ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲ್ಲುಶಿಕ್ಷೆಗೆ ಪರ್ಯಾಯ ಪರಿಶೀಲಿಸಿ: ಸುಪ್ರೀಂ ಕೋರ್ಟ್‌

Last Updated 21 ಮಾರ್ಚ್ 2023, 20:08 IST
ಅಕ್ಷರ ಗಾತ್ರ

ನವದೆಹಲಿ: ‘ಮರಣದಂಡನೆ ಜಾರಿ ಗೊಳಿಸುವಲ್ಲಿ, ಗಲ್ಲಿಗೇರಿಸುವ ವಿಧಾನ ಕ್ಕಿಂತ ಕಡಿಮೆ ನೋವಿನ ಮತ್ತು ಹೆಚ್ಚು ಮಾನವೀಯವಾದ ಬೇರೆ ವಿಧಾನಗಳಿವೆಯೇ ಎಂಬುದನ್ನು ಪರಿಶೀಲಿಸಿ ಮತ್ತು ಇದಕ್ಕೆ ಸಂಬಂಧಿಸಿ ದಂತೆ ಇರುವ ಮಾಹಿತಿಗಳನ್ನು ಕಲೆಹಾಕಿ’ ಎಂದು ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಈ ವಿಚಾರವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ದೃಷ್ಟಿಕೋನದಿಂದ ಪರಿಶೀಲಿಸಲು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಮತ್ತು ಏಮ್ಸ್‌ಗಳ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಸಿದ್ಧವಿದ್ದೇವೆ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ.

ಗಲ್ಲಿಗೇರಿಸುವ ಮೂಲಕ ಮರಣದಂಡನೆ ಜಾರಿಗೊಳಿಸುವ ವಿಧಾನವು ಅತ್ಯಂತ ನೋವಿನಿಂದ ಕೂಡಿದ್ದು ಮತ್ತು ಅಮಾನವೀಯವಾದದ್ದು. ಇಂತಹ ವಿಧಾನವನ್ನು ಕೈಬಿಡಬೇಕು ಎಂದು ವಕೀಲ ರಿಷಿ ಮಲ್ಹೋತ್ರಾ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರಿದ್ದ ಪೀಠವು ನಡೆಸಿತು.

‘ಜೀವಿಸುವ ಹಕ್ಕು, ಸಾಯುವವರೆಗೂ ಗೌರವಯುತವಾಗಿ ಜೀವಿಸುವ ಹಕ್ಕನ್ನೂ ಒಳಗೊಂಡಿದೆ. ಅಂದರೆ ವ್ಯಕ್ತಿ ಸಾಯುವಾಗ, ಆ ಸಾವು ಸಹ ಗೌರವಯುತವಾಗಿ ಇರಬೇಕು ಎಂದರ್ಥ. ಆದರೆ, ಗಲ್ಲಿಗೇರಿಸುವ ವಿಧಾನವು ಅತ್ಯಂತ ಅಮಾನವೀಯವಾದುದು. ಗಲ್ಲಿಗೇರಿಸುವ ಅಥವಾ ಗುಂಡು ಹೊಡೆಯುವ ಮೂಲಕ ಮರಣ
ದಂಡನೆಯನ್ನು ಜಾರಿಗೊಳಿಸಲು ಸೇನಾ ಕಾನೂನಿನಲ್ಲಿ ಅವಕಾಶವಿದೆ. ಆದರೆ, ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಿ ಗಲ್ಲಿಗೆ ಏರಿಸುವ ವಿಧಾನಕ್ಕೆ ಮಾತ್ರ ಅವಕಾಶವಿದೆ’ ಎಂದು ತಮ್ಮ ಅರ್ಜಿಯ ಪರವಾಗಿ ತಾವೇ ವಾದ ಮಂಡಿಸಿದ ರಿಷಿ ಅವರು ಹೇಳಿದರು.

‘ಗಲ್ಲಿಗೆ ಏರಿಸಿ 30 ನಿಮಿಷಗಳವರೆಗೆ ಹಾಗೇ ಬಿಡಲಾಗುತ್ತದೆ. ಆನಂತರ ವ್ಯಕ್ತಿ ಸತ್ತಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ವೈದ್ಯರು ಪರಿಶೀಲಿಸುತ್ತಾರೆ. ಅಲ್ಲಿಯವರೆಗೆ ವ್ಯಕ್ತಿ ನೋವು ಅನುಭವಿಸಬೇಕಾಗುತ್ತದೆ. ಕೆಲವು ದೇಶಗಳಲ್ಲಿ ಚುಚ್ಚುಮದ್ದು ನೀಡುವ ಮೂಲಕ, ವಿದ್ಯುತ್ ನೀಡುವ ಮೂಲಕ, ಗುಂಡು ಹೊಡೆಯುವ ಮೂಲಕ ಮರಣದಂಡನೆ ವಿಧಿಸಲಾಗುತ್ತದೆ. ಅಂತಹ ವಿಧಾನಗಳಲ್ಲಿ ಕೆಲವೇ ನಿಮಿಷಗಳಲ್ಲಿ ಸಾವು ಸಂಭವಿಸುತ್ತದೆ’ ಎಂದು ವಕೀಲ ರಿಷಿ ಪ್ರತಿಪಾದಿಸಿದರು ಎಂದು ಲೈವ್‌ಲಾ ವರದಿ ಮಾಡಿದೆ.

ಗುಂಡು ಹೊಡೆಯುವ ಮೂಲಕ ಮರಣದಂಡನೆ ಜಾರಿಗೊಳಿಸುವ ವಿಧಾನವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನಿರಾಕರಿಸಿದರು. ‘ಇದು ಅತ್ಯಂತ ಅನಾಗರಿಕವಾದ ವಿಧಾನ. ಇದನ್ನು ಅನುಸರಿಸಲು ಸಾಧ್ಯವಿಲ್ಲ. ಚುಚ್ಚುಮದ್ದು ನೀಡುವ ಮೂಲಕ ಮರಣದಂಡನೆ ವಿಧಿಸು ವುದೂ ಹೆಚ್ಚು ನೋವಿನಿಂದ ಕೂಡಿರು ತ್ತದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ’ ಎಂದು ಹೇಳಿದರು ಎಂದು ಲೈವ್‌ಲಾ ವರದಿ ಮಾಡಿದೆ.

‘ಪರ್ಯಾಯ ವಿಧಾನಗಳ ಬಗ್ಗೆ ಯಾವುದಾದರೂ ದತ್ತಾಂಶಗಳಿವೆಯೇ? ಇದಕ್ಕಾಗಿ ತಜ್ಞರ ಸಮಿತಿ ರಚಿಸಿಬೇಕೇ? ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮತ್ತು ಎಸ್‌ಪಿ ಉಪಸ್ಥಿತಿಯಲ್ಲಿ ಮರಣದಂಡನೆ ಜಾರಿಮಾಡಲಾಗುತ್ತದೆ. ಈ ವಿಚಾರವಾಗಿ ಕೆಲವು ವರದಿಗಳು ಇರಬಹುದು. ಅವು ಏನು ಹೇಳುತ್ತವೆ? ಗಲ್ಲಿಗೇರಿಸಿ ಮರಣದಂಡನೆ ವಿಧಿಸುವ ಸಂದರ್ಭದಲ್ಲಿ ಸಾವು ಸಂಭವಿಸಲು ತಗಲುವ ಸಮಯ ಎಷ್ಟು, ನೋವಿನ ಪ್ರಮಾಣವೆಷ್ಟು, ಶಿಕ್ಷೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಲಭ್ಯವಿರುವ ಸವಲತ್ತುಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸಿದ್ದರೆ ಅದನ್ನು ನ್ಯಾಯಾಲಯದ ಮುಂದೆ ಇಡಿ. ಪರಿಶೀಲನೆಗೆ ಅನುಕೂಲವಾಗುತ್ತದೆ. ಈ ಮಾಹಿತಿಗಳನ್ನು ಮುಂದಿನ ವಾರ ಸಲ್ಲಿಸಿ. ಸಮಿತಿ ರಚನೆಗೆ ಆದೇಶಿಸುತ್ತೇವೆ. ಆನಂತರ ಈ ವಿಚಾರಣೆ ಮುಂದುವರಿಸಬಹುದು’ ಎಂದು ಅಟಾರ್ನಿ ಜನರಲ್ ಆರ್‌.ವೆಂಕಟರಮಣಿ ಅವರಿಗೆ ಪೀಠವು ಸೂಚಿಸಿತು.

ಸುಧಾರಣೆ ಸಾಧ್ಯತೆ ಇರದಿದ್ದರಷ್ಟೇ ಮರಣದಂಡನೆ

ಮರಣದಂಡನೆ ವಿಧಿಸಲು, ಅಪರಾಧ ಕೃತ್ಯದ ಘೋರ ಸ್ವರೂಪವೊಂದೇ ಆಧಾರವಲ್ಲ. ಅಪರಾಧಿಯು ಸುಧಾರಣೆಯಾಗುವ ಸಾಧ್ಯತೆ ಇಲ್ಲದೇ ಇದ್ದಾಗ ಮಾತ್ರ ಮರಣದಂಡನೆ ವಿಧಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

2009ರಲ್ಲಿ ಚೆನ್ನೈನಲ್ಲಿ ನಡೆದಿದ್ದ, ಏಳು ವರ್ಷದ ಬಾಲಕನ ಅಪಹರಣ ಮತ್ತು ಹತ್ಯೆ ಕೃತ್ಯದಲ್ಲಿ ಮರಣದಂಡನೆ ಎದುರಿಸುತ್ತಿದ್ದ ಅಪರಾಧಿಯು ಶಿಕ್ಷೆ ಪ್ರಮಾಣ ಇಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ. ಅರ್ಜಿಯ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಪಿ.ಎಸ್‌.ನರಸಿಂಹ ಅವರಿದ್ದ ಪೀಠವು ಹೀಗೆ ಹೇಳಿದೆ.

ಮರಣದಂಡನೆಯನ್ನು 20 ವರ್ಷಗಳ ಜೈಲುಶಿಕ್ಷೆಯಾಗಿ ಪರಿವರ್ತಿಸಿದೆ. ಶಿಕ್ಷಾವಧಿ ಕಡಿತಕ್ಕೆ ಅವಕಾಶವಿಲ್ಲ ಎಂದು ಪೀಠವು ಹೇಳಿದೆ.

***

ಇಂದಿನ ವಿಜ್ಞಾನವು, ಗಲ್ಲಿಗೇರಿಸುವುದೇ ಹೆಚ್ಚು ಸೂಕ್ತವಾದ ವಿಧಾನ ಎಂದು ಹೇಳುತ್ತದೆಯೇ ಅಥವಾ ಹೆಚ್ಚು ಮಾನವೀಯವಾದ ಬೇರೆ ವಿಧಾನಗಳಿವೆ ಎಂದು ಹೇಳುತ್ತದೆಯೇ?
– ಡಿ.ವೈ.ಚಂದ್ರಚೂಡ್‌, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT