ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ| ತಮ್ಮದೇ ಸರ್ಕಾರದ ವಿರುದ್ಧ ಸಚಿನ್‌ ಪೈಲಟ್‌ ವಾಗ್ದಾಳಿ

Last Updated 16 ಜನವರಿ 2023, 16:21 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸೋಮವಾರ ವಾಗ್ದಾಳಿ ನಡೆಸಿದ್ದಾರೆ. ‘ಪ್ರಶ್ನೆ ಪತ್ರಿಕೆ ಸೋರಿಕೆ ಮಾಸ್ಟರ್ ಮೈಂಡ್ ಅನ್ನು ಬಂಧಿಸಬೇಕೇ ಹೊರತು ಸಣ್ಣ ಪುಟ್ಟ ದಲ್ಲಾಳಿಗಳನ್ನಲ್ಲ’ ಎಂದು ಹೇಳಿದ್ದಾರೆ.

ಸೋಮವಾರ ನಗೌರ್‌ನ ಪರ್ಬತ್ಸರ್‌ನಲ್ಲಿ ನಡೆದ ರೈತ ಸಮ್ಮೇಳನದಲ್ಲಿ ಪೈಲಟ್ ಮಾತನಾಡಿದರು.

‘ನಮಗೆ ಯುವಕರ ಭವಿಷ್ಯದ ಬಗ್ಗೆ ಕಾಳಜಿ ಇದೆ. ನಮ್ಮಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಪರೀಕ್ಷೆಗಳು ರದ್ದಾಗಿವೆ. ಈ ಸುದ್ದಿಗಳನ್ನು ಓದಿದಾಗಲೆಲ್ಲ ನನಗೆ ನೋವುಂಟಾಗುತ್ತದೆ’ ಎಂದು ಅವರು ಹೇಳಿದರು.

‘ಎಷ್ಟೋ ಕಷ್ಟಪಟ್ಟು ಗ್ರಾಮೀಣ ಭಾಗದ ಯುವಕರು ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಟ್ಯೂಷನ್‌, ಪುಸ್ತಕ ಖರೀದಿಗೆ ಹಗಲಿರುಳು ಶ್ರಮಿಸುತ್ತಾರೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಪರಿಸ್ಥಿತಿ ಹೀಗಿರುವಾಗ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಮುನ್ನೆಲೆಗೆ ಬಂದಾಗ ನಿಜಕ್ಕೂ ನೋವಾಗುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸಣ್ಣಪುಟ್ಟ ದಳ್ಳಾಳಿ, ವಸೂಲಿ ಮಾಡುವವರ ಬದಲು ಗ್ಯಾಂಗ್‌ನ ಮಾಸ್ಟರ್‌ಮೈಂಡ್‌ ಸಿಕ್ಕಿಬೀಳಲಿ ಎಂದು ನಾನು ಆಶಿಸುತ್ತೇನೆ’ ಎಂದು ಅವರು ಸಭೆಯಲ್ಲಿ ಹೇಳಿದರು.

‘ಕಳೆದ ಚುನಾವಣೆಯಲ್ಲಿ 21 ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟರು. ಬಿಜೆಪಿ 163 ಸ್ಥಾನಗಳನ್ನು ಗೆದ್ದಿತ್ತು. ಪ್ರತಿಯೊಬ್ಬ ಕಾರ್ಯಕರ್ತರನ್ನು ತಲುಪಲು ಐದು ವರ್ಷಗಳಲ್ಲಿ ನಾನು ಶ್ರಮ ಪಟ್ಟಿದ್ದೇನೆ. ಐದು ವರ್ಷಗಳಲ್ಲಿ ಪಾದಯಾತ್ರೆ, ಘೇರಾವ್ ಮಾಡಿದ್ದೇವೆ, ಧರಣಿ ಮಾಡಿದ್ದೇವೆ, ಲಾಠಿ ಏಟು ತಿಂದಿದ್ದೇವೆ. ಆಗಿನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಬಿಗಿ ಹಿಡಿತ ಇರುವ ಬರಾನ್‌ನಿಂದ ಜಲಾವರ್‌ವರೆಗೆ ‘ರೈತ ನ್ಯಾಯ’ ಯಾತ್ರೆಯನ್ನು ಕೈಗೊಂಡಿದ್ದೆವು. ನನ್ನ ಭೇಟಿಯ ನಂತರ ವಸುಂಧರಾ ರಾಜೆ ಅವರು ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕಾಯಿತು’ ಎಂದು ಅವರು ತಾವು ಪಟ್ಟ ಶ್ರಮ ವಿವರಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕೇಂದ್ರವು ರೈತರ ಮುಂದೆ ತಲೆಬಾಗಿದೆ. ಆದರೆ ರೈತರ ಚಳವಳಿ ಮುಗಿದರೂ ಅವರ ಬೇಡಿಕೆಗಳನ್ನು ಮಾತ್ರ ಈಡೇರಿಸಿಲ್ಲ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಸಿಗಬೇಕು. ಅದಕ್ಕಾಗಿ ಈ ಸಮಾವೇಶ ಮಾಡಿದ್ದೇವೆ. ನಾನು ರೈತರ ಪರ ನಿಲ್ಲುತ್ತೇನೆ’ ಎಂದು ಹೇಳಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT