ಭಾನುವಾರ, ಆಗಸ್ಟ್ 14, 2022
26 °C

ಆರ್‌ಎಸ್‌ಎಸ್ ವಿಚಾರವಾದಿ ಎಂ.ಜಿ.ವೈದ್ಯ ಇನ್ನಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಹಿರಿಯ ವಿಚಾರವಾದಿ ಹಾಗೂ ಆರ್‌ಎಸ್‌ಎಸ್‌ನ ಮೊದಲ ವಕ್ತಾರರೂ ಆಗಿದ್ದ ಮಾಧವ ಗೋವಿಂದ ವೈದ್ಯ (97) ಅವರು ಶನಿವಾರ ನಿಧನ ಹೊಂದಿದ್ದಾರೆ.

ಕೋವಿಡ್‌ನಿಂದ ಎಂ.ಜಿ. ವೈದ್ಯ ಚೇತರಿಸಿಕೊಂಡಿದ್ದರು. ಆದರೆ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಾಗಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಎಂದು ಅವರ ಮೊಮ್ಮಗ ವಿಷ್ಣು ವೈದ್ಯ ಹೇಳಿದ್ದಾರೆ.

ಎಂ.ಜಿ. ವೈದ್ಯ ಅವರಿಗೆ ಪತ್ನಿ, ಮೂವರು ಪುತ್ರಿಯರು ಮತ್ತು ಐವರು ಪುತ್ರರಿದ್ದಾರೆ. ಭಾನುವಾರ ಮೃತರ ಅಂತ್ಯಕ್ರಿಯೆ ನಡೆಯಲಿದೆ.

‘97 ವರ್ಷಗಳ ಸಕ್ರಿಯ, ಅರ್ಥಪೂರ್ಣ ಹಾಗೂ ಸ್ಫೂರ್ತಿದಾಯಕ ಜೀವನವನ್ನು ಪೂರೈಸಿದ ಬಳಿಕ ನನ್ನ ತಂದೆ ಎಂ.ಜಿ. ವೈದ್ಯ ಶನಿವಾರ ಮಧ್ಯಾಹ್ನ 3.35ಕ್ಕೆ ನಾಗಪುರದಲ್ಲಿ ಕೊನೆಯುಸಿರೆಳೆದರು. ಅವರು ಹಿರಿಯ ಪತ್ರಕರ್ತ, ಹಿಂದುತ್ವದ ಭಾಷ್ಯಾಕಾರ. ಅವರು 9 ದಶಕಗಳ ಕಾಲ ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದರು’ ಎಂದು ವೈದ್ಯ ಅವರ ಪುತ್ರ ಹಾಗೂ ಆರ್‌ಎಸ್‌ಎಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪರಿಚಯ: ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ತರೋಟ್ ತಹಸಿಲ್‌ನಲ್ಲಿ ಜನಿಸಿದ ಎಂ.ಜಿ. ವೈದ್ಯ ಅವರು ಎಂ.ಎ.ಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. 1949ರಿಂದ 1966ರ ವರೆಗೆ ನಾಗಪುರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. 1943ರಲ್ಲೇ ಆರ್‌ಎಸ್‌ಎಸ್‌ ಸದಸ್ಯರಾಗಿದ್ದ ಅವರು ಸಂಘದ ಎಲ್ಲ ಬೆಳವಣಿಗೆಗಳನ್ನೂ ಹತ್ತಿರದಿಂದಲೇ ಕಂಡಿದ್ದರು.

1966ರಲ್ಲಿ ಮರಾಠಿಯ ‘ತರುಣ್ ಭಾರತ್‌’ ದಿನಪತ್ರಿಕೆಯ ಸಂಪಾದಕೀಯ ವಿಭಾಗಕ್ಕೆ ಸೇರಿಕೊಂಡ ಅವರು ಅಲ್ಲಿ 25 ವರ್ಷಗಳ ಕಾಳ ಅಂಕಣವನ್ನೂ ಬರೆದಿದ್ದರು. ಹಲವು ಪುಸ್ತಕಗಳನ್ನೂ ಬರೆದಿದ್ದಾರೆ. 1978ರಿಂದ 84ರವರೆಗೆ ಅವರು ವಿಧಾನಪರಿಷತ್‌ಗೆ ನಾಮ ನಿರ್ದೇಶಿತರಾಗಿದ್ದರು. ನಾಗಪುರ ವಿಶ್ವವಿದ್ಯಾಲಯ ಸೆನೆಟ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಆರ್‌ಎಸ್‌ಎಸ್‌ನ ಮೊದಲ ಪ್ರಚಾರ ಪ್ರಮುಖ್ (ವಕ್ತಾರ) ಆಗಿದ್ದ ವೈದ್ಯ ಅವರು, ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಬೌದ್ಧಿಕ್ ಪ್ರಮುಖ್ ಕೂಡಾ ಆಗಿದ್ದರು. ಸಂಘದ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಸೇರಿದಂತೆ ಆರ್‌ಎಸ್‌ಎಸ್‌ನ ಆರು ಸರಸಂಚಾಲಕರನ್ನೂ ನೋಡಿದ್ದ ವೈದ್ಯ, ಸಂಘದ ಪ್ರಾರಂಭಿಕ ದಿನಗಳಿಂದ ಹಿಡಿದು ವಿಸ್ತರಣೆ, ಬೆಳವಣಿಗೆಯ ಹಂತಗಳಿಗೆ ಸಾಕ್ಷಿಯಾಗಿದ್ದರು. ಕಳೆದ ಜನವರಿಯಲ್ಲಿ ಮಹಾರಾಷ್ಟ್ರವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಬೇಕೆಂಬ ವೈದ್ಯ ಅವರ ಹೇಳಿಕೆ ವಿವಾದಕ್ಕೀಡಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು