ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಯು ತೊರೆಯಲು 17 ಶಾಸಕರು ಸಿದ್ಧ: ಆರ್‌ಜೆಡಿ

Last Updated 30 ಡಿಸೆಂಬರ್ 2020, 20:33 IST
ಅಕ್ಷರ ಗಾತ್ರ

ಪಟ್ನಾ: ‘ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯುನ 17 ಶಾಸಕರು ಪಕ್ಷದ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿದ್ದು, ಯಾವುದೇ ಕ್ಷಣದಲ್ಲಿ ಪಕ್ಷವನ್ನು ತೊರೆಯಲು ಸಿದ್ಧರಾಗಿದ್ದಾರೆ’ ಎಂದು ಆರ್‌ಜೆಡಿ ಮುಖಂಡ ಶ್ಯಾಮ ರಜಕ್‌ ಹೇಳಿದ್ದಾರೆ.

ಜೆಡಿಯುನಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಶ್ಯಾಮ್‌ ಅವರು, ಬಿಹಾರ ವಿಧಾನಸಭಾ ಚುನಾವಣೆಗೂ ಸ್ವಲ್ಪ ಮೊದಲು ಪಕ್ಷ ತ್ಯಜಿಸಿ ಆರ್‌ಜೆಡಿ ಸೇರ್ಪಡೆಯಾಗಿದ್ದರು. ಬಿಹಾರದ ಕಳೆದ ವಿಧಾನಸಭೆಯಲ್ಲಿ ಅವರು ಉಪನಾಯಕರಾಗಿದ್ದರು.

‘ಬಿಜೆಪಿಯ ಮುಂದೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಶರಣಾಗಿದ್ದಾರೆ ಎಂಬ ಭಾವನೆಯನ್ನು ಜೆಡಿಯುನ ಹಲವು ಶಾಸಕರು ಹೊಂದಿದ್ದಾರೆ. ಇನ್ನಷ್ಟು ಶಾಸಕರು ಪಕ್ಷ ಬಿಡಲು ಮುಂದಾದರೆ, ಪಕ್ಷಾಂತರ ನಿಷೇಧ ಕಾನೂನಿನಡಿ ಅನರ್ಹಗೊಳ್ಳುವುದನ್ನು ತಪ್ಪಿಸಬಹುದು ಎಂಬ ಉದ್ದೇಶದಿಂದ ಸದ್ಯಕ್ಕೆ ಪಕ್ಷ ತ್ಯಜಿಸದಂತೆ ಶಾಸಕರಿಗೆ ಆರ್‌ಜೆಡಿ ಸೂಚಿಸಿದೆ’ ಎಂದು ರಜಕ್‌ ಹೇಳಿದರು.

ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಆರು ಶಾಸಕರು ಪಕ್ಷ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಆದರೆ, ರಾಜ್ಯದಲ್ಲಿ ಬಿಜೆಪಿ ಜತೆಗಿನ ಮೈತ್ರಿಯನ್ನು ಮುಂದುವರಿಸಲು ಈಚೆಗೆ ನಡೆದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತೀರ್ಮಾನಿಸಲಾಗಿದೆ.

‘ಅರುಣಾಚಲ ಪ್ರದೇಶದ ನಡೆಯು ಬಿಹಾರ ಮೈತ್ರಿಯ ಮೇಲೆ ಪರಿಣಾಮ ಬೀರಲಾರದು. ಆದರೆ ಅಲ್ಲಿನ ಬೆಳವಣಿಗೆಯಿಂದ ನಮಗೆ ಬೇಸರವಾಗಿದೆ’ ಎಂದು ಜೆಡಿಯು ನಾಯಕ ಕೆ.ಸಿ. ತ್ಯಾಗಿ ಹೇಳಿದ್ದರು.

‘ಪಕ್ಷ ತ್ಯಜಿಸುವಂತೆ ಜೆಡಿಯು ಶಾಸಕರಿಗೆ ನಾವು ಒತ್ತಾಯಿಸಿರಲಿಲ್ಲ, ಅವರಾಗಿಯೇ ಬಂದು ಸೇರಿದ್ದಾರೆ’ ಎಂದು ಬಿಜೆಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT