ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಕಾಯ್ದೆಗೆ ಸುಗ್ರೀವಾಜ್ಞೆ ತರಬೇಕು: ಬಿಹಾರ ಸಿಎಂಗೆ ರಘುವಂಶ್ ಪ್ರಸಾದ್ ಪತ್ರ

Last Updated 11 ಸೆಪ್ಟೆಂಬರ್ 2020, 9:50 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ತೊರೆದಿರುವ ರಘುವಂಶ್‌ ಪ್ರಸಾದ್‌ ಸಿಂಗ್‌ ಅವರು ಬಿಹಾರ ಮುಖ್ಯಮಂತ್ರಿ ಹಾಗೂ ಜನತಾ ದಳ ಮುಖ್ಯಸ್ಥ ನಿತೀಶ್ ಕುಮಾರ್ ಅವರಿ‌ಗೆ ಪತ್ರ ಬರೆದಿದ್ದು, ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಕಾಯ್ದೆಗೆ ಸುಗ್ರೀವಾಜ್ಞೆ ತರುವುದೂ ಸೇರಿದಂತೆ ತಮ್ಮ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದ್ದಾರೆ.

‘ನರೇಗಾ ಕಾಯ್ದೆ ಅಡಿಯಲ್ಲಿ ಸರ್ಕಾರಿ ಹಾಗೂ ಪರಿಶಿಷ್ಟ ಜಾತಿ–ಪಂಗಡದವರ ಭೂಮಿಯ ನಿರ್ವಹಣೆಯನ್ನು ವಿಸ್ತರಿಸುವಾಗ, ಅದರ ವ್ಯಾಪ್ತಿಗೆಸಾಮಾನ್ಯ ರೈತರ ಜಮೀನುಗಳನ್ನೂ ಸೇರಿಸುವ ಅವಶ್ಯಕತೆ ಇದೆ. ಅದರಂತೆ ಈ ವಿಚಾರದಲ್ಲಿ ನೀತಿ ಸಂಹಿತೆಯನ್ನು ಕಾಯ್ದುಕೊಳ್ಳಲು ಕಾಯ್ದೆಗೆ ಸುಗ್ರೀವಾಜ್ಞೆ ತರಬೇಕಾಗಿದೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮುಂದುವರಿದು,2000ನೇ ಇಸವಿಯಲ್ಲಿ ಬಿಹಾರದಿಂದ ಜಾರ್ಖಂಡ್‌ ವಿಭಜನೆಯಾದ ಬಳಿಕ ಗಣರಾಜ್ಯೋತ್ಸವ ದಿನದಂದು ರಾಂಚಿಯಲ್ಲಿ(ಜಾರ್ಖಂಡ್‌ ರಾಜಧಾನಿ) ದ್ವಜಾರೋಹಣ ನಡೆಸಲಾಗುತ್ತದೆ. ಅದೇ ರೀತಿ ‘ಪ್ರಜಾಪ್ರಭುತ್ವದ ತಾಯಿ’ ಹಾಗೂ ‘ಮೊದಲ ಗಣರಾಜ್ಯ’ ಎನಿಸಿಕೊಂಡಿರುವ ವೈಶಾಲಿಯಲ್ಲಿ ಆಗಸ್ಟ್‌ 15 ಮತ್ತು ಜನವರಿ 26ರಂದು ದೇಶದ ದ್ವಜವನ್ನು ಹಾರಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಆರ್‌ಜೆಡಿ ತೊರೆದ ರಘುವಂಶ್‌ ಪ್ರಸಾದ್ ಸಿಂಗ್‌

ಬುದ್ಧಶತಮಾನಗಳ ಹಿಂದೆ ವೈಶಾಲಿಯ ಜನರಿಗೆ ದಾನವಾಗಿ ನೀಡಿದ್ದ‘ಭಿಕ್ಷಾಪಾತ್ರೆ’ಯನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಬೇಕು ಎಂದೂ ಒತ್ತಾಯಿಸಿದ್ದಾರೆ.

ಲಾಲು ಕುಟುಂಬಕ್ಕೆ ಹತ್ತಿರದವರಾಗಿದ್ದ ಸಿಂಗ್‌ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದು, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರಿಗೆ ಗುರುವಾರ ಪತ್ರ ಬರೆದು, ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದರು.

ವೈಶಾಲಿ ಕ್ಷೇತ್ರದ ಸಂಸದರಾಗಿರುವಲೋಕ ಜನಶಕ್ತಿ ಪಕ್ಷದ ನಾಯಕ ರಾಮ ಕಿಶೋರ್‌ ಸಿಂಗ್‌ ಅವರನ್ನು ಆರ್‌ಜೆಡಿಗೆ ಸೇರಿಸಿಕೊಳ್ಳುವ ಸಂಬಂಧದ ಮಾತುಕತೆ ಬಗ್ಗೆ ಪ್ರಸಾದ್‌ ಸಿಂಗ್‌ ಅಸಮಾಧಾನಗೊಂಡಿದ್ದರು ಎಂದುಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ಜೂನ್‌ ತಿಂಗಳಲ್ಲಿ ಆರ್‌ಜೆಡಿಯ ಉಪಾಧ್ಯಕ್ಷ ಸ್ಥಾನಕ್ಕೆ ಸಿಂಗ್‌ ರಾಜೀನಾಮೆ ನೀಡಿದ್ದರು. ಬಳಿಕ ಬಿಹಾರ ರಾಜ್ಯ ಆರ್‌ಜೆಡಿ ಘಟಕದ ಅಧ್ಯಕ್ಷ ಜಗದಾನಂದ್‌ ಸಿಂಗ್‌ ಅವರ ಕಾರ್ಯವೈಖರಿಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT