ಮಲ್ಯ, ನೀರವ್, ಚೋಕ್ಸಿಯಿಂದ ಬ್ಯಾಂಕ್ಗಳಿಗೆ ₹18,000 ಕೋಟಿ ವಾಪಸ್: ಕೇಂದ್ರ

ನವದೆಹಲಿ: ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ₹18,000 ಕೋಟಿ ಬ್ಯಾಂಕ್ಗಳಿಗೆ ವಾಪಸಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಬುಧವಾರ ಮಾಹಿತಿ ನೀಡಿದೆ.
ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾಯ್ದೆಗೆ (ಪಿಎಂಎಲ್ಎ) ಸಂಬಂಧಿಸಿದ ಒಟ್ಟು ₹67,000 ಕೋಟಿ ಮೊತ್ತದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದಕ್ಕೆ ಸಂಬಂಧಿಸಿದ ಪ್ರಗತಿಯ ವಿವರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಪೀಠಕ್ಕೆ ಸಲ್ಲಿಸಿದರು.
ಇಂದಿನವರೆಗೆ 4,700 ಪ್ರಕರಣಗಳ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಕೈಗೆತ್ತಿಕೊಂಡಿದೆ. ಕಳೆದ 5 ವರ್ಷಗಳಲ್ಲಿ ಇ.ಡಿ. ಪ್ರತಿ ವರ್ಷ 111ರಿಂದ 981ರಂತೆ ಪ್ರಕರಣಗಳನ್ನು ಕೈಗೆತ್ತಿಕೊಂಡಿದೆ. 2015–16ರಲ್ಲಿ 111 ಹಾಗೂ 2020–21ರಲ್ಲಿ 981 ಪ್ರಕರಣಗಳನ್ನು ಕೈಗೆತ್ತಿಕೊಂಡಿತ್ತು ಎಂದು ಮೆಹ್ತಾ ತಿಳಿಸಿದ್ದಾರೆ.
ಇದನ್ನೂ ಓದಿ: ಮಲ್ಯ, ನೀರವ್, ಚೋಕ್ಸಿ ಆಸ್ತಿ ಮಾರಾಟದಿಂದ ₹13,100 ಕೋಟಿ ವಸೂಲಿ: ನಿರ್ಮಲಾ
ಅಪರಾಧ ಕಾನೂನಿನ ಅಡಿಯಲ್ಲಿ ತನಿಖೆ, ಶೋಧ ಕಾರ್ಯ, ಆಸ್ತಿ ಮುಟ್ಟುಗೋಲು ವಿಚಾರಗಳಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಹೊಂದಿರುವ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
2016-17 ರಿಂದ 2020-21ರ ಅವಧಿಯಲ್ಲಿ ಪೊಲೀಸರು ಮತ್ತು ಇತರ ಏಜೆನ್ಸಿಗಳು ಅಂದಾಜು 33 ಲಕ್ಷ ಎಫ್ಐಆರ್ ದಾಖಲಿಸಿಕೊಂಡಿದ್ದು ಈ ಪೈಕಿ ಕೇವಲ 2,086 ಪ್ರಕರಣಗಳನ್ನು ಮಾತ್ರ ಪಿಎಂಎಲ್ಎ ಅಡಿ ತನಿಖೆಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ಮೆಹ್ತಾ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.