ಶನಿವಾರ, ಅಕ್ಟೋಬರ್ 1, 2022
20 °C
‘ಖುಲಾ’ ಮೂಲಕ ಮಹಿಳೆ ವಿಚ್ಛೇದನ ಪಡೆಯಲು ಸಾಧ್ಯ’

‘ತಲಾಖ್‌–ಎ–ಹಸನ್’, ತ್ರಿವಳಿ ತಲಾಖ್‌ಗೆ ಸಮಾನವಲ್ಲ: ಸುಪ್ರೀಂ ಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಸ್ಲಿಮರಲ್ಲಿ ವಿಚ್ಛೇದನ ನೀಡುವ ಸಲುವಾಗಿ ರೂಢಿಯಲ್ಲಿರುವ ‘ತಲಾಖ್‌–ಎ–ಹಸನ್‌’ ಎಂಬುದು ತ್ರಿವಳಿ ತಲಾಖ್‌ಗೆ ಸಮಾನವಲ್ಲ. ಅಲ್ಲದೇ, ವಿಚ್ಛೇದನ ಪಡೆಯ ಬಯಸುವ ಮಹಿಳೆಯರು ‘ಖುಲಾ’ ಎಂಬ ಪದ್ಧತಿಯ ಆಯ್ಕೆಯನ್ನು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಗಾಜಿಯಾಬಾದ್‌ ನಿವಾಸಿ ಬೆನಜೀರ್‌ ಹೀನಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಹಾಗೂ ಎಂ.ಎಂ.ಸುಂದ್ರೇಶ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

‘ಒಂದು ವೇಳೆ ಪತಿ ಹಾಗೂ ಪತ್ನಿ ಒಟ್ಟಿಗೇ ಜೀವನ ಮಾಡದಿದ್ದಲ್ಲಿ, ಸಂವಿಧಾನದ 142ನೇ ವಿಧಿ ಪ್ರಕಾರ ಅವರಿಗೆ ವಿವಾಹ ವಿಚ್ಛೇದನ ಮಂಜೂರು ಮಾಡಬಹುದಾಗಿದೆ’ ಎಂದು ನ್ಯಾಯಪೀಠ ಹೇಳಿತು.

‘ತಲಾಖ್‌–ಎ–ಹಸನ್‌’ ಹಾಗೂ ಏಕಪಕ್ಷೀಯ ಮತ್ತು ನ್ಯಾಯಾಂಗದ ವ್ಯಾಪ್ತಿ ಹೊರತಾದ ಎಲ್ಲ ರೀತಿಯ ತಲಾಖ್‌ ಪದ್ಧತಿಗಳನ್ನು ಅಸಾಂವಿಧಾನಿಕ ಹಾಗೂ ಅನೂರ್ಜಿತ ಎಂಬುದಾಗಿ ಘೋಷಿಸಬೇಕು. ಇಂಥ ಪದ್ಧತಿಗಳು ನಿರಂಕುಶ, ಅತಾರ್ಕಿಕವಾಗಿದ್ದು, ಇವುಗಳಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬುದಾಗಿ ಘೋಷಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಪಿಂಕಿ ಆನಂದ್‌, ‘ತ್ರಿವಳಿ ತಲಾಖ್‌ ಅನ್ನು ಸುಪ್ರೀಂಕೋರ್ಟ್‌ ಅಸಾಂವಿಧಾನಿಕ ಎಂದು ಘೋಷಿಸಿದ್ದರೂ, ತಲಾಖ್‌–ಎ–ಹಸನ್‌ ಪದ್ಧತಿ ಬಗ್ಗೆ ಯಾವ ನಿರ್ಧಾರವನ್ನು ಪ್ರಕಟಿಸಿಲ್ಲ’ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

‘ಮೇಲ್ನೋಟಕ್ಕೆ, ಅರ್ಜಿದಾರರ ವಾದಕ್ಕೆ ಸಹಮತ ಇಲ್ಲ. ಈ ವಿಷಯವು ಮತ್ತೊಂದು ಕಾರ್ಯಸೂಚಿಯಾಗುವುದನ್ನು ನ್ಯಾಯಾಲಯ ಇಷ್ಟಪಡುವುದಿಲ್ಲ’ ಎಂದು ನ್ಯಾಯಪೀಠ ಹೇಳಿತು.

‘ಕೋರ್ಟ್‌ನ ಮಧ್ಯಪ್ರವೇಶ ಇಲ್ಲದೆಯೇ, ‘ಮುಬಾರತ್’ ಮೂಲಕ ಅರ್ಜಿದಾರರು ವಿಚ್ಛೇದನ ಪಡೆಯಲು ಸಾಧ್ಯವಿದೆ. ಈ ಬಗ್ಗೆ ಪರಿಶೀಲನೆ ಮಾಡಿ’ ಎಂದು ಪಿಂಕಿ ಆನಂದ್‌ ಅವರಿಗೆ ಸೂಚಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಆಗಸ್ಟ್‌ 29ಕ್ಕೆ ಮುಂದೂಡಿತು.

ಇಸ್ಲಾಂನಲ್ಲಿ, ಪುರುಷರು ವಿಚ್ಛೇದನ ಪಡೆಯಲು ‘ತಲಾಖ್‌’ ಪದ್ಧತಿ ಬಳಸಬಹುದಾಗಿದ್ದರೆ, ಮಹಿಳೆಯರು ‘ಖುಲಾ’ದ ನೆರವು ಪಡೆಯಬಹುದಾಗಿದೆ.  ‘ತಲಾಖ್‌–ಎ–ಹಸನ್’ ಎಂಬ ಪದ್ಧತಿ ಮೂಲಕವೂ ವಿಚ್ಛೇದನ ಪಡೆಯಬಹುದಾಗಿದೆ. ತಿಂಗಳಿಗೆ ಒಂದು ಬಾರಿಯಂತೆ ಮೂರು ತಿಂಗಳು ‘ತಲಾಖ್‌–ಎ–ಹಸನ್’ ಎಂದು ಹೇಳಬೇಕು. ಈ ರೀತಿ ಮೂರೂ ತಿಂಗಳು ‘ತಲಾಖ್‌–ಎ–ಹಸನ್‌’ ಎಂಬುದಾಗಿ ಹೇಳಿದಾಗ ಹಾಗೂ ಈ ಅವಧಿಯಲ್ಲಿ ಪತಿ–ಪತ್ನಿ ಒಟ್ಟಿಗೇ ಬಾಳದಿದ್ದಲ್ಲಿ, ವಿಚ್ಛೇದನ ನೀಡಲಾಗುತ್ತದೆ.

ಮೊದಲ ಅಥವಾ ಎರಡನೇ ತಿಂಗಳಲ್ಲಿ ‘ತಲಾಖ್‌–ಎ–ಹಸನ್‌’ ಎಂಬುದಾಗಿ ಹೇಳಿದ ಮೇಲೂ, ಅವರು ಒಟ್ಟಿಗೆ ಜೀವನ ನಡೆಸುತ್ತಿದ್ದರೆ, ಅವರು ಒಂದಾಗಿದ್ದಾರೆ ಎಂದು ಭಾವಿಸಲಾಗುತ್ತದೆ ಹಾಗೂ ಇದಕ್ಕೂ ಮೊದಲು ಹೇಳಿದ ‘ತಲಾಖ್’ ಅಸಿಂಧು ಎಂದೇ ಪರಿಗಣಿಸಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು