ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ವಿಚಾರ | ರಾಜಸ್ಥಾನ: ಪ್ರತಿಭಟನೆ ಕೈಬಿಟ್ಟ ಗುಜ್ಜಾರ್‌ ಸಮುದಾಯ

Last Updated 12 ನವೆಂಬರ್ 2020, 8:28 IST
ಅಕ್ಷರ ಗಾತ್ರ

ಜೈಪುರ: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಮಾತುಕತೆಯಲ್ಲಿ ಒಮ್ಮತ ಮೂಡಿದ ಕಾರಣ, ಹನ್ನೊಂದು ದಿನಗಳಿಂದ ಗುಜ್ಜಾರ್‌ ಸಂಘಟನೆ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಸಮುದಾಯದ ಪ್ರಮುಖರು ತಿಳಿಸಿದ್ದಾರೆ.

ಸಂವಿಧಾನದ 9ನೇ ಶೆಡ್ಯೂಲ್ ಪ್ರಕಾರ ರಾಜ್ಯ ಸರ್ಕಾರವು ಗುಜ್ಜಾರ್‌ ಸಮುದಾಯಕ್ಕೆ ಮೀಸಲಾತಿ ನೀಡಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಬಾಕಿ ಉಳಿದಿರುವ ನೇಮಕಾತಿ ಪ್ರಕ್ರಿಯೆಯಲ್ಲಿ, ಅತ್ಯಂತ ಹಿಂದುಳಿದ ವರ್ಗಗಳಿಗೆ ಶೇ 5ರ ಕೋಟಾ ಸೌಲಭ್ಯವನ್ನು ನೀಡಬೇಕು ಎಂದು ಒತ್ತಾಯಿಸಿ ಗುಜ್ಜಾರ್‌ ಆರಕ್ಷಣ್‌ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತ್ತು. ನವೆಂಬರ್ 1 ರಂದು ಆರಂಭವಾಗಿದ್ದ ಈ ಪ್ರತಿಭಟನೆ ನಿನ್ನೆಯವರೆಗೂ(ನ.11) ಮುಂದುರಿದಿತ್ತು.

ಈ ಪ್ರತಿಭಟನೆಯಿಂದಾಗಿ ರಾಜ್ಯದ ಕೆಲವು ಭಾಗಗಳಲ್ಲಿ ಮೊಬೈಲ್‌ ಮತ್ತು ಇಂಟರ್ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಅವುಗಳನ್ನು ಪುನರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯಸರ್ಕಾರದೊಂದಿಗೆ ಮೂಡಿದ ಒಮ್ಮತದ ವಿಚಾರವನ್ನು ಕೇಳಿದ ಮೇಲೆ, ರೈಲ್ವೆ ಹಳಿಗಳ ಮೇಲೆ ಕುಳಿತು ಧರಣಿ ನಡೆಸುತ್ತಿದ್ದವರು ಗುರುವಾರ ಮುಂಜಾನೆ ಅಲ್ಲಿಂದ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಸಮುದಾಯದ ಮುಖಂಡರು ಮತ್ತು ಸಚಿವ ಸಂಪುಟದೊಂದಿಗೆ ನಡೆದ ಮ್ಯಾರಥಾನ್ ಸಭೆಯ ನಂತರ, ಕರ್ನಲ್ ಕಿರೋರಿ ಸಿಂಗ್ ಬೈನ್ಸ್ಲಾ ಸೇರಿದಂತೆ ಗುರ್ಜಾರ್ ನಿಯೋಗ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿತ್ತು.

‘ಬೇಡಿಕೆಗಳ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಅವುಗಳನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಒಪ್ಪಿದೆ. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳುತ್ತದೆ ಎಂಬ ನಂಬಿಕೆ ನಮಗಿದೆ. ಪ್ರತಿಭಟನೆ ರದ್ದುಗೊಳಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ‘ ಎಂದು ಗುಜ್ಜಾರ್‌ ನಾಯಕ ವಿಜಯ್ ಬೈನ್ಸ್ಲಾ ಸಭೆಯ ನಂತರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT