ಸೋಮವಾರ, ಮಾರ್ಚ್ 27, 2023
33 °C
‘ಸರ್ವ ಸಮ್ಮತ ನಾಯಕನನ್ನು ವಿರೋಧ ಪಕ್ಷಗಳು ಒಟ್ಟಾಗಿ ಆಯ್ಕೆ ಮಾಡಲಿವೆ’

ಮೋದಿಗೆ ಸವಾಲೊಡ್ಡಲು ರಾಹುಲ್‌ ಸಮರ್ಥ: ಗೆಹಲೋತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಮ್ಲಾ (ಪಿಟಿಐ): ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲೊಡ್ಡುವ ಸಾಮರ್ಥ್ಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರಿಗೆ ಇದೆ. ಆದರೆ, ಸರ್ವ ಸಮ್ಮತ ನಾಯಕ ಯಾರಾಗಬೇಕೆನ್ನುವುದನ್ನು ವಿರೋಧ ಪಕ್ಷಗಳೆಲ್ಲವೂ ಒಟ್ಟಾಗಿ ನಿರ್ಧರಿಸಲಿವೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಬುಧವಾರ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಗೆಹಲೋತ್‌ ಅವರು, ‘ಪಕ್ಷದ ಮಾಜಿ ಅಧ್ಯಕ್ಷರೂ ಆದ ರಾಹುಲ್‌ ಗಾಂಧಿ ಭಾರತ್ ಜೋಡೊ ಯಾತ್ರೆ ಮೂಲಕ ಧ್ವನಿ ಎತ್ತುತ್ತಿರುವ ವಿಷಯಗಳು ಸಾರ್ವಜನಿಕರಿಗೆ ಸಂಬಂಧಿಸಿದ್ದಾಗಿವೆ. ಅವರು ನೀಡುತ್ತಿರುವ ಸಂದೇಶವೂ ದೇಶದ ಮನೆಮನೆಗಳನ್ನೂ ತಲುಪುತ್ತಿದೆ’ ಎಂದು ಹೇಳಿದರು. 

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ರಾಹುಲ್‌ ಗಾಂಧಿ ಅವರು ಸವಾಲೊಡ್ಡಬಹುದೇ ಎಂಬ ಪ್ರಶ್ನೆಗೆ ಗೆಹಲೋತ್‌ ‘ಅವರಿಗೆ ಸವಾಲೊಡ್ಡುವ ಶಕ್ತಿ ಇದೆ. ಇದು ಅವರಲ್ಲಿ ಆರಂಭದಿಂದಲೂ ಇತ್ತು. ಆದರೆ, ಅವರ ವ್ಯಕ್ತಿತ್ವಕ್ಕೆ ಸಾಮಾಜಿಕ ಜಾಲತಾಣದ ದುರುಪಯೋಗದ ಮೂಲಕ ಕಳಂಕ ಹಚ್ಚಲಾಯಿತು. ಈಗ ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಂಡಿದ್ದಾರೆ’ ಎಂದರು.

ವಿರೋಧ ಪಕ್ಷದ ನಾಯಕತ್ವ ಬಗ್ಗೆ ಕೇಳಿದ ಮತ್ತೊಂದು ಪ್ರಶ್ನೆಗೆ ‘ಇದನ್ನು ಎಲ್ಲಾ ರಾಜಕೀಯ ಪಕ್ಷಗಳು ಸೇರಿ ನಿರ್ಧರಿಸುತ್ತವೆ. ಪ್ರತಿಪಕ್ಷಗಳು ಒಗ್ಗಟ್ಟಾಗಬೇಕೆಂದು ಇಡೀ ದೇಶ ಬಯಸಿದೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಅಶೋಕ್‌ ಗೆಹಲೋತ್‌ ಉತ್ತರಿಸಿದರು.

ರಾಹುಲ್‌ ಗಾಂಧಿಯವರು ವಿಧಾನಸಭಾ ಚುನಾವಣೆಗಳ ಪ್ರಚಾರದಿಂದ ಹೊರಗುಳಿದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೊ ಯಾತ್ರೆಯಲ್ಲಿ ತೊಡಗಿದ್ದು, ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ ಅಷ್ಟೇ. ಇದರಲ್ಲಿ ಬೇರೆ ಯಾವ ಕಾರಣವೂ ಇಲ್ಲ. ಗುಜರಾತ್‌ ಚುನಾವಣಾ ಪ್ರಚಾರದಲ್ಲಿ ರಾಹುಲ್‌ ಪಾಲ್ಗೊಳ್ಳಬೇಕೆಂದು ಬೇಡಿಕೆ ಇದೆ. ರಾಹುಲ್‌ ಗಾಂಧಿ ಅಲ್ಲಿಗೆ ಹೋಗಬಹುದು ಅಥವಾ ಹೋಗದೇ ಇರಲೂಬಹುದು’ ಎಂದು ಗೆಹಲೋತ್‌ ಪ್ರತಿಕ್ರಿಯಿಸಿದರು. 

‘ಹಿಮಾಚಲ ಪ್ರದೇಶ ಮತ್ತು ಗುಜರಾತ್‌ ಎರಡೂ ರಾಜ್ಯಗಳಲ್ಲಿ ಪಕ್ಷವು ಸರ್ಕಾರ ರಚಿಸಲಿದೆ. ಈ ಎರಡೂ ರಾಜ್ಯಗಳಲ್ಲಿರುವ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ಪೂರ್ಣ ಬಹುಮತ ತಂದುಕೊಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು