ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ಅಮಾನತು ಗದ್ದಲ: ರಾಜ್ಯಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ

Last Updated 17 ಡಿಸೆಂಬರ್ 2021, 8:52 IST
ಅಕ್ಷರ ಗಾತ್ರ

ನವದೆಹಲಿ: 12 ಸಂಸದರ ಅಮಾನತು ವಿಚಾರವಾಗಿ ಸರ್ಕಾರ ಮತ್ತು ವಿರೋಧ ಪಕ್ಷಗಳು ಒಮ್ಮತದ ನಿರ್ಧಾರಕ್ಕೆ ಬರಬೇಕೆಂದು ಸಭಾಪತಿ ಎಂ ವೆಂಕಯ್ಯ ನಾಯ್ಡು ಒತ್ತಾಯಿಸಿದರೂ ಸಹ ಪ್ರತಿಪಕ್ಷಗಳ ಗದ್ದಲ ಮುಂದುವರಿದಿದ್ದರಿಂದ ರಾಜ್ಯಸಭೆ ಕಲಾಪವನ್ನು ಶುಕ್ರವಾರ ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.

ಸಚಿವ ಪೀಯೂಷ್ ಗೋಯಲ್ ಮತ್ತು ವಿರೋಧ ಪಕ್ಷದ ಕೆಲವು ಹಿರಿಯ ನಾಯಕರನ್ನು ಭೇಟಿ ಮಾಡಿದ ಸಭಾಪತಿ ವೆಂಕಯ್ಯ ನಾಯ್ಡು, ಈ ವಿಚಾರವಾಗಿ ಚರ್ಚೆ ನಡೆಸುವಂತೆ ಮನವಿ ಮಾಡಿದ್ದರು.

'ಇಂದು, ನಾನು ಸದನದ ನಾಯಕರೊಂದಿಗೆ ಮತ್ತು ವಿರೋಧ ಪಕ್ಷದ ಕೆಲವು ಹಿರಿಯ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದೇನೆ. ಸದನವು ಸುಗಮವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ದಯವಿಟ್ಟು ಒಂದು ಒಮ್ಮತಕ್ಕೆ ಬರುವಂತೆ ನಾನು ಪ್ರತಿಯೊಬ್ಬರಿಗೂ ಮನವಿ ಮಾಡುತ್ತೇನೆ' ಎಂದು ಅವರು ಹೇಳಿದರು.

'ಚರ್ಚೆಗೆ ಅನುಕೂಲವಾಗುವಂತೆ, ಸೋಮವಾರಕ್ಕೆ ನಾನು ಸದನವನ್ನು ಮುಂದೂಡುತ್ತಿದ್ದೇನೆ' ಎಂದು ಘೋಷಿಸಿದರು.

ಕಳೆದ ಹಲವು ದಿನಗಳಿಂದ ಸದನದ ಕಲಾಪಕ್ಕೆ ಪ್ರತಿಪಕ್ಷಗಳು ಅಡ್ಡಿಪಡಿಸುತ್ತಿವೆ. 12 ಮಂದಿ ಸಂಸದರ ಅಮಾನತು ವಿಚಾರವಾಗಿ ಮೇಲ್ಮನೆಯಲ್ಲಿ ಹಗ್ಗಜಗ್ಗಾಟ ಮುಂದುವರಿದಿದ್ದು, ಅಮಾನತು ಹಿಂಪಡೆಯುವಂತೆ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿರುವುದರಿಂದ ಕಲಾಪ ಅಸ್ತವ್ಯಸ್ತಗೊಂಡಿದೆ.

ಸಂಸದರ ಅಮಾನತು ಕ್ರಮವು ಪ್ರಜಾಪ್ರಭುತ್ವ ವಿರೋಧಿ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದರೆ, ಸಂಸದರು ತಮ್ಮ ವರ್ತನೆಗೆ ಮೊದಲು ಕ್ಷಮೆಯಾಚಿಸಬೇಕು, ಬಳಿಕ ಅಮಾನತು ಆದೇಶವನ್ನು ಹಿಂಪಡೆಯಲಾಗುತ್ತದೆ ಎಂದು ಸರ್ಕಾರ ಪಟ್ಟು ಹಿಡಿದಿದೆ.

ಕಳೆದ ಮುಂಗಾರು ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಆಗಸ್ಟ್ 11 ರಂದು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯ 12 ಸದಸ್ಯರನ್ನು ಅಮಾನತು ಮಾಡಲಾಗಿತ್ತು.

ಅಮಾನತುಗೊಂಡವರಲ್ಲಿ ಕಾಂಗ್ರೆಸ್‌ನ ಸೈಯದ್ ನಾಸೀರ್ ಹುಸೇನ್, ಅಖಿಲೇಶ್ ಪ್ರಸಾದ್ ಸಿಂಗ್, ಪೌಲೊ ದೇವಿ ನೇತಮ್, ಛಾಯಾ ವರ್ಮ, ರಿಪುನ್ ಬೋರಾ ಮತ್ತು ರಾಜಮಣಿ ಪಟೇಲ್ ಸೇರಿದ್ದಾರೆ. ಪ್ರಿಯಾಂಕಾ ಚತುರ್ವೇದಿ, ಅನಿಲ್ ದೇಸಾಯಿ ಶಿವಸೇನಾ ಸಂಸದರು. ಎಲಾಮರಮ್ ಕರೀಮ್ ಸಿಪಿಐಎಂ, ಬಿನಾಯ್ ವಿಶ್ವಂ ಸಿಪಿಐ ಮತ್ತು ದೋಲಾ ಸೇನಾ ಹಾಗೂ ಶಾಂತ ಛೇತ್ರಿ ತೃಣಮೂಲ ಕಾಂಗ್ರೆಸ್‌ ಸಂಸದರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT