ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆಗೆಂದು ಕೂಡಿಟ್ಟ ₹75 ಲಕ್ಷ ಬಾಲಕಿಯರ ವಸತಿಗೃಹ ನಿರ್ಮಾಣಕ್ಕೆ ಕೊಟ್ಟ ವಧು

Last Updated 26 ನವೆಂಬರ್ 2021, 5:31 IST
ಅಕ್ಷರ ಗಾತ್ರ

ಜೈಪುರ: ವರದಕ್ಷಿಣೆಗೆಂದುಕೂಡಿಟ್ಟ ಸುಮಾರು ₹75 ಲಕ್ಷವನ್ನು ಬಾಲಕಿಯರ ವಸತಿಗೃಹ ನಿರ್ಮಿಸಲು ಕೊಡುವಂತೆ ವಧುವೊಬ್ಬರು ತಂದೆಗೆ ಕೋರಿದ ಅಪರೂಪದ ಘಟನೆ ರಾಜಸ್ಥಾನದ ಬಾರ್ಮೆರ್‌ನಲ್ಲಿ ನಡೆದಿದೆ.

ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಬಾರ್ಮೆರ್‌ ನಗರದ ವಧು ಅಂಜಲಿ ಕನ್ವರ್‌, ವರದಕ್ಷಿಣೆಯ ದುಡ್ಡನ್ನು ವಸತಿಗೃಹ ನಿರ್ಮಾಣಕ್ಕೆ ಬಳಕೆ ಮಾಡಲು ನಿರ್ಧರಿಸಿದ್ದಾರೆ. ಕಿಶೋರ್‌ ಸಿಂಗ್‌ ಕಾನೊಡ್‌ ಅವರ ಮಗಳಾದ ಅಂಜಲಿ ಕನ್ವರ್‌ ನವೆಂಬರ್‌ 21ರಂದು ಪ್ರವೀಣ್‌ ಸಿಂಗ್‌ರನ್ನು ಮದುವೆಯಾಗಿದ್ದಾರೆ.

'ದೈನಿಕ್‌ ಭಾಸ್ಕರ್‌' ಪತ್ರಿಕೆ ವರದಿ ಪ್ರಕಾರ, ಮದುವೆಗೆ ಮುನ್ನ ವರದಕ್ಷಿಣೆಗೆಂದು ತೆಗೆದಿರಿಸಿದ್ದ ದುಡ್ಡನ್ನು ಬಾಲಕಿಯರ ವಸತಿ ಗೃಹಕ್ಕೆ ನೀಡಬೇಕು ಎಂದು ತಂದೆ ಕಿಶೋರ್‌ ಸಿಂಗ್‌ ಕಾನೊಡ್‌ ಅವರಿಗೆ ಮಗಳು ಬೇಡಿಕೆ ಇಟ್ಟಿದ್ದಾರೆ. ಅದರಂತೆ ₹75 ಲಕ್ಷವನ್ನು ಮಗಳ ಕೋರಿಕೆಯಂತೆ ಬಾಲಕಿಯ ವಸತಿ ಗೃಹ ನಿರ್ಮಾಣ ಮಾಡಲು ದಾನ ಮಾಡಿದ್ದಾರೆ.

ವಿವಾಹದ ದಿನ ಸ್ಥಳೀಯ ಮಠದ ಮಹಾಂತ ಪ್ರತಾಪ್ ಪುರಿ ಅವರನ್ನು ಭೇಟಿ ಮಾಡಿದ ಅಂಜಲಿ ಪತ್ರದ ಮೂಲಕ ತನ್ನ ಕೋರಿಕೆಯನ್ನು ತಿಳಿಸಿದ್ದರು. ಸಮಾರಂಭದಲ್ಲೇ ಅದನ್ನು ಎಲ್ಲರ ಎದುರು ಮಹಾಂತ ಪುರಿ ಓದಿದರು. ನೆರೆದಿದ್ದ ಎಲ್ಲರೂ ದೊಡ್ಡ ಚಪ್ಪಾಳೆಯೊಂದಿಗೆ ಅಂಜಲಿ ಅವರನ್ನು ಪುರಸ್ಕರಿಸಿದರು.

ನಂತರ ತಂದೆ ಮಗಳಿಗೆ ಖಾಲಿ ಬ್ಯಾಂಕ್‌ ಚೆಕ್‌ ಹಾಳೆಯನ್ನು ನೀಡಿ, ದಾನದ ಮೊತ್ತವನ್ನು ಬರೆಯುವಂತೆ ಸೂಚಿಸಿದ್ದರು. ಇದಕ್ಕೂ ಮೊದಲು ಕಾನೊಡ್‌ ಅವರು ಎನ್‌ಎಚ್‌68ನಲ್ಲಿ ನಿರ್ಮಾಣಗೊಳ್ಳುತ್ತಿರುವ ಬಾಲಕಿಯರ ವಸತಿ ಗೃಹಕ್ಕೆ ₹1 ಕೋಟಿ ನೀಡಿದ್ದರು. ಕಾಮಗಾರಿ ಪೂರ್ಣಗೊಳ್ಳಲು ₹50-75 ಲಕ್ಷ ಅಗತ್ಯವಿತ್ತು. ಇದೀಗ ವರದಕ್ಷಿಣೆಗೆಂದು ತೆಗೆದಿರಿಸಿದ ಮೊತ್ತವನ್ನು ನೀಡಿದ್ದರಿಂದ ಹಾಸ್ಟೆಲ್‌ ನಿರ್ಮಾಣ ಕಾರ್ಯ ಸುಗಮವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಬಾಲಕಿಯರ ವಸತಿ ಗೃಹ ನಿರ್ಮಾಣಕ್ಕೆ ಕಾನೊಡ್‌ ಅವರು ಒಟ್ಟು ₹1 ಕೋಟಿ 75 ಲಕ್ಷ ನೀಡಿದ್ದಾರೆ.

ಕಿಶೋರ್‌ ಸಿಂಗ್‌ ಕಾನೊಡ್‌ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಪತ್ರಿಕೆಯ ವರದಿ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT