ಶನಿವಾರ, ಮೇ 15, 2021
23 °C

ಟಿಎಂಸಿ ಗೂಂಡಾಗಳಿಂದಲೇ ಪಶ್ಚಿಮ ಬಂಗಾಳ ಹಿಂಸಾಚಾರ: ಬಿಜೆಪಿ ಸಂಸದ ಪರ್ವೇಶ್ ಸಿಂಗ್

ಪಿಟಿಐ‌ Updated:

ಅಕ್ಷರ ಗಾತ್ರ : | |

Parvesh Singh PTI Photo

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ದಿನ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಗೂಂಡಾಗಳೇ ಹಿಂಸಾಚಾರ ನಡೆಸಿದ್ದಾರೆ ಎಂದು ಬಿಜೆಪಿ ಸಂಸದ ಪರ್ವೇಶ್ ಸಾಹೀಬ್ ಸಿಂಗ್ ಆರೋಪಿಸಿದ್ದಾರೆ.

ಟಿಎಂಸಿ ಗೂಂಡಾಗಳು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಟಿಎಂಸಿ ಸಂಸದರು, ಮುಖ್ಯಮಂತ್ರಿಯೂ ದೆಹಲಿಗೆ ಬರಬೇಕಾಗುತ್ತದೆ ಎಂಬುದು ಅವರಿಗೆ ನೆನಪಿರಲಿ ಎಂದು ಪರ್ವೇಶ್ ಎಚ್ಚರಿಕೆ ನೀಡಿದ್ದಾರೆ.

‘ನೆನಪಿಡಿ! ಟಿಎಂಸಿ ಸಂಸದರು, ಮುಖ್ಯಮಂತ್ರಿ, ಶಾಸಕರೂ ದೆಹಲಿಗೆ ಬರಬೇಕಾಗುತ್ತದೆ. ಅವರು ಈ ಎಚ್ಚರಿಕೆಯನ್ನು ಪರಿಗಣಿಸಲಿ. ಚುನಾವಣೆಯು ಸೋಲು ಅಥವಾ ಗೆಲುವನ್ನು ಒಳಗೊಂಡಿರಬೇಕೇ ವಿನಃ ಕೊಲೆಯನ್ನಲ್ಲ’ ಎಂದು ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಓದಿ: 

‘ಟಿಎಂಸಿ ಗೂಂಡಾಗಳು ನಮ್ಮ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ. ಕಾರ್ಯಕರ್ತರ ಬೈಕ್‌ಗಳಿಗೆ ಹಾನಿ ಮಾಡಿದ್ದಲ್ಲದೆ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ’ ಎಂದೂ ಪರ್ವೇಶ್ ದೂರಿದ್ದಾರೆ.

ಚುನಾವಣೆ ಗೆಲುವಿನ ಬಳಿಕ ಟಿಎಂಸಿಯು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ ಎಂದು ಬಿಜೆಪಿ ನಾಯಕ ಕೈಲಾಸ್ ವಿಜಯವರ್ಗೀಯ ಸೋಮವಾರ ಆರೋಪಿಸಿದ್ದರು. ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬುವ ಸಲುವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಂಗಳವಾರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದರು.

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದ್ದು, ಸುಮಾರು 4,000 ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಓದಿ: 

ಫಲಿತಾಂಶದ ದಿನವಾದ ಭಾನುವಾರ ರಾಜ್ಯದ ಹಲವೆಡೆ ಹಿಂಸಾಚಾರ ನಡೆದಿತ್ತು. ಭಾನುವಾರದಿಂದ ಪಕ್ಷದ ಕನಿಷ್ಠ ಐದು ಮಂದಿ ಕಾರ್ಯಕರ್ತರು ಹಾಗೂ ಬೆಂಬಲಿಗರ ಹತ್ಯೆ ನಡೆದಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ಮಮತಾ ಬ್ಯಾನರ್ಜಿ ಬಿಜೆಪಿಯ ಆರೋಪಗಳನ್ನು ಅಲ್ಲಗಳೆದಿದ್ದರು.

‘ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ ಹಿಂಸಾಚಾರಗಳಲ್ಲಿ ಒಂಭತ್ತು ಜನರು ಸಾವಿಗೀಡಾಗಿದ್ದಾರೆ ಹಾಗೂ ಹಲವು ಮಂದಿ ಗಾಯಗೊಂಡಿರುವುದು ದುಃಖ ತಂದಿದೆ. ಜನರು ಶಾಂತಿ ಕಾಪಾಡಬೇಕು’ ಎಂದು ರಾಜ್ಯಪಾಲ ಜಗದೀಪ್‌ ಧನಖಡ್‌ ಆಗ್ರಹಿಸಿದ್ದರು. ಜತೆಗೆ, ಡಿಜಿಪಿ ಅವರನ್ನು ಕರೆಸಿಕೊಂಡು ತುರ್ತು ಕ್ರಮಗಳ ಬಗ್ಗೆ ಚರ್ಚಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು