ಶನಿವಾರ, ಮೇ 21, 2022
27 °C

Republic Day: ಗೇಲ್, ಜಾಂಟಿಗೆ ಶುಭಾಶಯ ಸಂದೇಶ ರವಾನಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: 73ನೇ ಗಣರಾಜ್ಯೋತ್ಸವದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಕ್ರಿಕೆಟಿಗರಾದ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಹಾಗೂ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಅವರಿಗೆ ವೈಯಕ್ತಿಕ ಶುಭಾಶಯ ಸಂದೇಶವನ್ನು ರವಾನಿಸಿದ್ದಾರೆ.

ಈ ಕುರಿತು ಆಟಗಾರರು ತಮ್ಮ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಗಣರಾಜ್ಯೋತ್ಸವದ ಸಂಭ್ರಮದಲ್ಲಿರುವ ಭಾರತೀಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: 

'73ನೇ ಗಣರಾಜ್ಯೋತ್ಸವದಂದು ನಾನು ಭಾರತೀಯರನ್ನು ಅಭಿನಂದಿಸಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನರೊಂದಿಗೆ ನನ್ನ ವೈಯಕ್ತಿಕ ಬಾಂಧವ್ಯ ಉಲ್ಲೇಖಿಸುವ ಖಾಸಗಿ ಸಂದೇಶದಿಂದ ನನ್ನ ದಿನ ಬೆಳಗಾಗಿದೆ. ಯೂನಿವರ್ಸ್ ಬಾಸ್ ಕಡೆಯಿಂದ ಅಭಿನಂದನೆಗಳು ಮತ್ತು ತುಂಬಾನೇ ಪ್ರೀತಿ' ಎಂದು ಗೇಲ್ ಬರೆದುಕೊಂಡಿದ್ದಾರೆ.

 

 

 

ಇನ್ನೊಂದೆಡೆ ಜಾಂಟಿ ರೋಡ್ಸ್, ಪ್ರಧಾನಿ ಅವರ ಪೂರ್ಣ ಸಂದೇಶವನ್ನು ಟ್ವಿಟರ್‌ನಲ್ಲಿ ಹಂಚಿದ್ದಾರೆ.

 

'ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಸಿಕ್ಕಿ 75 ವರ್ಷವನ್ನು ಪೂರೈಸುತ್ತಿರುವ ಭಾರತಕ್ಕೆ ಈ ವರ್ಷದ ಜನವರಿ 26 ಹೆಚ್ಚು ವಿಶೇಷವೆನಿಸಿದೆ. ಹಾಗಾಗಿ ನಿಮಗೆ ಸೇರಿದಂತೆ ಭಾರತದ ಇತರೆ ಸ್ನೇಹಿತರಿಗೆ ನಾನು ಸಂದೇಶ ಬರೆಯಲು ನಿರ್ಧರಿಸಿದ್ದೇನೆ. ಭಾರತದ ಬಗೆಗಿನ ನಿಮ್ಮ ಪ್ರೀತಿಗೆ ಕೃತಜ್ಞತೆ ಹಾಗೂ ನಮ್ಮ ದೇಶದೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುವ ನಂಬಿಕೆ ನನಗಿದೆ' ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

'ನೀವು ನಿಮ್ಮ ಮಗಳಿಗೆ ಈ ಮಹಾನ್ ರಾಷ್ಟ್ರದ ಹೆಸರನ್ನು ಇಟ್ಟಾಗ (ಇಂಡಿಯಾ) ವಿಶೇಷ ಸಂಬಂಧವು ನಿಜವಾಗಿಯೂ ಪ್ರತಿಫಲಿಸುತ್ತದೆ. ಉಭಯ ರಾಷ್ಟ್ರಗಳ ಸದೃಢ ಬಾಂಧವ್ಯಕ್ಕೆ ನೀವು ನೈಜ ರಾಯಭಾರಿ' ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ.

 

 

 

'ಪ್ರಧಾನಿ ನರೇಂದ್ರ ಮೋದಿ ಅವರೇ ನಿಮ್ಮ ಒಳ್ಳೆಯ ಮಾತುಗಳಿಗಾಗಿ ಧನ್ಯವಾದಗಳು. ಭಾರತಕ್ಕೆ ನೀಡಿದ ಪ್ರತಿಯೊಂದು ಭೇಟಿಯ ವೇಳೆಯಲ್ಲೂ ನಾನು ಒಬ್ಬ ವ್ಯಕ್ತಿಯಾಗಿ ತುಂಬಾ ಬೆಳೆದಿದ್ದೇನೆ. ಭಾರತೀಯರ ಜೊತೆಗೆ ನನ್ನ ಇಡೀ ಕುಟುಂಬವು ಗಣರಾಜ್ಯೋತ್ಸವನ್ನು ಆಚರಿಸುತ್ತೇವೆ. ಭಾರತದ ಜನರ ಹಕ್ಕುಗಳನ್ನು ರಕ್ಷಿಸುವ ಸಂವಿಧಾನದ ಮಹತ್ವವನ್ನು ಗೌರವಿಸುತ್ತೇವೆ' ಎಂದು ಜಾಂಟಿ ರೋಡ್ಸ್ ಪ್ರತಿಕ್ರಿಯಿಸಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು