ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪರಿಸ್ಥಿತಿ ಬಳಸಿ ರಾಹುಲ್ ರಾಜಕಾರಣ: ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ

ಕಾಂಗ್ರೆಸ್‌ನ ‘ಶ್ವೇತಪತ್ರ’ಕ್ಕೆ ಟೀಕೆ
Last Updated 22 ಜೂನ್ 2021, 12:11 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19ನಿಂದಾಗಿ ದೇಶದಲ್ಲಿ ಕಂಡುಬಂದ ಸಂಕಷ್ಟ ಪರಿಸ್ಥಿತಿ ಬಳಸಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಂಗಳವಾರ ಟೀಕಿಸಿದೆ.

ಕೇಂದ್ರ ಸರ್ಕಾರ ಕೋವಿಡ್‌ ಪಿಡುಗನ್ನು ನಿರ್ವಹಣೆ ಮಾಡಿದ ಬಗ್ಗೆ ಕಾಂಗ್ರೆಸ್‌ ಪಕ್ಷ ‘ಶ್ವೇತಪತ್ರ’ ಬಿಡುಗಡೆ ಮಾಡಿದ ಬೆನ್ನಲ್ಲೇ, ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಟೀಕಾಪ್ರಹಾರ ಮಾಡಿದೆ.

‘ಶ್ವೇತ ಪತ್ರ’ ಬಿಡುಗಡೆ ಮಾಡಿ ಮಾತನಾಡಿದ ರಾಹುಲ್‌ ಗಾಂಧಿ, ‘ಕೋವಿಡ್‌–19ನ ಒಂದು ಮತ್ತು ಎರಡನೇ ಅಲೆಯನ್ನು ಕೇಂದ್ರ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಹೀಗಾಗಿ ಪಿಡುಗಿನ ಈ ಎರಡೂ ಅಲೆಗಳು ವಿನಾಶಕಾರಿಯಾಗಿ ಪರಿಣಮಿಸಿವೆ’ ಎಂದು ಟೀಕಿಸಿದರು.

ಈ ದಾಖಲೆ ಬಿಡುಗಡೆಗೊಂಡ ಕೆಲ ಗಂಟೆಗಳ ನಂತರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ‘ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಏನಾದರೂ ಉತ್ತಮ ಸಾಧನೆ ಕಂಡು ಬಂದರೆ, ಅದಕ್ಕೆ ಕಳಂಕ ತರುವ ಕೆಲಸವನ್ನು ಕಾಂಗ್ರೆಸ್‌ ಹಾಗೂ ವಿಶೇಷವಾಗಿ ರಾಹುಲ್‌ ಗಾಂಧಿ ಅವರಿಂದಾಗುತ್ತದೆ. ಅವರಿಂದ ಇಂಥ ಪ್ರತಿಕ್ರಿಯೆ ಬರುವ ಬಗ್ಗೆ ನಿನ್ನೆಯೇ ನಮ್ಮಲ್ಲಿ ಶಂಕೆ ಮೂಡಿತ್ತು’ ಎಂದರು.

‘ಸೋಮವಾರ ನಮಗೆ ಮಹತ್ವದ ದಿನ. ವಿಶ್ವದಲ್ಲಿ ಒಂದೇ ದಿನದಲ್ಲಿ ಕೋವಿಡ್‌ ಲಸಿಕೆಯ 87 ಲಕ್ಷ ಡೋಸ್‌ಗಳನ್ನು ನೀಡಿದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಜನರೂ ಈ ಸಾಧನೆಯನ್ನು ಸಂಭ್ರಮಿಸಿದರು. ಆದರೆ, ಇಂದು ರಾಹುಲ್‌ ಗಾಂಧಿ ಅವರು ಶ್ವೇತಪತ್ರ ಬಿಡುಗಡೆ ಮಾಡಿ, ಈ ಸಂಭ್ರಮ ಕಸಿಯುವ ಪ್ರಯತ್ನ ಮಾಡಿದ್ದಾರೆ’ ಎಂದು ಪಾತ್ರಾ ಟೀಕಿಸಿದರು.

‘ದೇಶದಲ್ಲಿ ಕೋವಿಡ್‌–19 ವಿರುದ್ಧದ ಹೋರಾಟ ಆರಂಭವಾದಾಗಿನಿಂದಲೂ ಕಾಂಗ್ರೆಸ್‌ ಪಕ್ಷವು, ಸರ್ಕಾರದ ಪ್ರತಿ ನಡೆಯನ್ನು ಪ್ರಶ್ನಿಸುತ್ತಾ ಬಂದಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT