ಭಾನುವಾರ, ಜುಲೈ 3, 2022
24 °C
ಮರಬಿದ್ದಿರುವ ಬೆಳವಣಿಗೆ ಒಂದು ದೈವೇಚ್ಚೆ (ಆ್ಯಕ್ಟ್ ಆಫ್ ಗಾಡ್) ಎಂದ ’ಸುಪ್ರೀಂ‘

ಮರ ಬಿದ್ದು ಗಾಯಗೊಂಡರೆ ಬಿಬಿಎಂಪಿ ಪರಿಹಾರ ನೀಡಬೇಕಿಲ್ಲ: ಸುಪ್ರೀಂ ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಳೆ, ಗಾಳಿ ಸಂದರ್ಭದಲ್ಲಿ ಮರ ಬಿದ್ದು ಗಾಯಗೊಂಡಿದ್ದ ಪ್ರಕರಣವೊಂದರಲ್ಲಿ ವ್ಯಕ್ತಿಗೆ ಬೆಂಗಳೂರು ಮಹಾನಗರಪಾಲಿಕೆಯು (ಬಿಬಿಎಂಪಿ) ಪರಿಹಾರವನ್ನು ಕೊಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

‘ಮರಬಿದ್ದಿರುವ ಬೆಳವಣಿಗೆ ಒಂದು ದೈವೇಚ್ಚೆ (ಆ್ಯಕ್ಟ್ ಆಫ್ ಗಾಡ್). ಇದಕ್ಕೆ ಸ್ಥಳೀಯ ಸಂಸ್ಥೆಯನ್ನು ಹೊಣೆ ಮಾಡಲಾಗದು’ ಎಂದೂ ಕೋರ್ಟ್ ವ್ಯಾಖ್ಯಾನಿಸಿದೆ. ಈ ಪ್ರಕರಣದಲ್ಲಿ ವ್ಯಕ್ತಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು.

ಬಿಬಿಎಂಪಿ ಈ ಆದೇಶವನ್ನು ‘ಸುಪ್ರೀಂ’ನಲ್ಲಿ ಪ್ರಶ್ನಿಸಿತ್ತು. ಆಯುಕ್ತರನ್ನು ಪ್ರತಿನಿಧಿಸಿದ್ದ ವಕೀಲ ಸಂಜಯ್ ನುಲಿ ಅವರ ವಾದವನ್ನು ಆಲಿಸಿದ ಪೀಠ, ಅರ್ಜಿದಾರರಾದ ಕೆ.ಕೆ.ಉಮೇಶ್ ಮತ್ತಿತರರಿಗೆ ನೋಟಿಸ್ ಜಾರಿ ಮಾಡಿತು. ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್ ಮತ್ತು ಸಂಜಯ್‌ ಖನ್ನಾ ಅವರು ಪೀಠದಲ್ಲಿ ಇದ್ದರು.

ದುರದೃಷ್ಟಕರ ದಿನದಂದು ಭಾರಿ ಮಳೆ, ಗಾಳಿ ಇತ್ತು. ಕೈಮೀರಿದ ಕಾರಣಗಳಿಂದಾಗಿ ಅವಘಡ ನಡೆದಿದೆ ಎಂದು ಸ್ಥಳೀಯ ಸಂಸ್ಥೆ ಹೇಳಿದೆ ಎಂಬ ಅಂಶ ಉಲ್ಲೇಖಿಸಿದ ಪೀಠವು, ‘ಈ ಪ್ರಕಣದಲ್ಲಿ ಹೊಣೆಗಾರಿಕೆಯನ್ನು ತಿರುಚಲಾಗದು’ ಎಂದಿದೆ.

ಬಿಬಿಎಂಪಿಗೆ ಮಾತ್ರ ಅನ್ವಯವಾಗುವಂತೆ ಸೆಪ್ಟೆಂಬರ್ 10, 2020ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ಪೀಠ ತಿಳಿಸಿತು.

ಪ್ರಕರಣದಲ್ಲಿ ಘೋಷಿಸಲಾದ ಒಟ್ಟು ಪರಿಹಾರ ಮೊತ್ತ ₹17.10 ಲಕ್ಷದಲ್ಲಿ ಶೇ 25ರಷ್ಟನ್ನು ಬಿಬಿಎಂಪಿ ಪಾವತಿಸಬೇಕು ಎಂದು ಹೈಕೋರ್ಟ್ ನೀಡಿದ್ದ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ಬಿಬಿಎಂಪಿ ಅರ್ಜಿ ಸಲ್ಲಿಸಿತ್ತು.

‘ಈ ಪ್ರಕರಣದಲ್ಲಿ ವ್ಯಕ್ತಿಯ ನಿರ್ಲಕ್ಷ್ಯವೂ ಇದೆ. ಭಾರಿ ಮಳೆ, ಗಾಳಿ ಇದ್ದರೂ ಆಟೊದಲ್ಲಿ ತೆರಳುತ್ತಿದ್ದರು. ಆಟೊವನ್ನು ಹಳೆಯ ಮರದ ಕೆಳಗೆ ನಿಲ್ಲಿಸಲಾಗಿತ್ತು. ಮಳೆ ಸಂದರ್ಭದ ಅನಾಹುತಗಳಿಗೆ ಅರ್ಜಿದಾರರನ್ನು (ಸ್ಥಳೀಯ ಸಂಸ್ಥೆ) ಹೊಣೆ ಮಾಡಲಾಗದು. ಇಂಥದನ್ನು ಪುರಸ್ಕರಿಸಿದರೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗಲಿದೆ. ಇನ್ನು ಹಲವರು ಪರಿಹಾರ ಕೋರಬಹುದು. ಆಗ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗುವುದಿಲ್ಲ’ ಎಂದು ಬಿಬಿಎಂಪಿ ಪ್ರತಿಪಾದಿಸಿತ್ತು.

ಜೂನ್‌ 23, 2009ರಂದು ಅವಘಡ ನಡೆದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮರವೊಂದು ಆಟೊ ಮೇಲೆ ಬಿದ್ದಿತ್ತು. ಒಬ್ಬರು ಸತ್ತಿದ್ದು, ಇನ್ನೊಬ್ಬರು ಗಾಯಗೊಂಡಿದ್ದರು. ಪ್ರಾಕೃತಿಕ ವಿಕೋಪದಿಂದ ಘಟನೆ ನಡೆದಿದೆ ಎಂದು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಅರ್ಜಿ ವಜಾ ಮಾಡಿತ್ತು.

ಆದರೆ, ಹೈಕೋರ್ಟ್ ಅರ್ಜಿಯನ್ನು ಪುರಸ್ಕರಿಸಿದ್ದು, ಆಟೊ ಚಾಲಕನ ನಿರ್ಲಕ್ಷ್ಯ, ಬಿಬಿಎಂಪಿ ಮತ್ತು ತೋಟಗಾರಿಕೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅವಘಡ ಸಂಭವಿಸಿದೆ ಎಂದು ಹೇಳಿತ್ತು.

‘ನಗರದಲ್ಲಿ ಮರಗಳ ನಿರ್ವಹಣೆ ಬಿಬಿಎಂಪಿ ಮತ್ತು ತೋಟಗಾರಿಕೆ ಇಲಾಖೆಯ ಹೊಣೆ. ಮಳೆ, ಗಾಳಿ ಸಂದರ್ಭದಲ್ಲಿ ಹಳೆಯ ಮರಗಳ ಕೊಂಬೆಗಳು ನೇತಾಡುತ್ತಿದ್ದು, ಅಪಾಯಕಾರಿ ಸ್ಥಿತಿಯಲ್ಲಿ ಇರುತ್ತವೆ’ ಎಂದು ಹೈಕೋರ್ಟ್‌ ಅಆಭಿಪ್ರಾಯಪಟ್ಟಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು