ಗುರುವಾರ , ಡಿಸೆಂಬರ್ 1, 2022
20 °C

ದೇಗುಲಗಳ ಟ್ರಸ್ಟ್‌ಗಳಲ್ಲಿ ರಾಜಕಾರಣಿಗಳಿಗೇನು ಕೆಲಸ : ಸುಪ್ರೀಂ ಕೋರ್ಟ್ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇವಾಲಯ ಟ್ರಸ್ಟ್‌ಗಳ ನಿರ್ವಹಣಾ ಸಮಿತಿಗೆ ರಾಜಕಾರಣಿಗಳ ನೇಮಕ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಆರೋಪಗಳನ್ನು ಎದುರಿಸುತ್ತಿರುವವರು, ಏಕತೆ ಮತ್ತು ನಂಬಿಕೆಯ ಕೊರತೆ ಇರುವವರು ಹೇಗೆ ಇಂತಹ ಸಮಿತಿಗಳಿಗೆ ನೇಮಕವಾಗುತ್ತಾರೆ ಎಂದು ಉನ್ನತ ನ್ಯಾಯಾಲಯ ಆಶ್ಚರ್ಯಪಟ್ಟಿದೆ.

ಶ್ರೀ ಸಾಯಿಬಾಬಾ ಸಂಸ್ಥಾನ ಆಡಳಿತ ಮಂಡಳಿಗೆ ಧರ್ಮದರ್ಶಿಗಳ ನೇಮಕಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ ಮತ್ತು ಸಿ.ಟಿ. ರವಿಕುಮಾರ್‌ ಅವರಿದ್ದ ಪೀಠವು, ಕೆಲವು ದೇವಸ್ಥಾನಗಳ ಆಡಳಿತ ನಿರ್ವಹಣೆಯನ್ನು ತಮ್ಮ ಸುಪರ್ದಿಗೆ ಪಡೆಯಲು ರಾಜಕಾರಣಿಗಳು ಯಾಕಿಷ್ಟು ಸಕ್ರಿಯರಾಗಿದ್ದಾರೆ ಎಂದು ಪ್ರಶ್ನಿಸಿತು.

ಸೆಪ್ಟೆಂಬರ್ 13ರಂದು ಬಾಂಬೆ ಹೈಕೋರ್ಟ್ ರದ್ದುಪಡಿಸಿದ ಟ್ರಸ್ಟ್‌ನ ವ್ಯವಸ್ಥಾಪಕ ಸಮಿತಿಯು ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನಾದ ಸದಸ್ಯರನ್ನು ಒಳಗೊಂಡಿತ್ತು ಎನ್ನುವುದನ್ನು ಪೀಠವು ಗಮನಿಸಿತು. ‘ಪಕ್ಷವನ್ನು ಮೀರುವ ಸಮಯ ಬಂದಿದೆ. ಪಕ್ಷದ ಹೆಸರಿನಲ್ಲಿ ಇದೆಲ್ಲ ಇನ್ನು ಮುಂದೆ ನಡೆಯುವುದಿಲ್ಲ’ ಎಂದು ಪೀಠ ಚಾಟಿ ಬೀಸಿದೆ.

 ‘ಜನರು ಧರ್ಮ, ವರ್ಗ, ಪಂಥ, ಜಾತಿ ಮೀರಿ ದೇವಾಲಯಗಳ ಮೇಲೆ ನಂಬಿಕೆ ಇರಿಸಿಕೊಂಡಿದ್ದಾರೆ. ಭಕ್ತಿಯಿಂದ ಪೂಜಿಸುತ್ತಾರೆ. ಅಂತಹ ದೇವಾಲಯಗಳ ಆಡಳಿತ ಸುಧಾರಿಸಲು ವಿವಿಧ ಕ್ಷೇತ್ರಗಳ ಪರಿಣತರನ್ನು, ಉತ್ತಮ ನಡತೆಯುಳ್ಳವರನ್ನು ನೇಮಿಸುವ ಅಗತ್ಯವಿದೆ. ಆಗ ದೇಗುಲಗಳಲ್ಲಿ ಶೋಷಣೆ ಇರುವುದಿಲ್ಲ. ಭಕ್ತಾದಿಗಳಿಗೂ ಉತ್ತಮ ಸೌಕರ್ಯಗಳು ಲಭಿಸುತ್ತವೆ’ ಎಂದು ಪೀಠ ಹೇಳಿದೆ.  

ಮಹಾರಾಷ್ಟ್ರ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ಪೀಠದ ಅಭಿಪ್ರಾಯವನ್ನು ಒಪ್ಪಿಕೊಂಡು, ‘ಧಾರ್ಮಿಕ ಸ್ಥಳಗಳ ಸಮಿತಿಗಳು ರಾಜಕೀಯ ಪಕ್ಷಗಳ ಉಂಬಳಿಗಳಾಗಬಾರದು’ ಎಂದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರ ವಾದಿಸಿದ ಹಿರಿಯ ವಕೀಲ ಶೇಖರ್‌ ನಾಫಾದೆ ಅವರು, ಸಿದ್ಧಿವಿನಾಯಕ ದೇವಾಲಯ ಸೇರಿ ಮಹಾರಾಷ್ಟ್ರದ ಇತರ ಎಲ್ಲ ದೇವಾಲಯಗಳಲ್ಲಿ ಇಂತಹ ನೇಮಕಾತಿಗೆ ಯಾವುದೇ ಮಾನದಂಡಗಳನ್ನು ಸರ್ಕಾರ ರೂಪಿಸಿಲ್ಲವೆಂದು ಪೀಠದ ಗಮನಕ್ಕೆ ತಂದರು.

ಪೀಠವು ಹೈಕೋರ್ಟ್ ಆದೇಶಕ್ಕೆ ತಡೆ ನೀಡದೆ, ಸಂಬಂಧಿಸಿದವರಿಗೆ ನೋಟಿಸ್ ನೀಡಿ, ನವೆಂಬರ್‌ನಲ್ಲಿ ಅರ್ಜಿ ವಿಚಾರಣೆಯನ್ನು ಪರಿಗಣಿಸುವುದಾಗಿ ಹೇಳಿತು. 

ಹೊಸ ಸಮಿತಿ ರಚನೆಯಾಗುವವರೆಗೆ ಅಹಮದ್‌ ನಗರದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಶಿರಡಿ ಟ್ರಸ್ಟ್‌ನ ತಾತ್ಕಾಲಿಕ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರಲಿದ್ದಾರೆ ಎಂದು ಬಾಂಬೆ ಹೈಕೋರ್ಟ್‌ ಆದೇಶ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು