ಸೋಮವಾರ, ಸೆಪ್ಟೆಂಬರ್ 27, 2021
22 °C
ಅಭಿಮಾನಿಗಳ ಹರ್ಷೋದ್ಗಾರ l ರಾಜಕೀಯ ವಿರೋಧಿಗಳಿಗೆ ಸಂದೇಶ

ಆಸ್ಪತ್ರೆಯಿಂದ ಬಿಡುಗಡೆ l ರಾಜಕೀಯ ಸಂದೇಶ ರವಾನಿಸಿದ ಶಶಿಕಲಾ

ಇ.ಟಿ.ಬಿ. ಶಿವಪ್ರಿಯನ್ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಎಐಎಡಿಎಂಕೆಯ ಮಾಜಿ ನಾಯಕಿ ವಿ.ಕೆ. ಶಶಿಕಲಾ ಅವರು  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಹೊರಬಂದ ಕೂಡಲೇ ಬಲವಾದ ರಾಜಕೀಯ ಸಂದೇಶ ರವಾನಿಸಿದ್ದಾರೆ. ಆಸ್ಪತ್ರೆಯ ಆವರಣದಿಂದ ಹೊರಟ ಅವರು ಬಳಸಿದ್ದು, ತಮ್ಮ ಗೆಳತಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಬಳಸುತ್ತಿದ್ದ ಕಾರನ್ನು. ಕಾರಿನಲ್ಲಿದ್ದುದು ಎಐಎಡಿಎಂಕೆ ಪಕ್ಷದ ಧ್ವಜ.

ಭಾನುವಾರ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾದ ಅವರು ಕೋವಿಡ್ ನಿಯಮಾವಳಿ ಪ್ರಕಾರ, ಒಂದು ವಾರ ಬೆಂಗಳೂರಿನ ಬಂಗಲೆಯೊಂದರಲ್ಲಿ ತಂಗಲಿದ್ದಾರೆ. ವಾರದ ನಂತರ ಶಶಿಕಲಾ ಅವರು ಚೆನ್ನೈಗೆ ಪ್ರಯಾಣಿಸುವ ನಿರೀಕ್ಷೆಯಿದೆ.

ಆಸ್ಪತ್ರೆಯಿಂದ ಹೊರಬಂದಾಗ ಎರಡೂ ಬದಿ ನಿಂತಿದ್ದ ಅವರ ಬೆಂಬಲಿಗರು ಜಯಘೋಷದ ಮೂಲಕ ಸ್ವಾಗತಿಸಿದರು. ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ಬಳಸುತ್ತಿದ್ದ ಟೊಯೋಟಾ ಲ್ಯಾಂಡ್‌ಕ್ರೂಸರ್ ಕಾರಿನಲ್ಲಿ ಶಶಿಕಲಾ ಪ್ರಯಾಣಿಸಿದರು.

2016ರ ಡಿಸೆಂಬರ್‌ನಲ್ಲಿ ಜಯಲಲಿತಾ ನಿಧನರಾದ ದಿನದಿಂದ ಫೆಬ್ರುವರಿ 2017ರಲ್ಲಿ ಅವರು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ಮುಂದೆ ಶರಣಾಗುವವರೆಗೂ ಈ ಕಾರನ್ನು ಶಶಿಕಲಾ ಬಳಸಿದ್ದರು.

ಶಶಿಕಲಾ ಅವರು ಜಯಲಲಿತಾ ಅವರ ವಾಹನ ಮತ್ತು ಎಐಎಡಿಎಂಕೆ ಪಕ್ಷದ ಧ್ವಜವನ್ನು ಬಳಸುವ ಮೂಲಕ ತಮಿಳುನಾಡಿನ ಸಕ್ರಿಯ ರಾಜಕೀಯಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಜಯಲಲಿತಾ ಸಾವಿನ ಬಳಿಕ ಎಐಎಡಿಎಂಕೆಯ ಚುಕ್ಕಾಣಿ ಸ್ವಲ್ಪ ಕಾಲ ಶಶಿಕಲಾ ಕೈಯಲ್ಲಿ ಇತ್ತು. 2017ರ ಸೆಪ್ಟೆಂಬರ್‌ನಲ್ಲಿ ಶಶಿಕಲಾ ಅವರನ್ನು ಎಐಎಡಿಎಂಕೆ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿ, ಒ. ಪನ್ನೀರ್‌ಸೆಲ್ವಂ ಮತ್ತು ಕೆ. ಪಳನಿಸ್ವಾಮಿ ಅವರು ಪಕ್ಷದ ನಾಯಕತ್ವ ವಹಿಸಿಕೊಂಡಿದ್ದರು. ಇದನ್ನು ಶಶಿಕಲಾ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅವರು ಚೆನ್ನೈಗೆ ವಾಪಸಾದ ಬಳಿಕ ಕೋರ್ಟ್‌ನಲ್ಲಿರುವ ಈ ಪ್ರಕರಣಕ್ಕೆ ಮರುಜೀವ ನೀಡುವ ಸಾಧ್ಯತೆಯಿದೆ. 

ಶಶಿಕಲಾ ಅವರ ಸಂಬಂಧಿ ಟಿ.ಟಿ.ವಿ ದಿನಕರನ್ ಅವರು ‘ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಶಶಿಕಲಾ ಅವರು ದಿನಕರನ್ ಅವರಿಂದ ಅಂತರ ಕಾಯ್ದುಕೊಳ್ಳುತ್ತಾರೆಯೇ ಎಂಬ ಕುತೂಹಲ ಹುಟ್ಟಿದೆ.

66 ವರ್ಷದ ಶಶಿಕಲಾ ಅವರನ್ನು ಉಸಿರಾಟದ ಸಮಸ್ಯೆಯ ಕಾರಣ, ಜನವರಿ 20ರಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಒಂದು ದಿನದ ನಂತರ, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಮಾಡಿದ ಆರೋಪದಲ್ಲಿ ಅವರು ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿ, ಜನವರಿ 27ರಂದು ಬಿಡುಗಡೆಯಾಗಿದ್ದರು.

-----

ಶಶಿಕಲಾ ಆಗಮನದ ಪರಿಣಾಮ

‘ದಾಖಲೆಗಳ ಪ್ರಕಾರ, ಶಶಿಕಲಾ ಅವರು ಇನ್ನೂ ಎಐಎಡಿಎಂಕೆ ಪಕ್ಷದ ‘ಪ್ರಧಾನ ಕಾರ್ಯದರ್ಶಿ’ ಆಗಿದ್ದಾರೆ. ಅವರ ವಾಹನವು ಪಕ್ಷದ ಧ್ವಜವನ್ನು ಹೊಂದಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಅದನ್ನು ಬಳಸಲು ಅವರಿಗೆ ಅಧಿಕಾರವಿದೆ’ ಎಂದು ದಿನಕರನ್ ಹೇಳಿದ್ದಾರೆ.

ಆದರೆ, ಶಶಿಕಲಾ ಅವರು ಜೈಲಿನಿಂದ ಬಿಡುಗಡೆ ಆಗಿರುವುದರಿಂದ ಸರ್ಕಾರ ಮತ್ತು ಪಕ್ಷದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಎಐಎಡಿಎಂಕೆ ಸ್ಪಷ್ಟಪಡಿಸಿದೆ.

‘ಶಶಿಕಲಾ ಅವರು ‘ಹೋರಾಟ’ಕ್ಕೆ ಸಿದ್ಧರಾಗಿದ್ದಾರೆ. ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರದಿಂದ ಅಸಮಾಧಾನಗೊಂಡಿರುವ ಪಕ್ಷದ ಹಿರಿಯ ನಾಯಕರ ಬೆಂಬಲವನ್ನು ಶಶಿಕಲಾ ಪಡೆಯಬಹುದು’ ಎಂಬುದು ರಾಜಕೀಯ ವೀಕ್ಷಕರ ಮಾತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು