ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಮ ಕಾರಂತ ಬಡಾವಣೆಯ ಕಾನೂನುಬದ್ಧ ಕಟ್ಟಡಗಳಿಗೆ ರಕ್ಷಣೆ ಅಗತ್ಯ: ಸುಪ್ರೀಂ

Last Updated 6 ಡಿಸೆಂಬರ್ 2020, 14:26 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನಲ್ಲಿ ‘ಡಾ.ಕೆ.ಶಿವರಾಮ ಕಾರಂತ ಬಡಾವಣೆಗಾಗಿ ಗುರುತಿಸಲಾದ 650 ಎಕರೆ ಪ್ರದೇಶದಲ್ಲಿ ಕಾನೂನುಬದ್ಧವಾಗಿ ನಿರ್ಮಾಣವಾಗಿರುವ ಕಟ್ಟಡಗಳು ಮತ್ತು ವಾಸದ ಮನೆಗಳಿಗೆ ರಕ್ಷಣೆ ಒದಗಿಸಲು ಸುಪ್ರಿಂ ಕೋರ್ಟ್ ತೀರ್ಮಾನಿಸಿದೆ. ಈ ಬಡಾವಣೆ ಅಭಿವೃದ್ಧಿಪಡಿಸಲು ಸರ್ಕಾರ 2008ರಲ್ಲಿ ತೀರ್ಮಾನಿಸಿತ್ತು.

ಈ ಬಡಾವಣೆ ನಿರ್ಮಾಣಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಅನೇಕ ಜಾಗಗಳನ್ನು ಡಿನೋಟಿಫೈ ಮಾಡಲು ಸರ್ಕಾರ ತೀರ್ಮಾನಿಸಿತ್ತು. ಕೆಲವೊಂದು ಜಮೀನುಗಳನ್ನು ಹೈಕೋರ್ಟ್‌ ಸೂಚನೆಯ ಮೇರೆಗೇ ಡಿನೋಟಿ ಫೈ ಮಾಡಲಾಗಿತ್ತು. ಈ ಜಮೀನುಗಳ ಮಾಲೀಕರು ಅನುಮತಿ ಪಡೆದೇ ಕಟ್ಟಡ ನಿರ್ಮಿಸಿದ್ದರು. ಆದರೆ,ಬಡಾವಣೆ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬಾರದು ಎಂದು ಸುಪ್ರೀಂ ಕೋರ್ಟ್ 2018ರ ಆಗಸ್ಟ್ 3ರಂದು ಆದೇಶ ಮಾಡಿತ್ತು. ಇದು ಬಿಡಿಎಯನ್ನು ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಇಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದ ಸಾವಿರಾರು ಮಂದಿ ಇದರಿಂದ ಕಳವಳಗೊಂಡಿದ್ದರು.

ಈಗ ಡಿಸೆಂಬರ್ 3ರಂದು ನೀಡಿರುವ ಆದೇಶದಲ್ಲಿ ನ್ಯಾಯಮೂರ್ತಿಗಳಾದ ಎಸ್‌.ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠವು ಅಗತ್ಯ ನಿಯಮ, ಅನುಮತಿಗಳಡಿ ನಿರ್ಮಾಣವಾಗಿರುವ ಕಟ್ಟಡಗಳಿಗೆ ರಕ್ಷಣೆ ಒದಗಿಸುವಂತೆ ಸೂಚಿಸಿದೆ.

ಕಟ್ಟಡಗಳ ನೆಲಸಮ ಪ್ರಕ್ರಿಯೆಯಲ್ಲಿ ಕೆಲವೊಂದು ರಕ್ಷಣೆ ಅಗತ್ಯ ಎಂದು ನಾವು ಅಭಿಪ್ರಾಯಪಡುತ್ತೇವೆ. ಬಡಾವಣೆ ಅಭಿವೃದ್ಧಿಪಡಿಸುವ ಉದ್ದೇಶವೇ ವಸತಿ ಸೌಲಭ್ಯವನ್ನು ಕಲ್ಪಿಸುವುದು. ಹೀಗಾಗಿ, ನಿಯಮಾನುಸಾರ ನಿರ್ಮಾಣ ಮಾಡಿರುವ, ಬಡವರು ಮತ್ತು ಮಧ್ಯಮವರ್ಗದ ಕುಟುಂಬಗಳ ಕಟ್ಟಡಗಳನ್ನು ಕೆಡಹುವ ಮೂಲಕ ಈ ಉದ್ದೇಶಕ್ಕೆ ಧಕ್ಕೆ ತರಬಾರದು ಎಂದು ಪೀಠವು ಹೇಳಿತು.

‌ಅಲ್ಲದೇ, ಕೋರ್ಟ್ ಇದೇ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಬಿಡಿಎ ಮಾಜಿ ಆಯುಕ್ತರಾದ ಜೈಕರ್ ಜರೋಮ್, ಎಸ್.ಟಿ.ರಮೇಶ್ ಇದರ ಸದಸ್ಯರಾಗಿರುವರು. ಅಧಿಸೂಚಿತ ಪ್ರದೇಶದಲ್ಲಿರುವ ಕ್ರಮಬದ್ಧ ಕಟ್ಟಡಗಳನ್ನು ಈ ಸಮಿತಿಯು ಗುರುತಿಸಲಿದೆ ಎಂದು ತಿಳಿಸಿತು.

ಸಮಿತಿಯು ಕಟ್ಟಡ ಮಾಲೀಕರ ಪ್ರತಿಯೊಂದು ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ಅನುಮತಿ ಪಡೆದ ಬಳಿಕವೇ ನಿರ್ಮಾಣ ಕಾರ್ಯ ನಡೆದಿದೆಯೇ ಎಂಬುದನ್ನು ಸಮಿತಿಯು ಗುರುತಿಸಬೇಕು. ಮುಂದಿನ ಆರು ತಿಂಗಳಲ್ಲಿ ಈ ಕುರಿತು ವರದಿಯನ್ನು ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT