ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಲಕ್ಷ ಉದ್ಯೋಗ, ನಿರುದ್ಯೋಗ ಭತ್ಯೆ, ಸ್ಮಾರ್ಟ್‌ ವಿಲೇಜ್‌: ಆರ್‌ಜೆಡಿ ಪ್ರಣಾಳಿಕೆ

Last Updated 24 ಅಕ್ಟೋಬರ್ 2020, 8:53 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಶನಿವಾರ ಪ್ರಣಾಳಿಕೆ ಬಿಡುಗಡೆಗೊಳಿಸಿದರು. 10 ಲಕ್ಷ ಯುವಕರಿಗೆ ಸರ್ಕಾರಿ ಕೆಲಸ, ರೈತರಿಗೆ ಅಧಿಕ ಮಾರಾಟ ಬೆಲೆ (ಎಂಎಸ್‌ಪಿ), ಉತ್ತಮ ಆರೋಗ್ಯ ಸೌಲಭ್ಯ ಮತ್ತು 'ಸ್ಮಾರ್ಟ್ ವಿಲೇಜ್' ಪರಿಕಲ್ಪನೆಯನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

‘ಇದು ಪ್ರಣಾಳಿಕೆ ಅಲ್ಲ. ಇದೊಂದು ನಿರ್ಣಯ. ಇದು ನಿಜವೂ ಆಗಲಿದೆ. ಕ್ಯಾಬಿನೆಟ್ ಸಭೆಯ ಮೊದಲ ದಿನವೇ 10 ಲಕ್ಷ ಜನರಿಗೆ ಸರ್ಕಾರಿ ಕೆಲಸ ಖಾತ್ರಿಪಡಿಸುವ ಪತ್ರಕ್ಕೆ ಸಹಿ ಮಾಡುತ್ತೇನೆ. 10 ಲಕ್ಷ ಉದ್ಯೋಗ ಎಲ್ಲಿಂದ ಸೃಷ್ಟಿ ಮಾಡುತ್ತಾರೆ ಎಂದು ಜನ ನಮ್ಮನ್ನು ಗೇಲಿ ಮಾಡುತ್ತಿದ್ದಾರೆ. ಉದ್ಯೋಗ ಮತ್ತು ಕೆಲಸದ (Employment–Job) ನಡುವೆ ವ್ಯತ್ಯಾಸವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ನಾವು ಸರ್ಕಾರಿ ಕೆಲಸದ ಬಗ್ಗೆ ಮಾತನಾಡುತ್ತಿದ್ದೇವೆ,’ ಎಂದು ತೇಜಸ್ವಿ ಯಾದವ್‌ ಹೇಳಿದರು.

‘ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ಪರಿಕಲ್ಪನೆಯನ್ನು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಇದರ ಜೊತೆಗೆ, ಉದ್ಯೋಗವಿಲ್ಲದ 35 ವರ್ಷ ವಯಸ್ಸಿನ ಯುವಕರಿಗೆ ₹1500 ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಣೆ ಮಾಡಲಾಗಿದೆ.

ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ರೈತರ ಸಾಲವನ್ನು ಮನ್ನಾ ಮಾಡುವ ಭರವಸೆ ನೀಡಲಾಗಿದೆ. ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ, ಬೋನಸ್‌ನೊಂದಿಗೆ ಪಡೆಯಲು ಆರ್‌ಜೆಡಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ತೇಜಸ್ವಿ ಯಾದವ್‌ ತಮ್ಮ ಪ್ರಣಾಳಿಕೆಯಲ್ಲಿ ‘ಸ್ಮಾರ್ಟ್ ವಿಲೇಜ್’ ಪರಿಕಲ್ಪನೆಯ ಬಗ್ಗೆ ಮಾತನಾಡಿದ್ದಾರೆ. ಈ ಯೋಜನೆ ಅಡಿಯಲ್ಲಿ ಹಳ್ಳಿಗಳಿಗೆ ಸಿಮೆಂಟ್‌ ರಸ್ತೆ, ಪ್ರತಿ ಪಂಚಾಯಿತಿಗಳಲ್ಲಿ ಉಚಿತ ಕಂಪ್ಯೂಟರ್ ಕೇಂದ್ರ, ಆರೋಗ್ಯ ಸೌಕರ್ಯಗಳ ಸುಧಾರಣೆ, ಪ್ರತಿ ಜಿಲ್ಲೆಯಲ್ಲೂ ಡಯಾಲಿಸಿಸ್ ಕೇಂದ್ರ, ಅದರಲ್ಲಿ ಬಡವರಿಗೆ ಉಚಿತ ಸೇವೆ, ಪಂಚಾಯತ್ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಪರೀಕ್ಷಾ ಸೌಲಭ್ಯವನ್ನು ಒದಗಿಸಲಾಗುವುದು,’ ಎಂದು ತಿಳಿಸಲಾಗಿದೆ.

ಒಟ್ಟಾರೆ ರಾಜ್ಯ ಬಜೆಟ್‌ನ ಮೊತ್ತದಲ್ಲಿ ಶೇ. 22ರನ್ನು ಶಿಕ್ಷಣಕ್ಕಾಗಿ ಮೀಸಲಿಡುವುದಾಗಿ ಆರ್‌ಜೆಡಿ ತನ್ನ ಘೋಷಣೆ ಮಾಡಿದೆ. ವಿದ್ಯಾರ್ಥಿಗಳ ಇ-ಕಲಿಕೆಗೆ ಪ್ರೋತ್ಸಾಹ ನೀಡುವುದಾಗಿಯೂ, ಶಿಕ್ಷಕರ ನೇಮಕಾತಿಗೆ ಚಾಲನೆ ನೀಡುವುದಾಗಿಯೂ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಆದರೆ, ಪ್ರಣಾಳಿಕೆ ಮೊದಲ, ಹಿಂಬದಿಯ ಪುಟಗಳಲ್ಲಿ ಆರ್‌ಜೆಡಿ ವರಿಷ್ಠ, ಬಿಹಾರದ ಮಾಜಿ ಮುಖ್ಯಮಂತ್ರಿ, ತೇಜಸ್ವಿ ಯಾದವ್‌ ಅವರ ತಂದೆ ಲಾಲು ಪ್ರಸಾದ್ ಯಾದವ್ ಅವರ ಚಿತ್ರವಿಲ್ಲ.

ಬಿಹಾರ ವಿಧಾನಸಭೆಗೆ ಅ. 28 ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಿಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT