ಯೋಗಿಗೆ ಶುಭಾಶಯ ಕೋರಿದ ಸೈನಾ: ಸರ್ಕಾರಿ ಶಟ್ಲರ್ ಎಂದ ಆರ್‌ಎಲ್‌ಡಿಯ ಜಯಂತ್ ಚೌಧರಿ

ಲಖನೌ: ಉತ್ತರ ಪ್ರದೇಶದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಖ್ಯಾತ ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅಭಿನಂದಿಸಿದ್ದಾರೆ. ಇದಕ್ಕೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಲೋಕದಳ ಪಕ್ಷದ(ಆರ್‌ಎಲ್‌ಡಿ) ಅಧ್ಯಕ್ಷ ಜಯಂತ್ ಚೌಧರಿ ‘ಸರ್ಕಾರಿ ಶೆಟ್ಲರ್‘ ಎಂದು ವ್ಯಂಗ್ಯವಾಡಿದ್ದಾರೆ.
‘ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಸಾಧಿಸಿದ್ದಕ್ಕೆ ತಮಗೆ ಹೃತ್ಪೂರ್ವಕ ಅಭಿನಂದನೆಗಳು‘ ಎಂದು ಸೈನಾ ನೆಹ್ವಾಲ್ ಅವರು ಶನಿವಾರ ಟ್ವೀಟ್ ಮಾಡಿದ್ದರು. ಇದಾದ ನಂತರ ಸೈನಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಚೌಧರಿ, ‘ಜನರ ತೀರ್ಪನ್ನು ಹಾಳು ಮಾಡುವ ಬಿಜೆಪಿಯ ಕೌಶಲವನ್ನು ಸರ್ಕಾರಿ ಶೆಟ್ಲರ್ ಗುರುತಿಸಿದ್ದಾರೆ. ಸೆಲಬ್ರಿಟಿಗಳು ತಮ್ಮ ನಿರ್ಧಾರಗಳನ್ನು ಜನರ ಮೆಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವಾಗ, ಮತದಾರರು ಅವರ ಹೇಳಿಕೆಗಳ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬೇಕಿದೆ‘ ಎಂದು ಅವರು ಹೇಳಿದ್ದಾರೆ.
‘ಬಿಜೆಪಿ ಮತದಾರರನ್ನು ಅಪಹರಿಸಿ, ಮತ ಹಾಕದಂತೆ ಬಲವಂತ ಮಾಡಿದೆ‘ ಎಂಬ ಸಮಾಜವಾದಿ ಪಕ್ಷದ ಆರೋಪದ ನಡುವೆಯೇ, ‘ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷ ಜಯಗಳಿಸಿರುವುದಾಗಿ ಬಿಜೆಪಿ ಶನಿವಾರ ಘೋಷಿಸಿತ್ತು.
‘ಬಿಜೆಪಿ ಚುನಾವಣೆಗಳನ್ನು ಅಣಕಿಸುತ್ತಿದೆ‘ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ‘ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಬಹುತೇಕ ಸದಸ್ಯರು ನಮ್ಮ ಪಕ್ಷದ ಪರವಾಗಿದ್ದರೂ, ಅಧ್ಯಕ್ಷರ ಆಯ್ಕೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.