ಶುಕ್ರವಾರ, ಮಾರ್ಚ್ 31, 2023
33 °C

ಅದಾನಿ ನಿಮಗೆ ಎಷ್ಟು ಹಣ ನೀಡಿದ್ದಾರೆ: ಲೋಕಸಭೆಯಲ್ಲಿ ಮೋದಿಗೆ ರಾಹುಲ್ ಪ್ರಶ್ನೆ

ಪಿಟಿಐ/ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಉದ್ಯಮಿ ಗೌತಮ್ ಅದಾನಿ ಕಂಪನಿಗಳು ಮತ್ತು ವೈಯಕ್ತಿಕ ಸಂಪತ್ತು ಬೃಹತ್ ಪ್ರಮಾಣದಲ್ಲಿ ಹೆಚ್ಚಾಗಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಶ್ನೆ ಎತ್ತಿದ್ದಾರೆ.

ಅದಾನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿಯಮಗಳಲ್ಲಿ ಬದಲಾವಣೆ ಮಾಡಿದೆ ಎಂದು ರಾಹುಲ್ ದೂರಿದರು. ವಿಮಾನ ನಿಲ್ದಾಣದ ಉದ್ಯಮದಲ್ಲಿ ಅನುಭವ ಇಲ್ಲದವರಿಗೆ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವ ಅವಕಾಶ ನೀಡುವಂತಿಲ್ಲ. ಈ ನಿಯಮಗಳಲ್ಲಿ ಬದಲಾವಣೆ ಮಾಡಿ ಅದಾನಿಗೆ ದೇಶದ 6 ವಿಮಾನ ನಿಲ್ದಾಣಗಳನ್ನು ನೀಡಲಾಗಿದೆ ಎಂದು ರಾಹುಲ್ ಆರೋಪಿಸಿದರು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಅದಾನಿ ಈಗ 8–10 ವಲಯಗಳಿಗೆ ತಮ್ಮ ಉದ್ಯಮ ವಿಸ್ತರಿಸಿಕೊಂಡಿದ್ದಾರೆ. ಅವರ ಸಂಪತ್ತಿನ ಮೌಲ್ಯ 8 ಬಿಲಿಯನ್ ಡಾಲರ್‌ನಿಂದ 140 ಬಿಲಿಯನ್‌ಗೆ ಏರಿದ್ದು ಹೇಗೆ? ಎಂದು ಯುವಕರು ಪ್ರಶ್ನಿಸುತ್ತಿದ್ದಾರೆ. ತಮಿಳುನಾಡು, ಕೇರಳ ಸೇರಿದಂತೆ ಭಾರತ್ ಜೋಡೊ ಯಾತ್ರೆ ವೇಳೆ ದೇಶದ ಹಲವೆಡೆ ಹೆಚ್ಚು ಕೇಳಿಬರುತ್ತಿರುವ ಹೆಸರು ಅದಾನಿ ಎಂದು ರಾಹುಲ್ ಹೇಳಿದ್ದಾರೆ.

ಪ್ರಧಾನಿ ನರೆಂದ್ರ ಮೋದಿ ಮತ್ತು ಅದಾನಿ ನಡುವಿನ ಸಂಬಂಧದ ಕುರಿತು ಗಮನ ಸೆಳೆದ ಅವರು, ಎಸ್‌ಬಿಐ ಅದಾನಿಗೆ 1 ಬಿಲಿಯನ್ ಡಾಲರ್ ಸಾಲ ಮಂಜೂರು ಮಾಡಿದೆ. ಮೋದಿ ಬಾಂಗ್ಲಾದೇಶಕ್ಕೆ ತೆರಳಿದಾಗ ಬಾಂಗ್ಲಾದೇಶ ಇಂಧನ ಅಭಿವೃದ್ಧಿ ಮಂಡಳಿಯು ಅದಾನಿ ಜೊತೆ 25 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇವೆಲ್ಲವೂ ಮ್ಯಾಜಿಕ್ ರೀತಿ ನಡೆದಿವೆ ಎಂದು ರಾಹುಲ್ ಆರೋಪಿಸಿದ್ದಾರೆ.

ಮೋದಿಗೆ ಅದಾನಿ ಎಷ್ಟು ಹಣ ನೀಡಿದ್ದಾರೆ ಎಂದು ಪ್ರಶ್ನಿಸಿದ ರಾಹುಲ್, ನೀವಿಬ್ಬರು ಎಷ್ಟು ಬಾರಿ ಒಟ್ಟಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದೀರಿ? ಎಂದು ಕೇಳಿದರು. ನಿಮ್ಮ ವಿದೇಶ ಪ್ರವಾಸ ಆರಂಭವಾದ ಬಳಿಕ ಎಷ್ಟು ಬಾರಿ ಅದಾನಿ ನಿಮ್ಮನ್ನು ಕೂಡಿಕೊಂಡಿದ್ದಾರೆ? ನಿಮ್ಮ ಭೇಟಿ ಬಳಿಕ ಎಷ್ಟು ಬಾರಿ ಅದಾನಿ ವಿದೇಶಿ ಒಪ್ಪಂದಗಳನ್ನು ಪಡೆದುಕೊಂಡಿದ್ದಾರೆ? ಹೇಳಿ ಎಂದು ರಾಹುಲ್ ಪ್ರಶ್ನಿಸಿದರು.

ಈ ಮಧ್ಯೆ, ರಾಹುಲ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಕಿರಣ್ ರಿಜಿಜು, ಈ ರೀತಿ ಆಧಾರರಹಿತ ಆರೋಪಗಳನ್ನು ಮಾಡಬೇಡಿ, ನಿಮ್ಮ ಆರೋಪಗಳಿಗೆ ಪುರಾವೆ ನೀಡಿ ಎಂದು ಹೇಳಿದರು.

ಉದ್ಯಮಿ ಗೌತಮ್ ಅದಾನಿಯವರ ವಿಮಾನದಲ್ಲಿ ಅವರ ಜೊತೆಯೇ ಮೋದಿ ಕುಳಿತಿರುವ ಚಿತ್ರವನ್ನು ತೋರಿಸಿ ಅವರ ನಡುವಿನ ಸ್ನೇಹವನ್ನು ಸದನಕ್ಕೆ ತಿಳಿಸಲು ಹೊರಟಿದ್ದ ರಾಹುಲ್ ಗಾಂಧಿ ಪ್ರಯತ್ನಕ್ಕೆ ಸಭಾಪತಿ ಓಂ ಬಿರ್ಲಾ  ಅವಕಾಶ ನಿರಾಕರಿಸಿದ್ದು, ರಾಷ್ಟ್ರಪತಿ ಭಾಷಣದ ಮೇಲೆ ಗಮನ ಕೇಂದ್ರೀಕರಿಸುವಂತೆ ಹೇಳಿದರು.

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ವಿರೋಧ ಪಕ್ಷಗಳ ಮೊದಲ ನಾಯಕರಾಗಿ ಮಾತನಾಡಿದ ರಾಹುಲ್ ಗಾಂಧಿ, ಅಗ್ನಿವೀರ್ ಯೋಜನೆಯನ್ನೂ ಪ್ರಶ್ನಿಸಿದರು. ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಅಭಿಲಾಷೆ ಹೊಂದಿರುವ ಯುವಕರಿಗೆ ಯೋಜನೆ ತೊಡಕಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆಯು ಸೇನೆಯನ್ನು ದುರ್ಬಲಗೊಳಿಸುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಭಾರತ್ ಜೋಡೊ ಯಾತ್ರೆ ಸಂದರ್ಭ, ಭಾರತದ ಆಂತರಿಕ ಧ್ವನಿ ಆಲಿಸಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಪಾದಯಾತ್ರೆಯಲ್ಲಿ ನಿರುದ್ಯೋಗ, ಬೆಲೆ ಏರಿಕೆ ಮತ್ತು ರೈತರ ಸಮಸ್ಯೆಗಳ ಬಗ್ಗೆ ಜನ ನನಗೆ ತಿಳಿಸಿದ್ದಾರೆ. ಹಲವು ರಾಜ್ಯಗಳಲ್ಲೂ ಅದಾನಿ ಹೆಸರು ಸಹ ಕಿವಿಗೆ ಬಿದ್ದಿದೆ. ಆರಂಭಿಸಿದ ಎಲ್ಲ ಉದ್ಯಮಗಳಲ್ಲೂ ಅವರು ಹೇಗೆ ಯಶಸ್ಸು ಗಳಿಸುತ್ತಿದ್ದಾರೆ ಎಂದು ಜನ ಪ್ರಶ್ನಿಸುತ್ತಿರುವುದಾಗಿ ರಾಹುಲ್ ಸದನದ ಗಮನ ಸೆಳೆದಿದ್ದಾರೆ.

ಅದಾನಿ ಸಮೂಹವು ವಂಚನೆ ಮತ್ತು ಷೇರುಗಳ ಬೆಲೆಯಲ್ಲಿ ಏರಿಕೆ ಮತ್ತು ಇಳಿಕೆ ಮಾಡುತ್ತಿದೆ ಎಂಬ ಅಮೆರಿಕ ಮೂಲದ ಸಂಸ್ಥೆ ಹಿಂಡನ್‌ಬರ್ಗ್‌ ವರದಿ ನೀಡಿತ್ತು. ಸಂಸ್ಥೆಯು ಈ ಆರೋಪಗಳನ್ನು ತಳ್ಳಿ ಹಾಕಿದ್ದರೂ ಸಹ ಸಮೂಹದ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು