ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್, ಹರಿಯಾಣ: ಇಂದಿನಿಂದ ಭತ್ತ ಖರೀದಿ

ಖರೀದಿ ವಿಳಂಬ ಖಂಡಿಸಿ ರೈತರಿಂದ ಭಾರಿ ಪ್ರತಿಭಟನೆ; ಮಣಿದ ಸರ್ಕಾರ
Last Updated 2 ಅಕ್ಟೋಬರ್ 2021, 16:41 IST
ಅಕ್ಷರ ಗಾತ್ರ

ಚಂಡೀಗಡ: ಭಾನುವಾರದಿಂದಲೇ (ಅ.3) ಭತ್ತ ಖರೀದಿ ಆರಂಭಿಸುವುದಾಗಿ ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳು ಪ್ರಕಟಿಸಿವೆ.

ಸಾಮಾನ್ಯವಾಗಿ ಪ್ರತಿವರ್ಷದ ಅಕ್ಟೋಬರ್ 1ರಿಂದ ಆರಂಭವಾಗಬೇಕಿದ್ದ ಭತ್ತ ಖರೀದಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವು ಅಕ್ಟೋಬರ್ 11ಕ್ಕೆ ಮುಂದೂಡಿತ್ತು. ಇದನ್ನು ಖಂಡಿಸಿ ಎರಡೂ ರಾಜ್ಯಗಳಲ್ಲಿ ರೈತರು ಶನಿವಾರ ಭಾರಿ ಪ್ರತಿಭಟನೆ ನಡೆಸಿದರು.

‘ಕೇಂದ್ರ ಗ್ರಾಹಕ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ನಮ್ಮ ಮನವಿಗೆ ಸ್ಪಂದಿಸಿದ್ದು ಖುಷಿ ತಂದಿದೆ. ಭಾನುವಾರದಿಂದ ಭತ್ತ ಖರೀದಿ ಪ್ರಕ್ರಿಯೆ ಶುರುವಾಗಲಿದೆ’ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ತಿಳಿಸಿದ್ದಾರೆ.

ಸಚಿವರ ಭೇಟಿ ವೇಳೆ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಹಾಗೂ ಕೃಷಿ ಸಚಿವ ಜೆ.ಪಿ. ದಲಾಲ್ ಉಪಸ್ಥಿತರಿದ್ದರು.

ಭತ್ತದ ಫಸಲು ಈಗಾಗಲೇ ಮಂಡಿಗಳನ್ನು ತಲುಪಿದ್ದು, ರೈತರ ಹಿತ ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗನೆ ಖರೀದಿ ಆರಂಭಿಸಲು ವಿನಂತಿಸಲಾಗಿದೆ ಎಂದು ಸಚಿವರ ಭೇಟಿ ಬಳಿಕ ಖಟ್ಟರ್ ಹೇಳಿದರು. ಖರೀದಿ ಪ್ರಕ್ರಿಯೆ ತಡ ಮಾಡದಂತೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಪ್ರಧಾನಿ ಬಳಿ ಮನವಿ ಮಾಡಿದ್ದರು.

ಎರಡೂ ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ: ಸರ್ಕಾರ,ಭತ್ತ ಖರೀದಿಗೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಪಂಜಾಬ್ ಹಾಗೂ ಹರಿಯಾಣದಲ್ಲಿ ಶನಿವಾರ ರೈತರು ಭಾರಿ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್ ಸೇರಿದಂತೆಶಾಸಕರು ಮತ್ತು ಸಚಿವರ ನಿವಾಸಗಳಿಗೆ ಮುತ್ತಿಗೆ ಹಾಕಲಾಯಿತು.ಕರ್ನಾಲ್‌ನಲ್ಲಿ ಖಟ್ಟರ್ ನಿವಾಸ ಬಳಿ ಪೊಲೀಸ್ ಬ್ಯಾರಿಕೇಡ್‌
ಗಳನ್ನು ಮುರಿದಿದ್ದರಿಂದ ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಲಾಯಿತು.

ಇತ್ತೀಚೆಗೆ ಸುರಿದ ಮಳೆಯಿಂದ ಫಸಲಿನಲ್ಲಿ ತೇವಾಂಶದ ಅಂಶವಿದೆ ಹಾಗೂ ಫಸಲು ಇನ್ನೂ ಪಕ್ವವಾಗಿಲ್ಲ ಎಂಬ ಕಾರಣ ನೀಡಿ ಭತ್ತ ಖರೀದಿಗೆ ಸರ್ಕಾರ ವಿಳಂಬ ಮಾಡಿತ್ತು.

ಶಹಾಬಾದ್ ಮತ್ತು ಪಂಚಕುಲದಲ್ಲಿ ಹೋರಾಟಗಾರರು ಟ್ರಾಕ್ಟರ್‌ಗಳನ್ನು ಬಳಸಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದರು. ಸಚಿವ ಸಂದೀಪ್ ಸಿಂಗ್ ಸೇರಿದಂತೆ ಬಿಜೆಪಿ ನಾಯಕರ ಮನೆಗಳನ್ನು ಮುಂದೆ ಪ್ರತಿಭಟನೆ ನಡೆಸಿದರು. ರೈತರು ಮತ್ತು ಪೊಲೀಸರ ನಡುವೆ ಸಣ್ಣಪುಟ್ಟ ಘರ್ಷಣೆಗಳು ಸಂಭವಿಸಿದ ನಂತರ ಹರಿಯಾಣ ಮತ್ತು ಪಂಜಾಬ್‌ನ ಕೆಲವು ಸ್ಥಳಗಳಲ್ಲಿ ಪರಿಸ್ಥಿತಿ ಉದ್ವಿಗ್ನ
ವಾಯಿತು. ಸಚಿವರು, ಶಾಸಕರು ಮತ್ತು ಸಂಸದರ ನಿವಾಸಗಳ ಎದುರು ಆಹಾರ ಧಾನ್ಯ ತುಂಬಿದ ಟ್ರಾಲಿಗಳನ್ನು ನಿಲ್ಲಿಸಿ ರೈತರು ತಮ್ಮ ಆಕ್ರೋಶ ಹೊರಹಾಕಿದರು.

ಪಂಜಾಬ್‌ನಲ್ಲಿ ರಾಜ್ಯ ವಿಧಾನಸಭೆಯ ಸ್ಪೀಕರ್ ರಾಣಾ ಕೆ.ಪಿ ಸಿಂಗ್, ರೂಪಾನಗರದಲ್ಲಿ ಶಾಸಕ ಹರ್ಜೋತ್ ಕಮಲ್ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರ ನಿವಾಸದ ಹೊರಗೆ ರೈತರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಶನಿವಾರ ಎರಡೂ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT