ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನೆಚ್ಚರಿಕೆ ಡೋಸ್: ಕೋ-ವಿನ್ ಪೋರ್ಟಲ್‌ನಲ್ಲಿ ನೋಂದಣಿ ಆರಂಭ

Last Updated 9 ಜನವರಿ 2022, 3:25 IST
ಅಕ್ಷರ ಗಾತ್ರ

ನವದೆಹಲಿ: ಜನವರಿ 10ರಿಂದ ಆರೋಗ್ಯ ಹಾಗೂ ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ವೈದ್ಯರ ಶಿಫಾರಸಿನ ಮೇರೆಗೆ ನೀಡಲಾಗುವ 'ಮುನ್ನೆಚ್ಚರಿಕೆ ಡೋಸ್‌' ಕೋವಿಡ್ ಲಸಿಕೆ ನೋಂದಣಿ ಪ್ರಕ್ರಿಯೆಗೆ ಶನಿವಾರ ಸಂಜೆ (ಜ.8) ಚಾಲನೆ ದೊರಕಿದೆ.

ದೇಶದಲ್ಲಿ 15ರಿಂದ 18 ವರ್ಷ ವಯೋಮಾನದವರಿಗೆ ಜನವರಿ 3ರಿಂದ ಕೋವಿಡ್ ಲಸಿಕೆ ಅಭಿಯಾನ ಆರಂಭಗೊಂಡಿತ್ತು. ಓಮೈಕ್ರಾನ್ ಒಳಗೊಂಡಂತೆ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿಮುನ್ನೆಚ್ಚರಿಕೆಡೋಸ್ (ಬೂಸ್ಟರ್ ಡೋಸ್) ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ನಿರ್ದೇಶಕ ಹಾಗೂ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್, 'ಆರೋಗ್ಯ/ ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್‌ಗಾಗಿ ಆನ್‌ಲೈನ್ ನೋಂದಣಿಯನ್ನು ಕೋ-ವಿನ್ ಪೋರ್ಟಲ್‌ನಲ್ಲಿ ಪ್ರಾರಂಭಿಸಲಾಗಿದೆ. ಬುಕ್ಕಿಂಗ್ ಕಾಯ್ದಿರಿಸಲು http://cowin.gov.in ವೆಬ್‌ಸೈಟ್‌ಗೆ ಭೇಟಿ ಕೊಡಿ' ಎಂದು ಹೇಳಿದ್ದಾರೆ.

ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳುವವರು ಹೊಸ ನೋಂದಣಿ ಮಾಡುವ ಅಗತ್ಯವಿಲ್ಲ. ಅಲ್ಲದೆ ಶನಿವಾರದಿಂದಲೇ ಬುಕ್ಕಿಂಗ್ ಅಥವಾ ನೇರವಾಗಿ ಕೋವಿಡ್ ಲಸಿಕೆ ಕೇಂದ್ರಕ್ಕೆ ಭೇಟಿ ಕೊಡಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

60 ವರ್ಷಕ್ಕೂ ಮೇಲ್ಪಟ್ಟ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳು ವೈದ್ಯರಿಂದ ಯಾವುದೇ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿತ್ತು. ಹಾಗಿದ್ದರೂ ಅಂತಹ ಜನರು ಮುನ್ನೆಚ್ಚರಿಕೆ ಡೋಸ್ ಪಡೆಯುವ ಮುನ್ನ ವೈದ್ಯರ ಸಲಹೆ ಪಡೆಯಲು ಸಲಹೆ ಮಾಡಲಾಗಿದೆ.

ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವಂತೆಯೇ ಅಲ್ಲಿ ನಿಯುಕ್ತಿಗೊಳ್ಳಲಿರುವ ಸಿಬ್ಬಂದಿಗಳು ಕೂಡ ಮುಂಚೂಣಿಯ ಕಾರ್ಯಕರ್ತರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿದ್ದು, ಮುನ್ನೆಚ್ಚರಿಕೆ ಡೋಸ್‌ಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಎರಡನೇ ಡೋಸ್ ಪಡೆದ ಒಂಬತ್ತು ತಿಂಗಳ (39 ವಾರ) ಬಳಿಕ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ವ್ಯಕ್ತಿಗಳಿಗೆ ಕೋವಿನ್ಫ್ಲ್ಯಾಟ್‌ಫಾರ್ಮ್ ರಿಮೈಂಡರ್ ಮೆಸೇಜ್ ಕಳುಹಿಸಲಿದೆ. ಅಲ್ಲದೆ ಮುನ್ನೆಚ್ಚರಿಕೆ ಡೋಸ್ ಪಡೆದವರ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲೂ ಇದನ್ನು ಉಲ್ಲೇಖಿಸಲಾಗುತ್ತದೆ.

ಶನಿವಾರದ (ಜ.8) ವೇಳೆಗೆ 15ರಿಂದ 18 ವರ್ಷದ ಮಕ್ಕಳಿಗೆ ಎರಡು ಕೋಟಿಗೂ ಹೆಚ್ಚು ಸೇರಿದಂತೆ ದೇಶದಲ್ಲಿ ಇದುವರೆಗೆ 151.47 ಕೋಟಿ ಲಸಿಕೆ ಡೋಸ್‌ಗಳನ್ನು ಹಾಕಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT