದೆಯೇ, ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀಫ್ ಅವರ ಮನೆಗೆ ಭೇಟಿ ನೀಡಿದ್ದರು. ಆಗ ಅವರಿಗೆ ಯಾವುದೇ ತೊಂದರೆ ಇರಲಿಲ್ಲ. ಆದರೆ, ಈಗ ಈ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ. ಮೋದಿ ಈ ವಿಚಾರವನ್ನು ಇಷ್ಟು ದೊಡ್ಡದು ಮಾಡಬಾರದಿತ್ತು

ದಿಗ್ವಿಜಯ್ ಸಿಂಗ್, ಕಾಂಗ್ರೆಸ್‌ ಹಿರಿಯ ನಾಯಕ

ಜಗತ್ತಿನ ಅತ್ಯಂತ ಖ್ಯಾತ ಮತ್ತು ಪ್ರೀತಿಪಾತ್ರ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತೋರಿದೆ. ಇದೊಂದು ಸಂಚೇ ಸರಿ

ಮುಕ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ

ಪ್ರಧಾನಿ ಭದ್ರತೆಯಲ್ಲಿ ಲೋಪವಾದ ಕಾರಣ, ರ‍್ಯಾಲಿಯನ್ನು ರದ್ದುಪಡಿಸಲಾಯಿತು ಎಂದು ಬಿಜೆಪಿ ಹೇಳುತ್ತಿದೆ. ಆದರೆ ರ‍್ಯಾಲಿಯಲ್ಲಿ ಜನರೇ ಇಲ್ಲದೆ, ಕುರ್ಚಿಗಳು ಖಾಲಿ ಇದ್ದವು. ಇದಕ್ಕಾಗಿ ರ‍್ಯಾಲಿ ರದ್ದುಪಡಿಸಲಾಯಿತು ಎಂದು ಪಂಜಾಬ್‌ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಈಗ ಭದ್ರತಾ ಲೋಪದಿಂದಲೇ ಹೀಗಾಯಿತೇ ಅಥವಾ ಇದಕ್ಕೆ ರೈತರ ಆಕ್ರೊಶ ಕಾರಣವೇ ಎಂಬುದನ್ನು ಪತ್ತೆಮಾಡುವುದು ಅತ್ಯಗತ್ಯವಾಗಿದೆ

ರಾಕೇಶ್ ಟಿಕಾಯತ್, ಬಿಕೆಯು ನಾಯಕ

ಮಳೆ ಬರುತ್ತಿತ್ತು, ರ‍್ಯಾಲಿಗೆ ಜನರು ಬಂದಿರಲಿಲ್ಲ. ಇನ್ನೆರಡು ತಿಂಗಳಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯದಲ್ಲಿ, ಸರ್ಕಾರ ಮತ್ತು ಮುಖ್ಯಮಂತ್ರಿಯ ಮೇಲೆ ದೋಷ ಹೊರಿಸುವ ಬದಲು, ಪ್ರಧಾನಿ ಅವರು ತಮ್ಮ ರ‍್ಯಾಲಿಯನ್ನು ಗೌರವಪೂರ್ವಕವಾಗಿ ಮುಂದೂಡಬಹುದಾಗಿತ್ತು. ಅಲ್ಲಿಗೆ ಹೋಗಲೇಬೇಕು ಎಂದು ಪ್ರಧಾನಿಯೇ ನಿರ್ಧರಿಸಿದರೆ ಅಥವಾ ಆ ಬಗ್ಗೆ ಯಾರಾದರೂ ಪ್ರಧಾನಿಯ ಹಾದಿ ತಪ್ಪಿಸಿದರೆ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಬೇಕು

ಅಶೋಕ್‌ ಗೆಹಲೋತ್, ರಾಜಸ್ಥಾನ ಮುಖ್ಯಮಂತ್ರಿ

ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಸ್ಪರ ಭಿನ್ನವಾದ ಹೇಳಿಕೆ ನೀಡುತ್ತಿವೆ. ಇಲ್ಲಿ ನಿಜಕ್ಕೂ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಲು ಮತ್ತು ತಪ್ಪಿತಸ್ಥರನ್ನು ಪತ್ತೆ ಮಾಡಲು ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಜನರಿಗೆ ಸತ್ಯ ತಿಳಿಯಬೇಕಾದದ್ದೇ ಅತ್ಯಂತ ಮುಖ್ಯ

ನವಾಬ್ ಮಲಿಕ್, ಎನ್‌ಸಿಪಿ ವಕ್ತಾರ


ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದರು   –ಪಿಟಿಐ ಚಿತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು