ರಾಜ್ಯಗಳಿಗೆ ಒಬಿಸಿ ಘೋಷಿಸುವ ಅಧಿಕಾರ ಇಲ್ಲ: ಸುಪ್ರೀಂ

ನವದೆಹಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಉದ್ದೇಶದಿಂದ ಸಮುದಾಯಗಳನ್ನು ಇತರ ಹಿಂದುಳಿದ ವರ್ಗಗಳು ಎಂದು (ಒಬಿಸಿ) ಘೋಷಿಸುವ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿರುವ ಮೇ 5ರ ತೀರ್ಪನ್ನು ಮರು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಈ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೆಲ್ಮನವಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಸಮುದಾಯಗಳನ್ನು ಹಿಂದುಳಿದವು ಎಂದು ಗುರುತಿಸುವ ಏಕೈಕ ಅಧಿಕಾರ ರಾಷ್ಟ್ರಪತಿಗೆ ಮಾತ್ರ ಇದೆ ಎಂದು ನ್ಯಾಯಾಲಯ ಹೇಳಿದೆ.
ಮರಾಠಾ ಕೋಟಾವನ್ನು ರದ್ದುಪಡಿಸುವಾಗ, ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ಅಧ್ಯಕ್ಷತೆಯ ಐವರು ನ್ಯಾಯಮೂರ್ತಿಗಳ ಪೀಠವು ಮೇ 5 ರಂದು ನೀಡಿದ್ದ ತೀರ್ಪಿನಲ್ಲಿ ಸಂವಿಧಾನದ 102ನೇ ತಿದ್ದುಪಡಿಯ ಮಾನ್ಯತೆಯನ್ನು ಎತ್ತಿಹಿಡಿದು, ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಹಕ್ಕು ಇದೆ ಎಂದು ಹೇಳಿತ್ತು. ಅಲ್ಲದೆ, ರಾಜ್ಯಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಗಳನ್ನು ಸಿದ್ಧಪಡಿಸುವ ಅಧಿಕಾರ ಇಲ್ಲ ಎಂದೂ ನ್ಯಾಯಾಲಯ ಘೋಷಿಸಿತ್ತು.
ಈ ತೀರ್ಪಿನ ವಿರುದ್ಧ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪರಿಶೀಲನಾ ಅರ್ಜಿ ಸಲ್ಲಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.