ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಲರ್‌ ಕನ್ಹಯ್ಯ ಲಾಲ್‌ ಹತ್ಯೆ: ಮತ್ತಿಬ್ಬರ ಬಂಧನ

ಆರ್‌ಟಿಒಗೆ ₹1,000 ಪಾವತಿಸಿ ಫ್ಯಾನ್ಸಿ ಸಂಖ್ಯೆ ಪಡೆದಿದ್ದ ಹಂತಕ ಅನ್ಸಾರಿ
Last Updated 2 ಜುಲೈ 2022, 2:40 IST
ಅಕ್ಷರ ಗಾತ್ರ

ಉದಯಪುರ‌: ಟೈಲರ್‌ಕನ್ಹಯ್ಯ ಲಾಲ್‌ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರನ್ನು ಮೊಹ್ಸಿನ್‌ ಮತ್ತು ಆಸಿಫ್‌ ಎಂದು ಗುರುತಿಸಲಾಗಿದೆ. ‘ಈ ಇಬ್ಬರು ಆರೋಪಿಗಳು ಅನ್ಸಾರಿ ಮತ್ತು ಗೌಸ್‌ ಜತೆಗೆ ಕನ್ಹಯ್ಯ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ಕನ್ಹಯ್ಯ ಲಾಲ್‌ ಅವರನ್ನು ಮಂಗಳವಾರ ಅವರ ಅಂಗಡಿಯಲ್ಲಿ ಹಂತಕರಾದ ರಿಯಾಜ್‌ ಅನ್ಸಾರಿ ಮತ್ತು ಗೌಸ್‌ ಮಹಮ್ಮದ್‌ ಕ್ರೂರವಾಗಿ ಶಿರಚ್ಛೇದ ಮಾಡಿದ್ದರು. ಘಟನೆ ನಡೆದ ಕೆಲವೇ ಗಂಟೆಯಲ್ಲಿ ಈ ಇಬ್ಬರು ಆರೋಪಿಗಳನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು.

ಭದ್ರತೆ ಕೇಳಿದ ಜೈನರು:ಕನ್ಹಯ್ಯ ಹತ್ಯೆಯ ನಂತರ ಪ್ರಾಣ ಭೀತಿಯಲ್ಲಿರುವ ಉದಯಪುರದ ಸ್ಥಳೀಯ ಜೈನ ಸಮುದಾಯದ ಕುಟುಂಬಗಳು ಹೆಚ್ಚಿನ ಭದ್ರತೆ ಒದಗಿಸುವಂತೆ ಶುಕ್ರವಾರ ಬೇಡಿಕೆ ಇಟ್ಟಿದ್ದಾರೆ.

ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಜೈನ ಸಮುದಾಯದ ಪರವಾಗಿ ಮನವಿ ಪತ್ರ ಸಲ್ಲಿಸಿರುವ ಟೈರ್‌ ವ್ಯಾಪಾರಿ ಟೈರ್‌ ವ್ಯಾಪಾರಿ ನಿತಿನ್‌ ಜೈನ್‌ ಅವರು, ಸೆಕ್ಟರ್‌ 11ರಲ್ಲಿ ವಾಸವಿರುವ ಜೈನರ ಮನೆಗಳಿಗೆ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

‘2611’ ಸಂಖ್ಯೆಯ ಬೈಕ್‌ ಬಳಕೆ– ಮುಂಬೈ ದಾಳಿ ಸಂಕೇತ:

ಕನ್ಹಯ್ಯ ಲಾಲ್‌ ಅವರ ಶಿರಚ್ಛೇದ ಮಾಡಿದ ನಂತರ ಆರೋಪಿಗಳು‘2611’ನೋಂದಣಿ ಸಂಖ್ಯೆಯ ಬೈಕ್‌ನಲ್ಲಿ ಪರಾರಿಯಾಗಿದ್ದರು.ಆರ್‌ಜೆ 27 ಎಎಸ್‌ 2611 ನೋಂದಣಿಯ ಬೈಕಿನಲ್ಲಿರುವ ‘2611’ಸಂಖ್ಯೆಯು2008ರಲ್ಲಿ ಪಾಕಿಸ್ತಾನದ ಉಗ್ರರು ನಡೆಸಿದ 26/11ರ ಮುಂಬೈ ದಾಳಿಯನ್ನು ಸಂಕೇತಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಹಂತಕರಿಯಾಜ್‌ ಅನ್ಸಾರಿ 2013ರಲ್ಲಿ ಬೈಕ್‌ ಖರೀದಿಸಿದಾಗ ಆರ್‌ಟಿಒಗೆ ₹1,000 ಶುಲ್ಕ ಪಾವತಿಸಿ ‘2611’ ನೋಂದಣಿ ಸಂಖ್ಯೆ (ಫ್ಯಾನ್ಸಿ ನಂಬರ್‌) ಪಡೆದುಕೊಂಡಿದ್ದಾನೆ. ಬೈಕ್‌ ಅನ್ನು ಮುಂದಿನ ಕ್ರಮಕ್ಕಾಗಿ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ’ ಎಂದುರಾಜ್‌ಸಮಂದ್‌ ಪೊಲೀಸ್‌ ಠಾಣಾಧಿಕಾರಿ ತಿಳಿಸಿದ್ದಾರೆ.

ಐಜಿ, ಎಸ್‌ಪಿ ಸಹಿತ 32 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಜೈಪುರ: ದೇಶದಾದ್ಯಂತ ಆಕ್ರೋಶ, ಪ್ರತಿಭಟನೆಗೆ ಕಾರಣವಾಗಿರುವ ಉದಯಪುರದ ಘಟನೆಯ ನಂತರ ಇಡೀ ಪೊಲೀಸ್‌ ಇಲಾಖೆಗೆ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ ದೊಡ್ಡ ಸರ್ಜರಿ ಮಾಡಿದೆ.

ಉದಯಪುರದಪೊಲೀಸ್ ಮಹಾನಿರೀಕ್ಷಕ (ಐಜಿ) ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಹಿತ 32 ಐಪಿಎಸ್‌ ಅಧಿಕಾರಿಗಳನ್ನು ರಾಜ್ಯದ ಸಿಬ್ಬಂದಿ ಇಲಾಖೆ ಎತ್ತಂಗಡಿ ಮಾಡಿದೆ. ಹಿಂಗ್ಲಾಜ್‌ ದನ್‌ ಅವರನ್ನು ಐಜಿ ಹುದ್ದೆಯಿಂದ ತೆಗೆದು, ನಾಗರಿಕ ಹಕ್ಕುಗಳ ಐಜಿ ಹುದ್ದೆಗೆ ವರ್ಗಾಯಿಸಲಾಗಿದೆ. ಉಗ್ರ ನಿಗ್ರಹ ದಳದ (ಎಟಿಎಸ್‌) ಐಜಿ ಪ್ರಫುಲ್‌ ಕುಮಾರ್‌ ಅವರನ್ನು ನೂತನ ಐಜಿಯಾಗಿ ನೇಮಕ ಮಾಡಲಾಗಿದೆ.

ಉದಯಪುರದ ಎಸ್‌ಪಿಯಾಗಿದ್ದ ಮನೋಜ್‌ ಕುಮಾರ್‌ ಅವರನ್ನು ಕೋಟಾದ ರಾಜಸ್ಥಾನ ಶಶಸ್ತ್ರ ಪಡೆಯ (ಆರ್‌ಪಿಎ) ಎರಡನೇ ಬೆಟಾಲಿಯನ್‌ಗೆ ವರ್ಗಾವಣೆ ಮಾಡಲಾಗಿದೆ. ಇವರ ಸ್ಥಾನಕ್ಕೆ ಅಜ್ಮೀರದಲ್ಲಿ ಎಸ್‌ಪಿಯಾಗಿದ್ದ ವಿಕಾಸ್‌ ಕುಮಾರ್‌ ಅವರನ್ನು ತರಲಾಗಿದ್ದು, ಅವರು ಸದ್ಯ ಅಧಿಕಾರ ವಹಿಸಿಕೊಂಡಿದ್ದಾರೆ.

‘ದಾವತ್‌ –ಎ– ಇಸ್ಲಾಮಿಗೆಹಂತಕರ ನಂಟಿಲ್ಲ’

ಕರಾಚಿ/ಲಾಹೋರ್‌: ಭಾರತದ ರಾಜಸ್ಥಾನದ ಟೈಲರ್‌ ಕನ್ಹಯ್ಯ ಲಾಲ್‌ ಹತ್ಯೆಯ ಹಂತಕರೊಂದಿಗೆ ಸಂಪರ್ಕ ಇರುವುದನ್ನು ಪಾಕಿಸ್ತಾನ ಮೂಲದ ದಾವತ್‌ –ಎ– ಇಸ್ಲಾಮಿ ಸಂಘಟನೆ ಶುಕ್ರವಾರ ನಿರಾಕರಿಸಿದೆ.

‘ಪಾಕಿಸ್ತಾನದ ಬಹುಸಂಖ್ಯಾತ ಸುನ್ನಿ ಮುಸ್ಲಿಮರ ಸಂಘಟನೆಯಾದದಾವತ್‌ –ಎ– ಇಸ್ಲಾಮಿ ಯಾವುದೇ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿಲ್ಲ. ಇದು ಶಿಕ್ಷಣ, ಶಾಂತಿ ಬೋಧನೆ, ಮಿಷನರಿ ಮತ್ತು ಚಾರಿಟಿ ಸಂಸ್ಥೆ’ ಎಂದುಸಂಘಟನೆಯ ಹಿರಿಯ ನಾಯಕ ಮೌಲಾನಾ ಮಹಮೂದ್‌ ಖಾದ್ರಿ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT