ಭಾನುವಾರ, ಮೇ 29, 2022
20 °C

ಪೊಕ್ಸೊ ಆರೋಪಿ ಖುಲಾಸೆ: ಮೇಲ್ಮನವಿಗಳ ತೀರ್ಪು ಕಾಯ್ದಿರಿಸಿದ ಸುಪ್ರೀಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೊಕ್ಸೊ) ಅಡಿ ದಾಖಲಾದ ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿ, ಬಾಂಬೆ ಹೈಕೋರ್ಟ್‌ ನೀಡಿದ್ದ ವಿವಾದಾತ್ಮಕ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ.

ಕಕ್ಷಿದಾರರ ವಕೀಲರ ವಾದಗಳನ್ನು ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠವು ಆಲಿಸಿತು. ಲಿಖಿತ ಹೇಳಿಕೆಗಳನ್ನು ದಾಖಲಿಸುವಂತೆ ಸೂಚಿಸಿತು.

ವಾದಿ ಮತ್ತು ಪ್ರತಿವಾದಿಗಳು ತಮ್ಮ ಲಿಖಿತ ಹೇಳಿಕೆಗಳನ್ನು ಮೂರು ದಿನಗಳ ಒಳಗೆ ಸಲ್ಲಿಸಬೇಕು ಎಂದು ತಿಳಿಸಿದ ಪೀಠ ಆದೇಶವನ್ನು ಕಾಯ್ದಿರಿಸಿದೆ. ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೂ ಪೀಠ ಒಳಗೊಂಡಿದೆ.

ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಸಲ್ಲಿಸಿರುವ ಹೇಳಿಕೆಗಳನ್ನು ತನ್ನ ಹೇಳಿಕೆಯಲ್ಲಿ ಸೇರಿಸಿಕೊಳ್ಳುವುದಾಗಿ ಮಹಾರಾಷ್ಟ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಬಾಂಬೆ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪು ‘ಅಪಾಯಕಾರಿ ಮತ್ತು ಅತಿರೇಕಕ್ಕೆ ಪೂರ್ವನಿದರ್ಶನ’ವಾಗಿದೆ. ಈ ತೀರ್ಪನ್ನು ಹಿಂಪಡೆಯುವ ಅಗತ್ಯವಿದೆ ಎಂದು ವೇಣುಗೋಪಾಲ್ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

ಅಟಾರ್ನಿ ಜನರಲ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಪ್ರತ್ಯೇಕ ಮೇಲ್ಮನವಿಗಳನ್ನು ಆಲಿಸುತ್ತಿರುವ ಸುಪ್ರೀಂ ಕೋರ್ಟ್, ಜನವರಿ 27ರಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ (ಪೋಕ್ಸೊ) ಕಾಯ್ದೆಯಡಿ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿದ ಆದೇಶಕ್ಕೆ ತಡೆ ನೀಡಿತ್ತು.

‘ಬಾಲಕಿಯ ಸ್ತನಗಳನ್ನು ಆಕೆಯು ತೊಟ್ಟ ಉಡುಪಿನ ಮೇಲಿನಿಂದ ಸ್ಪರ್ಶಿಸಿದರೆ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗದು; ಚರ್ಮದಿಂದ ಚರ್ಮದ ಸ್ಪರ್ಶವಾಗಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೊಕ್ಸೊ) ಅಡಿ ಅಪರಾಧ ಎಂದು ಪರಿಗಣಿಸಲಾಗುತ್ತದೆ’ ಎಂದು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ನ್ಯಾಯಮೂರ್ತಿ ಪುಷ್ಪಾ ಗಣೇಡಿವಾಲಾ ಎರಡು ತೀರ್ಪು ನೀಡಿದ್ದರು.

ಈ ತೀರ್ಪುಗಳಿಗೆ ತಡೆಯಾಜ್ಞೆ ನೀಡುವಾಗ ಸುಪ್ರೀಂಕೋರ್ಟ್‌ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಟಾರ್ನಿ ಜನರಲ್‌ಗೆ ಅನುಮತಿ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು