ಶುಕ್ರವಾರ, ಮೇ 20, 2022
25 °C

ಅಸ್ಸಾಂ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಗೆ ಸೇರಿದ ಆರ್‌ಜೆಡಿ

ಪಿಟಿಐ Updated:

ಅಕ್ಷರ ಗಾತ್ರ : | |

ಗುವಾಹಟಿ: ಅಸ್ಸಾಂನಲ್ಲಿ ಕಾಂಗ್ರೆಸ್ ನೇತೃತ್ವದ 'ಮಹಾ ಮೈತ್ರಿ'ಗೆ ಸೇರ್ಪಡೆಗೊಂಡಿದ್ದು, ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಒಂದು ಸ್ಥಾನಕ್ಕೆ ಸ್ಪರ್ಧಿಸುವುದಾಗಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮಂಗಳವಾರ ಹೇಳಿದೆ.

2016ರಲ್ಲಿ ಅಸ್ಸಾಂನಲ್ಲಿ ಅಧಿಕಾರ ಹಿಡಿದ ಬಿಜೆಪಿಯನ್ನು ಶತಾಯಗತಾಯ ಸೋಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್‌ ರಾಜ್ಯದಲ್ಲಿ ಆರು ರಾಜಕೀಯ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿತ್ತು. ಇದರೊಂದಿಗೆ ಮೈತ್ರಿಯಲ್ಲಿರುವ ಪಕ್ಷಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಆರ್‌ಜೆಡಿಯ ಅಸ್ಸಾಂ ಅಧ್ಯಕ್ಷ 'ಶೋನಾರುಲ್ ಶಾ ಮುಸ್ತಾಫಾ ಸುದ್ದಿಸಂಸ್ಥೆ ಪಿಟಿಐನೊಂದಿಗೆ ಮಾತನಾಡಿ, ಪಕ್ಷವು ಔಪಚಾರಿಕವಾಗಿ ಪ್ರತಿಪಕ್ಷಗಳ ಮೈತ್ರಿಯೊಂದಿಗೆ ಸೇರಿಕೊಂಡಿದೆ ಮತ್ತು ಪಕ್ಷವು ಟಿನ್ಸುಕಿಯಾ ಕ್ಷೇತ್ರದಿಂದ ಮಾರ್ಚ್ 27ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಲಿದೆ' ಎಂದು ಹೇಳಿದ್ದಾರೆ.

ಎರಡನೇ ಮತ್ತು ಮೂರನೇ ಹಂತದ ಮತದಾನದ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲು ಆರ್‌ಜೆಡಿ ಮತ್ತು ಕಾಂಗ್ರೆಸ್ ಕೇಂದ್ರ ನಾಯಕರ ನಡುವೆ ಈಗ ಮಾತುಕತೆ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯ ಹಿಂದಿ ಮಾತನಾಡುವ ಜನರನ್ನು ಹೊಂದಿರುವ ಟಿನ್ಸುಕಿಯಾದಲ್ಲಿ ಪಕ್ಷವು ಹಿರಾ ದೇವಿ ಚೌಧರಿಯನ್ನು ಕಣಕ್ಕಿಳಿಸಿದೆ ಎಂದು ಅವರು ತಿಳಿಸಿದರು.

ಆರ್‌ಜೆಡಿಯು ಮಹಾ ಮೈತ್ರಿಗೆ ಸೇರ್ಪಡೆಗೊಂಡಿರುವುದನ್ನು ರಾಜ್ಯ ಕಾಂಗ್ರೆಸ್ ವಕ್ತಾರ ಬಬ್ಬೀತಾ ಶರ್ಮಾ ಅವರು ಖಚಿತಪಡಿಸಿದ್ದಾರೆ.

ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 47 ಸ್ಥಾನಗಳ ಪೈಕಿ ಕಾಂಗ್ರೆಸ್ 43 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಎಐಯುಡಿಎಫ್, ಸಿಪಿಐ (ಎಂಎಲ್), ಎಜಿಎಂ ಮತ್ತು ಆರ್‌ಜೆಡಿ ಇತರ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧೆಗಿಳಿಯಲಿವೆ ಎಂದು ಶರ್ಮಾ ಹೇಳಿದರು.

ಇದಕ್ಕೂ ಮೊದಲು ಮಹಾ ಮೈತ್ರಿಯಲ್ಲಿ ಕಾಂಗ್ರೆಸ್, ಎಐಯುಡಿಎಫ್, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್), ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್) ಮತ್ತು ಅಂಚಲಿಕ್ ಗಣ ಮೋರ್ಚಾ (ಎಜಿಎಂ) ಗಳನ್ನು ಒಳಗೊಂಡಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 126 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಇದನ್ನು ರಚಿಸಲಾಯಿತು.

ಮೊದಲ ಹಂತದಲ್ಲಿ ಮಾರ್ಚ್ 27 ರಂದು 47 ಸೀಟುಗಳಿಗೆ ಮತದಾನ ನಡೆಯಲಿದ್ದು, 39 ಮತ್ತು 40 ಕ್ಷೇತ್ರಗಳಿಗೆ ಕ್ರಮವಾಗಿ ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಮತದಾನ ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು