ನವದೆಹಲಿ (ಪಿಟಿಐ): ತೆಲಂಗಾಣ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ 10 ಮಸೂದೆಗಳಿಗೆ ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಏಪ್ರಿಲ್ 10ಕ್ಕೆ ಮುಂದೂಡಿದೆ.
ಈ ವಿಷಯದ ಬಗ್ಗೆ ರಾಜ್ಯಪಾಲರ ಜತೆ ಚರ್ಚೆ ನಡೆಸಲಾಗಿದೆ ಮತ್ತು ಮುಂದಿನ ವಿಚಾರಣೆಯ ದಿನಾಂಕದಂದು ಹೇಳಿಕೆ ನೀಡುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.
‘ಸಾಲಿಸಿಟರ್ ಜನರಲ್ ಅವರು ರಾಜ್ಯಪಾಲರೊಂದಿಗೆ ಮಾತನಾಡಿ, ಮುಂದಿನ ವಿಚಾರಣೆಯ ದಿನಾಂಕದಂದು ಹೇಳಿಕೆ ನೀಡಬಹುದು. ಈ ವಿಷಯವನ್ನು ಏಪ್ರಿಲ್ 10 ರಂದು ಪಟ್ಟಿ ಮಾಡಿ’ ಎಂದು ಪೀಠ ಹೇಳಿದೆ.
ತೆಲಂಗಾಣ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ದುಶ್ಯಂತ್ ದವೆ, ‘ಮಧ್ಯಪ್ರದೇಶದಲ್ಲಿ ರಾಜ್ಯಪಾಲರು ಏಳು ದಿನಗಳಲ್ಲಿ ಮಸೂದೆಗಳಿಗೆ ಅನುಮೋದನೆ ನೀಡಿದರೆ, ಗುಜರಾತ್‌ನಲ್ಲಿ ತಿಂಗಳೊಳಗೆ ಅನುಮೋದನೆ ನೀಡಲಾಗಿದೆ. ತೆಲಂಗಾಣದಲ್ಲಿ ಏಕೆ ವಿಳಂಬವಾಗುತ್ತಿದೆ? ಸಾಲಿಸಿಟರ್ ಜನರಲ್ ಅವರು ಮಧ್ಯಪ್ರವೇಶಿಸಬೇಕು ಮತ್ತು ಅವರು ರಾಜ್ಯಪಾಲರಿಗೆ ಸಲಹೆ ನೀಡಬಹುದು’ ಎಂದು ಹೇಳಿದರು.
ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ಮಾರ್ಚ್ 20ರಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.