ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ವಿರುದ್ಧ ಭಾಷಣದ ನಂತರವೇ ಸಂಕಷ್ಟ: ಕಾಂಗ್ರೆಸ್‌ ವಾದ

Last Updated 24 ಮಾರ್ಚ್ 2023, 19:25 IST
ಅಕ್ಷರ ಗಾತ್ರ

ನವದೆಹಲಿ: ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಅದಾನಿ ಪ್ರಕರಣದ ಕುರಿತು ಮಾಡಿದ ಭಾಷಣದ ನಂತರ ಮಾನನಷ್ಟ ತಡೆ ಪ್ರಕರಣದ ವಿಚಾರಣೆ ಹೇಗೆ ಬಿರುಸು ಪಡೆದುಕೊಂಡಿತು ಎಂಬುದನ್ನು ಜನರಿಗೆ ತಿಳಿಸುವುದು, ಶಿಕ್ಷೆ ತಡೆ ಕೋರಿ ಸೆಷನ್ಸ್‌ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದು, ಬಿಜೆಪಿ ವಿರೋಧಿ ಪಕ್ಷಗಳನ್ನು ಒಂದೆಡೆ ತರುವುದು ಈಗ ಕಾಂಗ್ರೆಸ್‌ ಪಕ್ಷದ ಮುಂದೆ ಇರುವ ಪ್ರಮುಖ ಕಾರ್ಯಸೂಚಿಗಳಾಗಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿ ಸಮೂಹಕ್ಕೆ ಅನುಕೂಲಕರವಾಗಿ ನಡೆದುಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಸತತವಾಗಿ ಆರೋಪಿಸಿದ ಬಳಿಕವೇ ರಾಹುಲ್‌ ಅವರಿಗೆ ‘ಸಂಕಷ್ಟಗಳು’ ಬರತೊಡಗಿವೆ ಎಂಬುದು ಕಾಕತಾಳೀಯ ಅಲ್ಲ ಎಂಬ ನಂಬಿಕೆ ಕಾಂಗ್ರೆಸ್‌ನದ್ದಾಗಿದೆ.

ರಾಹುಲ್ ಅವರು ಸೆಷನ್ಸ್ ನ್ಯಾಯಾಲಯದಲ್ಲಿ ಸದ್ಯವೇ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್‌ ಸಂಸದ ಮತ್ತು ವಕೀಲ ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ.

ಮಾನನಷ್ಟ ಪ್ರಕರಣವು ರಾಜಕೀಯ ಪ್ರೇರಿತ ಎಂದು ಅವರು ಪ್ರತಿಪಾದಿಸಿದ್ದಾರೆ. ಪ್ರಕರಣದ ವಿವರಗಳನ್ನು ಅವರು ಹಂಚಿ ಕೊಂಡಿದ್ದಾರೆ. 2019ರ ಏಪ್ರಿಲ್‌ 16ರಂದು ಮಾನಹಾನಿ ಪ್ರಕರಣ ದಾಖಲಿಸಲಾಗಿದೆ. 2021ರ ಮಾರ್ಚ್‌ನಲ್ಲಿ ರಾಹುಲ್‌ ಹೇಳಿಕೆ ದಾಖಲಿಸಿದ್ದರು. ಆದರೆ, ದೂರುದಾರರು ಹೈಕೋರ್ಟ್‌ಗೆ ಅರ್ಜಿ ಹಾಕಿ ಪ್ರಕರಣಕ್ಕೆ ತಡೆ ಕೊಡಬೇಕು ಎಂದು ಕೋರಿದ್ದರು. 2022ರ ಮಾರ್ಚ್‌ 7ರಂದು ತಡೆ ಸಿಕ್ಕಿತು. ಕಳೆದ ತಿಂಗಳು ಅಗತ್ಯ ಸಾಕ್ಷ್ಯಗಳು ಸಿಕ್ಕಿವೆ ಎಂದು ಹೇಳಿದ ದೂರುದಾರರು ತಡೆ ತೆರವಿಗೆ ಕೋರಿದ್ದರು. ಹೊಸ ನ್ಯಾಯಾಧೀಶರು ನೇಮಕವಾದ ನಂತರವೇ ವಿಚಾರಣೆ ಆರಂಭವಾಗುವಂತೆ ನೋಡಿಕೊಂಡರು. ಆನಂತರವೇ ತಡೆ ತೆರವು ಆದೇಶ ದೊರೆಯಿತು ಮತ್ತು ವಿಲೇವಾರಿ ತ್ವರಿತವಾಗಿ ನಡೆಯಿತು ಎಂದು ಅವರು ಹೇಳಿದ್ದಾರೆ.

‘ಅದಾನಿ ಕುರಿತು ರಾಹುಲ್‌ ಲೋಕಸಭೆ‌ ಯಲ್ಲಿ ಮಾತನಾಡಿದ್ದು ಫೆಬ್ರುವರಿ 7ರಂದು. ಹೈಕೋರ್ಟ್‌ನಲ್ಲಿ ದೂರುದಾರ ತಾನೇ ತಂದಿದ್ದ ತಡೆ ತೆರವಾಗಿದ್ದು ಫೆ.16ರಂದು. ಮತ್ತೆ ವಿಚಾರಣೆ ಆರಂಭವಾಗಿದ್ದು ಫೆ.27ಕ್ಕೆ ಮತ್ತು ತೀರ್ಪು ಕಾಯ್ದಿರಿಸಿದ್ದು ಮಾರ್ಚ್‌ 17ರಂದು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್ ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಅವರ ಮೇಲ್ಮನವಿಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ಬರುವುದು ತಡವಾಗಬಹುದು. ಈ ಪ್ರಕರಣದಲ್ಲಿ ಸದ್ಯಕ್ಕೆ ತೀರ್ಪಿಗೆ ತಡೆ ಪಡೆದುಕೊಳ್ಳುವುದೇ ನಮ್ಮ ಆದ್ಯತೆ. ಆ ಮೂಲಕ ರಾಹುಲ್‌ ಅವರ ಸದಸ್ಯತ್ವವನ್ನು ಉಳಿಸಿಕೊಳ್ಳಬಹುದು. ರಾಹುಲ್‌ ಅವರ ಅನರ್ಹತೆ ಮುಂದುವರಿದರೆ, ಚುನಾವಣಾ ಆಯೋಗವು ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಯನ್ನು ಘೋಷಿಸಿಬಿಡಬಹುದು. ಅದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಸಿಂಘ್ವಿ ಹೇಳಿದ್ದಾರೆ.

ಈ ಬೆಳವಣಿಗೆಯು ಎಲ್ಲಾ ವಿರೋಧ ಪಕ್ಷಗಳನ್ನು ಒಂದೇ ವೇದಿಕೆಗೆ ಕರೆತಂದಿದೆ. ರಾಹುಲ್‌ ಅವರ ಅನರ್ಹತೆ ಕ್ರಮವನ್ನು ಖಂಡಿಸಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದಾರೆ. ಎಎಪಿ, ಸಮಾಜವಾದಿ ಪಕ್ಷಗಳೂ ಈ ಕ್ರಮವನ್ನು ಖಂಡಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT