ಗುರುವಾರ , ಮಾರ್ಚ್ 30, 2023
24 °C

ಅಶ್ವಿನಿ ವೈಷ್ಣವ್ ಪ್ರತಿಭಾನ್ವಿತರಾಗಿದ್ದರು: ನೂತನ ರೈಲ್ವೆ ಸಚಿವರ ಕಾಲೇಜು ಸಹಪಾಠಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Twitter

ನವದೆಹಲಿ: ನೂತನ ರೈಲ್ವೆ ಸಚಿವ ಸ್ಥಾನದ ಜೊತೆಗೆ ದೂರಸಂಪರ್ಕ ಮತ್ತು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜವಾಬ್ದಾರಿ ಹೊತ್ತಿರುವ ಮಾಜಿ ಐಎಎಸ್‌ ಅಧಿಕಾರಿ ಅಶ್ವಿನಿ ವೈಷ್ಣವ್‌ ಅವರು ಅತ್ಯಂತ ಪ್ರತಿಭಾನ್ವಿತರಲ್ಲಿ ಒಬ್ಬರು ಎಂದು ಅವರ ಸಹಪಾಠಿಗಳು ಶ್ಲಾಘಿಸಿದ್ದಾರೆ.

'ವಾರ್ಟನ್‌ನ ಎಂಬಿಎ ಕ್ಲಾಸ್‌ನಲ್ಲಿ ಅಶ್ವಿನಿ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು. ಅವರು ನಮ್ಮ ಕೆಲವು ಸಹಪಾಠಿಗಳ ಪೈಕಿ ಹಿರಿಯರಾಗಿದ್ದರು. ವಾರ್ಟನ್‌ಗೆ ಬರುವ ಮೊದಲೇ ಸಾಕಷ್ಟು ತಿಳಿದುಕೊಂಡವರಾಗಿದ್ದರು. ಹಾಗಾಗಿ ನಮ್ಮ ಇಡೀ ಸಹಪಾಠಿಗಳ ವೃಂದ ಅವರಿಂದ ಹಲವು ವಿಚಾರಗಳನ್ನು ಕಲಿತುಕೊಂಡೆವು' ಎಂದು ಸಿಂಗಾಪುರ ಮೂಲದ ನಿಪುನ್‌ ಮೆಹ್ರಾ ತಿಳಿಸಿದ್ದಾರೆ.

ನಿಪುನ್‌ ಮೆಹ್ರಾ ಅವರು ಇ-ಕಾಮರ್ಸ್‌ ಮತ್ತು ಫೈನ್‌ಟೆಕ್‌ ಸ್ಟಾರ್ಟಾಪ್‌ ಉಲಾದ ಸಹ ಸಂಸ್ಥಾಪಕ ಮತ್ತು ಮುಖ್ಯಸ್ಥರಾಗಿದ್ದಾರೆ. ಪೆನ್ಸಿಲ್ವೇನಿಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯ ವಾರ್ಟನ್‌ ಸ್ಕೂಲ್‌ನಲ್ಲಿ ಎಂಬಿಎ ಓದುತ್ತಿದ್ದಾಗ ಮೆಹ್ರಾ ಮತ್ತು ಅಶ್ವಿನಿ ಸಹಪಾಠಿಗಳಾಗಿದ್ದರು ಎಂದು 'ಬ್ಲೂಮ್‌ಬರ್ಗ್‌' ವರದಿ ಮಾಡಿದೆ.

51 ವರ್ಷದ ಅಶ್ವಿನಿ ವೈಷ್ಣವ್‌ ಅವರು ಖಗರ್‌ ಪುರ ಐಐಟಿಯಿಂದ ಎಂ.ಟೆಕ್‌ ಪದವಿ ಪಡೆದಿದ್ದಾರೆ. 1994ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯೂ ಹೌದು. ಜಾಗತಿಕ ಮಟ್ಟದ ಜನರಲ್‌ ಎಲೆಕ್ಟ್ರಿಕಲ್ಸ್‌ ಮತ್ತು ಸೀಮನ್ಸ್‌ನಂತಹ ಪ್ರಮುಖ ಕಂಪನಿಗಳನ್ನು ಮುನ್ನಡೆಸಿದ ಅನುಭವಿ. ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಯೋಜನೆಗೆ ಅನುಪಮ ಕೊಡುಗೆ ನೀಡಿದ್ದಾರೆ. ಅಟಲ್‌ ಬಿಹಾರಿ ವಾಜಪೇಯಿ ಅವರ ಆಡಳಿತ ಅವಧಿಯಲ್ಲಿ ಪ್ರಧಾನಿ ಕಚೇರಿಯಲ್ಲಿ ಕೆಲಸ ನಿರ್ವಹಿಸಿದ ಅನುಭವವು ಅಶ್ವಿನಿ ವೈಷ್ಣವ್‌ ಅವರಿಗಿದೆ.

ರವಿಶಂಕರ್‌ ಪ್ರಸಾದ್‌ ಸಚಿವರಾಗಿದ್ದಷ್ಟು ಕಾಲ ಅಮೆರಿಕ ಮೂಲದ ದಿಗ್ಗಜ ಸಾಮಾಜಿಕ ತಾಣಗಳಾದ ಫೇಸ್ಬುಕ್‌, ಟ್ವಿಟರ್‌ ಜೊತೆ ಸಂಘರ್ಷದಲ್ಲಿ ತೊಡಗಿಕೊಂಡಿದ್ದರು. ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆನ್‌ಲೈನ್‌ ಮಾರುಕಟ್ಟೆಗಳಾಗಿ ಪರಿವರ್ತನೆ ಹೊಂದಿರುವ ಇವುಗಳನ್ನು ಸಮರ್ಪಕವಾಗಿ ನಿಭಾಯಿಸುವ ಜವಾಬ್ದಾರಿ ವೈಷ್ಣವ್‌ ಅವರ ಮೇಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು