ಸೋಮವಾರ, ಮಾರ್ಚ್ 27, 2023
32 °C

ಬ್ರಿಟನ್‌ ಪ್ರಧಾನಿ ಗಾದಿ: ಭಾರತೀಯ ಸಂಜಾತ ರಿಷಿ ಸುನಕ್ ಬೆನ್ನಿಗೆ ನಿಂತ ಸಂಸದರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಕನ್ಸರ್ವೇಟಿವ್‌ ಪಕ್ಷದ ನಾಯಕತ್ವ ಮತ್ತು ಬ್ರಿಟನ್‌ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಭಾರತೀಯ ಸಂಜಾತ ರಿಷಿ ಸುನಕ್‌ ಅವರ ಹೆಸರು ಮತ್ತೆ ಮುಂಚೂಣಿಯಲ್ಲಿದೆ.

ಲಿಜ್‌ ಟ್ರಸ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಸ್ಪರ್ಧಿಸಲು ಅಗತ್ಯವಿರುವ 100 ಸಂಸದರ ಬೆಂಬಲ ಸುನಕ್‌ ಅವರಿಗೆ ಲಭಿಸಿದೆ ಎಂದು ಅವರ ಬೆಂಬಲಿಗರು ಶನಿವಾರ ಹೇಳಿದ್ದಾರೆ.

ಕೆರಿಬಿಯನ್‌ ನಾಡಿಗೆ ಪ್ರವಾಸ ಕೈಗೊಂಡಿದ್ದ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಹಿಂದಿರುಗಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ. ತಮ್ಮ ಸ್ಪರ್ಧೆಯ ಕುರಿತು, ಜಾನ್ಸನ್‌ ಮತ್ತು ಸುನಕ್‌ ಅವರು ಈವರೆಗೂ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ತಾವು ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಾಗಿ ಪೆನಿ ಮಾರ್ಡಂಟ್‌ ಈಗಾಗಲೇ ಘೋಷಿಸಿದ್ದಾರೆ.

ಪ್ರಧಾನಿ ಹುದ್ದೆಗೆ ಸುನಕ್‌ ಸೂಕ್ತ ಆಯ್ಕೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಟೋರಿಯ ಪ್ರಭಾವಿ ಸಚಿವರು ಹಾಗೂ ಸಂಸದರೂ ಕೂಡ ಸುನಕ್‌ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಲಾಗಿದೆ.

ಬಿಬಿಸಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಬ್ರಿಟನ್‌ನ ಮಾಜಿ ಉಪ ಪ್ರಧಾನಿ ಡಾಮಿನಿಕ್‌ ರಾಬ್‌, ‘ಆರ್ಥಿಕ ಹಿಂಜರಿತದಿಂದ ದೇಶವನ್ನು ಮೇಲಕ್ಕೆತ್ತಲು ಅಗತ್ಯವಿರುವ ಯೋಜನೆಯನ್ನು ರಿಷಿ ಸಿದ್ಧಪಡಿಸಿದ್ದಾರೆ. ದೇಶದಲ್ಲಿ ಸುಸ್ಥಿರ ಆಡಳಿತ ನಡೆಸಲು ಅವರು ಸೂಕ್ತ ವ್ಯಕ್ತಿ. ಲಕ್ಷಾಂತರ ಮಂದಿ ಕಾರ್ಮಿಕರು ಹಾಗೂ ಉದ್ಯಮಿಗಳಲ್ಲಿ ಅವರು ಹೊಸ ಭರವಸೆಗಳನ್ನು ಚಿಗುರೊಡೆಯುವಂತೆ ಮಾಡಬಲ್ಲರು’ ಎಂದಿದ್ದಾರೆ. 

ಮಾಜಿ ಪ್ರಧಾನಿ ಜಾನ್ಸನ್‌ ಸ್ಪರ್ಧೆಯ ಕುರಿತು ಪ್ರತಿಕ್ರಿಯಿಸಿದ ಅವರು, ‘ಕೋವಿಡ್‌ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್‌ಡೌನ್‌ ಅವಧಿಯಲ್ಲಿ ಜಾನ್ಸನ್‌ ಅವರು ತಮ್ಮ ಸಿಬ್ಬಂದಿ ಜೊತೆ ಮೋಜಿನ ಕೂಟ ನಡೆಸಿದ್ದರು. ಈ ಕುರಿತ ವಿಚಾರಣೆ ಇನ್ನೂ ಬಾಕಿ ಇದೆ. ದೇಶದ ಜನರು ಸಂಕಷ್ಟದಲ್ಲಿದ್ದಾಗ ಮೋಜು ಮಸ್ತಿ ನಡೆಸಿದ್ದ ಜಾನ್ಸನ್‌, ಪಕ್ಷದ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಅವರನ್ನು ಪ್ರಧಾನಿ ಮಾಡುವ ಮೂಲಕ ನಾವು ಹಿಂದಿನ ಸ್ಥಿತಿಗೆ ಮರಳಬಾರದು. ದೇಶ ಮತ್ತು ಸರ್ಕಾರ ಅಭಿವೃದ್ಧಿಯ ದಿಸೆಯಲ್ಲಿ ಸಾಗಬೇಕು’ ಎಂದು ಕುಟುಕಿದ್ದಾರೆ.

ಜಾನ್ಸನ್‌ಗೆ ಈಗಾಗಲೇ 45 ಸಂಸದರು ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ದಾರೆ. ಸೋಮವಾರದ ವೇಳೆಗೆ ಅವರು ಅಗತ್ಯವಿರುವ 100 ಸಂಸದರ ಬೆಂಬಲ ಗಳಿಸಲಿದ್ದಾರೆ ಎದೂ ಹೇಳಲಾಗಿದೆ.

ತಮಗೆ 100 ಸಂಸದರ ಬೆಂಬಲ ಇರುವುದನ್ನು ಸಾಬೀತುಪಡಿಸಲು ಪ್ರಧಾನಿ ಹುದ್ದೆ ಆಕಾಂಕ್ಷಿಗಳಿಗೆ ಸೋಮವಾರ ಸ್ಥಳೀಯ ಕಾಲಮಾನ 2 ಗಂಟೆವರೆಗೂ ಸಮಯಾವಕಾಶವಿದೆ. ನಿಗದಿತ ಕಾಲಮಿತಿ ಮುಗಿದ ಬಳಿಕ ಸ್ಪರ್ಧಾಕಣದಲ್ಲಿ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಉಳಿದರೆ ಅವರ ಆಯ್ಕೆಗಾಗಿ ಟೋರಿ ಸದಸ್ಯರು ಆನ್‌ಲೈನ್‌ ಮೂಲಕ ಮತದಾನ ನಡೆಸಲಿದ್ದಾರೆ. ಯಾರಾದರೂ ಒಬ್ಬರೇ ಸ್ಪರ್ಧಾಕಣದಲ್ಲಿದ್ದರೆ ಅವರೇ ಪ್ರಧಾನಿ ಹುದ್ದೆಗೇರಲಿದ್ದಾರೆ. 

ಬೋರಿಸ್‌ಗೆ ಪ್ರೀತಿ ಬೆಂಬಲ: ಪ್ರಧಾನಿ ಹುದ್ದೆಗೆ ಬೋರಿಸ್‌ ಜಾನ್ಸನ್‌ ಸೂಕ್ತ ವ್ಯಕ್ತಿ ಎಂದು ಭಾರತೀಯ ಸಂಜಾತೆ ಪ್ರೀತಿ ಪಟೇಲ್‌ ಹೇಳಿದ್ದಾರೆ. ಬೋರಿಸ್‌ ಅವರು ಪ್ರಧಾನಿಯಾಗಿದ್ದಾಗ ಪ್ರೀತಿ ಅವರು ಗೃಹ ಸಚಿವಾಲಯದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು