ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಪಥದಿಂದ ಸೇನಾ ನೇಮಕಾತಿ ಬದಲಾಗದು: ಅನಿಲ್‌ ಪುರಿ

Last Updated 21 ಜೂನ್ 2022, 13:54 IST
ಅಕ್ಷರ ಗಾತ್ರ

ನವದೆಹಲಿ:‘ಸೇನಾ ನೇಮಕಾತಿ ಪ್ರಕ್ರಿಯೆಯು ಯಾವುದೇ ಬದಲಾವಣೆ ಇಲ್ಲದೇ ಮುಂದುವರಿಯಲಿದೆ. ಸೇನೆಯಲ್ಲಿನ ಸಾಂಪ್ರದಾಯಿಕ ರೆಜಿಮೆಂಟ್‌ ವ್ಯವಸ್ಥೆಯೂ ಯಥಾವತ್‌ ಇರಲಿದೆ’ ಎಂದುಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಕೇಂದ್ರದ ಹೊಸ ಯೋಜನೆ ‘ಅಗ್ನಿಪಥ’ದಿಂದ ಸೇನಾ ನೇಮಕಾತಿ ಪ್ರಕ್ರಿಯೆ ಬಗ್ಗೆ ಅನುಮಾನಗಳು ಮೂಡಿರುವ ನಡುವೆ, ಅನಿಲ್‌ ಪುರಿ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

‘ಭಾರತೀಯ ಸೇನೆಯ ಮೂರೂ ಪಡೆಗಳ ಸೇವೆಗೆ ಯುವಜನರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳುವ ‘ಅಗ್ನಿಪಥ’ ಯೋಜನೆ ಜಾರಿಗೆ ಬರುವ ಮೊದಲು ಮೂರೂ ಸೇನಾ ಪಡೆಗಳು ಮತ್ತು ರಕ್ಷಣಾ ಸಚಿವಾಲಯದೊಂದಿಗೆ ದೀರ್ಘ ಸಮಾಲೋಚನೆ ನಡೆಸಲಾಗಿದೆ. ಸರ್ಕಾರದ ಹಲವು ಇಲಾಖೆಗಳ ನಡುವೆಯೂ ಚರ್ಚೆಯಾಗಿದೆ. 1989ರಿಂದ ವಿವಿಧ ಸಮಿತಿಗಳು ಈ ಬಗ್ಗೆ ಶಿಫಾರಸುಗಳನ್ನೂ ಮಾಡಿವೆ.ಇದು ಅತ್ಯಂತ ಅಗತ್ಯವಾದ ಸುಧಾರಣೆ’ ಎಂದು ಅವರು ಹೇಳಿದರು.

‘ಬೆಂಕಿ ಹಚ್ಚಲು ಮತ್ತು ಹಿಂಸಾಚಾರಕ್ಕೆಸಶಸ್ತ್ರ ಪಡೆಗಳಲ್ಲಿ ಜಾಗವಿಲ್ಲ. ಯೋಜನೆ ವಿರೋಧಿಸಲು ಯುವಕರುಹಲವು ಸ್ಥಳಗಳಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಅಗ್ನಿಪಥದಡಿ ನೇಮಕಕ್ಕೆ ಅರ್ಜಿ ಸಲ್ಲಿಸುವವರು ಯಾವುದೇ ಹಿಂಸಾಚಾರದಲ್ಲಿ ಭಾಗವಾಗಿಲ್ಲವೆಂದು ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಪೊಲೀಸ್ ಪರಿಶೀಲನೆಯು ಯಾವಾಗಲೂ ನೇಮಕಾತಿ ಪ್ರಕ್ರಿಯೆಯ ಭಾಗವಾಗಿದೆ’ ಎಂದು ಪುರಿ ಒತ್ತಿಹೇಳಿದರು.

ಈ ಯೋಜನೆಯಡಿ ನೇಮಕವಾದವರಿಗೆ ಸಿಗುವ ‘ಅಗ್ನಿವೀರರು’ ಎಂಬ ಪದನಾಮವು ಶೌರ್ಯ ಪ್ರಶಸ್ತಿಗಳಿಗೆ ಅರ್ಹತೆಯಾಗಲಿದೆ. ಸಶಸ್ತ್ರ ಪಡೆಗಳಿಗೆ ಅತ್ಯುತ್ತಮ ಪ್ರತಿಭೆಗಳನ್ನು ಸೇರಿಸಲು ಈ ಯೋಜನೆ ಪರಿಚಯಿಸಲಾಗುತ್ತಿದೆ. ಸೇನೆಯ ಸಾಮಾರ್ಥ್ಯ ಕ್ಷೀಣಿಸುವುದಿಲ್ಲ. ಬದಲಾಗಿ ಸೇನೆಗೆ ತಾರುಣ್ಯ ತುಂಬಲಿದೆಎಂದು ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಅಗ್ನಿಪಥ ಯೋಜನೆಯು ವಿಶ್ವಾಸಾರ್ಹವಾದ ಉಪಕ್ರಮ. ಇದರ ಬಗ್ಗೆ ಇತ್ತೀಚೆಗೆ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಆದರೆ, ಸೇನೆ ಸೇರುವ ತಯಾರಿಯಲ್ಲಿರುವ ಯುವಕರು ಹಲವು ಕಡೆ ದೈಹಿಕ ಚಟುವಟಿಕೆಗಳಿಗೆ ಮರಳಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

ಅಗ್ನಿವೀರರಿಗೆ ‘ಉದ್ಯೋಗ ಖಾತ್ರಿ’: ಖಟ್ಟರ್‌ ಭರವಸೆ

ಚಂಡೀಗಢ: ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳ ಅವಧಿಗೆ ಸೇವೆ ಸಲ್ಲಿಸಿದ ನಂತರ ಅಗ್ನಿವೀರರಿಗೆಹರಿಯಾಣ ಸರ್ಕಾರವು ‘ಉದ್ಯೋಗಖಾತ್ರಿ’ ನೀಡಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ಘೋಷಿಸಿದ್ದಾರೆ.

ಭಿವಾನಿಯಲ್ಲಿ ನಡೆದ ರಾಜ್ಯ ಮಟ್ಟದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಖಟ್ಟರ್, ‘ಹರಿಯಾಣದಲ್ಲಿ ಸರ್ಕಾರಿ ಸೇವೆಗಳಿಗೆ ಸೇರಲು ಬಯಸುವ ಅಗ್ನಿವೀರರಿಗೆ ನೌಕರಿ ಖಾತರಿ ನೀಡಲಾಗುವುದು.ಗ್ರೂಪ್ ಸಿ ಹುದ್ದೆಗಳು ಮತ್ತು ಪೊಲೀಸ್ ಪಡೆಗಳಲ್ಲಿ ಅಗ್ನಿವೀರರಿಗೆ ನೌಕರಿ ನೀಡುತ್ತೇವೆ. ಇದು ಖಚಿತ’ ಎಂದು ಹೇಳಿದರು.

ಭರವಸೆಯ ನೈಜತೆ ಸಾಬೀತುಪಡಿಸಿ: ಅಗ್ನಿಪಥ ಬೆಂಬಲಿಗರಿಗೆ ಅಖಿಲೇಶ್ ಸಲಹೆ

ಲಖನೌ: ‘ಅಗ್ನಿಪಥ’ ವಿರೋಧಿಸಿ ಪ್ರತಿಭಟಿಸುತ್ತಿರುವ ಯುವಕರ ವಿಶ್ವಾಸ ಗಳಿಸುವ ಮೊದಲು, ಉದ್ಯಮಿಗಳು ತಮ್ಮ ಕಂಪನಿಗಳಲ್ಲಿ ನಿವೃತ್ತ ಸೈನಿಕರಿಗೆ ಉದ್ಯೋಗ ನೀಡಬೇಕು ಎಂದುಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮಂಗಳವಾರ ಒತ್ತಾಯಿಸಿದ್ದಾರೆ.

ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್ ಮಹೀಂದ್ರಾ, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, ಆರ್‌ಪಿಜಿ ಎಂಟರ್‌ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ ಮತ್ತು ಬಯೋಕಾನ್ ಲಿಮಿಟೆಡ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರಂತಹ ಉದ್ಯಮಿಗಳುಅಗ್ನಿಪಥ ಬೆಂಬಲಿಸಿದ ನಂತರ ಯಾದವ್ ಈ ಹೇಳಿಕೆ ನೀಡಿದ್ದಾರೆ.

‘ಭವಿಷ್ಯದಲ್ಲಿ ತಮ್ಮ ಕಂಪನಿಗಳು ಮತ್ತು ಕಚೇರಿಗಳಲ್ಲಿ ಅಗ್ನಿವೀರರಿಗೆ ಉದ್ಯೋಗದ ಭರವಸೆ ನೀಡುತ್ತಿರುವ ಗಣ್ಯರಿಗೆ ಸಹಕರಿಸಲು ಬಯಸುತ್ತೇವೆ.ನಿವೃತ್ತ ಸೈನಿಕರ ಪಟ್ಟಿಯನ್ನೂ ಕಳುಹಿಸುತ್ತೇವೆ.ನಾಲ್ಕು ವರ್ಷಗಳ ಸೇವೆಯ ನಂತರ ಅಗ್ನಿವೀರರನ್ನು ನಂಬುವಂತೆ ನಿವೃತ್ತ ಸೈನಿಕರನ್ನೂ ತಕ್ಷಣವೇ ತಮ್ಮ ಕಂಪನಿಗಳಲ್ಲಿ ನೇಮಿಸಿಕೊಳ್ಳಬೇಕು. ಆ ಮೂಲಕ ತಮ್ಮ ಭರವಸೆಯ ನೈಜತೆ ಮತ್ತು ಗಂಭೀರತೆಯನ್ನು ಸಾಬೀತುಪಡಿಸಬೇಕು’ ಎಂದು ಅವರು ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT