ಭಾನುವಾರ, ಮೇ 9, 2021
27 °C
ಉನ್ನತ ಮಟ್ಟದ ಸಮಿತಿಯ ವರದಿಯನ್ನು ಸಿಬಿಐಗೆ ಸಲ್ಲಿಸಲು ಸೂಚನೆ

ಇಸ್ರೊದಲ್ಲಿ ನಡೆದಿದ್ದ ಬೇಹುಗಾರಿಕೆ ಪ್ರಕರಣ: ಹೆಚ್ಚಿನ ತನಿಖೆಗೆ ‘ಸುಪ್ರೀಂ’ ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೊ) 1994ರಲ್ಲಿ ನಡೆದಿದ್ದ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಸಿಬಿಐ ಗುರುವಾರ ಆದೇಶಿಸಿದೆ.

ಇಸ್ರೊ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್‌ ಅವರಿಗೆ ಸಂಬಂಧಿಸಿದ ಈ ಪ್ರಕರಣದ ಕುರಿತು ಉನ್ನತ ಮಟ್ಟದ ಸಮಿತಿಯ ವರದಿಯನ್ನು ಸಿಬಿಐಗೆ ನೀಡಬೇಕು ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಸೂಚಿಸಿದೆ.

ಉನ್ನತ ಮಟ್ಟದ ಸಮಿತಿಯ ವರದಿಯನ್ನು ಪ್ರಾಥಮಿಕ ತನಿಖೆಯ ಭಾಗವಾಗಿ ಸಿಬಿಐ ಪರಿಗಣಿಸಬಹುದು ಮತ್ತು ತನಿಖಾ ವರದಿಯನ್ನು ಮೂರು ತಿಂಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್‌ ನೇತೃತ್ವದ ಪೀಠ ಸೂಚಿಸಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಜೈನ್‌ ಅವರ ನೇತೃತ್ವದ ತ್ರಿಸದಸ್ಯರ ಸಮಿತಿಯ ವರದಿಯನ್ನು ಎಲ್ಲಿಯೂ ಪ್ರಕಟಿಸಬಾರದು ಎಂದು ಸೂಚಿಸಲಾಗಿದೆ.

ಬೇಹುಗಾರಿಕೆ ಪ್ರಕರಣಕ್ಕೆ ಸಂಬಂದಿಸಿದಂತೆ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಪರಿಗಣಿಸಬೇಕು ಎಂದು ಕೇಂದ್ರ ಸರ್ಕಾರದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ಆದೇಶ ಮಾಡಿದೆ.

‘ನಾರಾಯಣನ್‌ ಅವರ ಹೇಳಿಕೆಗಳನ್ನು ಮಾತ್ರ ದಾಖಲಿಸಲಾಗಿದೆ. ನನ್ನ ಹೇಳಿಕೆಗಳನ್ನು ಸಮಿತಿಯು ಆಲಿಸಿಲ್ಲ’ ಎಂದು ಮಾಜಿ ಡಿಜಿಪಿ ಸಿಬಿ ಮ್ಯಾಥೆವ್ಸ್‌ ಅವರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಸಿಬಿ ಮ್ಯಾಥೆವ್ಸ್‌ ಅವರು ಆಗ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರಾಗಿದ್ದರು.

ಸಮಿತಿಯು ಈ ಪ್ರಕರಣದ ಬಗ್ಗೆ ಯಾವುದೇ ರೀತಿಯ ಅಧಿಕೃತ ತೀರ್ಪು ಪ್ರಕಟಿಸಿಲ್ಲ. ಆದರೆ, ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿದೆ. ಅಧಿಕಾರಿಗಳ ಲೋಪಗಳ ಬಗ್ಗೆ ಪರಿಶೀಲನೆ ಮಾಡಿದೆ ಎಂದು ಪೀಠವು ಹೇಳಿದೆ.

2018ರ ಸೆಪ್ಟೆಂಬರ್‌ 14ರಂದು ಸುಪ್ರೀಂ ಕೋರ್ಟ್‌ ಈ ಸಮಿತಿಯನ್ನು ರಚಿಸಿತ್ತು. ತ್ರಿಸದಸ್ಯರ ಸಮಿತಿಯು ಇತ್ತೀಚೆಗೆ ತನ್ನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು.

ಈ ಪ್ರಕರಣದಲ್ಲಿ ನಾರಾಯಣನ್‌ ಅವರನ್ನು ದೋಷಮುಕ್ತಗೊಳಿಸಲಾಗಿತ್ತು. ಜತೆಗೆ, ನಾರಾಯಣನ್‌ ಅವರಿಗೆ ₹50 ಲಕ್ಷ  ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು.

 ಕೇರಳದಲ್ಲಿನ ಹಿರಿಯ ಪೊಲೀಸ್‌ ಅಧಿಕಾರಿಗಳು ನಾರಾಯಣನ್‌ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿದ್ದರು ಎಂದು ಸಿಬಿಐ ಹೇಳಿತ್ತು. ನಾರಾಯಣನ್ ಮೇಲಿನ ಆರೋಪ ಆಧಾರರಹಿತ ಎಂದು ಸಿಬಿಐ ಹೇಳಿತ್ತು.

 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು