ಮಂಗಳವಾರ, ನವೆಂಬರ್ 24, 2020
19 °C

ಜೆಇಇ ನಕಲಿ ಅಭ್ಯರ್ಥಿ: ಕೋಚಿಂಗ್‌ ಕೇಂದ್ರದ ಮಾಲೀಕ, ಐಟಿ ಉದ್ಯೋಗಿಗಾಗಿ ಶೋಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಜೆಇಇ (ಮೇನ್ಸ್‌) ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಇಬ್ಬರು ಮುಖ್ಯ ಆರೋಪಿಗಳಾದ ಕೋಚಿಂಗ್ ಕೇಂದ್ರದ ಮಾಲೀಕ ಹಾಗೂ ಖ್ಯಾತ ಐಟಿ ಕಂಪನಿಯ ಉದ್ಯೋಗಿಯೊಬ್ಬನನ್ನು ಬಂಧಿಸಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬ ತನ್ನ ಬದಲಾಗಿ ಮತ್ತೊಬ್ಬ ಅಭ್ಯರ್ಥಿಯಿಂದ ಪರೀಕ್ಷೆ ಬರೆಸಿದ್ದ. ಈತನಿಗೆ ಶೇ 99.8 ಅಂಕ ಬಂದಿತ್ತು. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿ, ವೈದ್ಯ ವೃತ್ತಿಯಲ್ಲಿರುವ ಆತನ ತಂದೆ, ಪರೀಕ್ಷಾ ಕೇಂದ್ರದ ಸಿಬ್ಬಂದಿ ಸೇರಿದಂತೆ ಐವರನ್ನು ಪೊಲೀಸರು ಬುಧವಾರ ಬಂಧಿಸಿದ್ದರು. ಈ ಜಾಲದಲ್ಲಿ ಹಲವರು ಭಾಗಿಯಾಗಿರುವ ಸಂಶಯವಿದ್ದು, ಕೋಚಿಂಗ್‌ ಕೇಂದ್ರದ ಮಾಲೀಕ ಹಾಗೂ ಐಟಿ ಉದ್ಯೋಗಿಯನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ಗುವಾಹಟಿ ಹೆಚ್ಚುವರಿ ಉಪಆಯುಕ್ತ ಸುಪ್ರೊತಿವ್‌ ಲಾಲ್‌ ತಿಳಿಸಿದರು. 

ಪರೀಕ್ಷೆ ನಡೆಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನೂ(ಎನ್‌ಟಿಎ) ರಾಜ್ಯ ಪೊಲೀಸರು ಸಂಪರ್ಕಿಸಿದ್ದು, ತನಿಖೆಗಾಗಿ ಜೆಇಇ ಮೇನ್ಸ್‌ ಕುರಿತ ಮಾಹಿತಿಯನ್ನು ಕೋರಿದ್ದಾರೆ. ಪರೀಕ್ಷೆಗಾಗಿ ತಾಂತ್ರಿಕ ವ್ಯವಸ್ಥೆ ಹಾಗೂ ಸಿಬ್ಬಂದಿಯನ್ನು ಎನ್‌ಟಿಎ ಐಟಿ ಕಂಪನಿಯೊಂದಕ್ಕೆ ವಹಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವುದನ್ನು ಅಭ್ಯರ್ಥಿ ಫೋನ್‌ ಮುಖಾಂತರ ಸ್ನೇಹಿತನಿಗೆ ತಿಳಿಸಿದ್ದ. ಈ ಕರೆ ದಾಖಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್‌ ಆಗುತ್ತಿದ್ದಂತೆಯೇ, ಮಿತ್ರದೇವ್ ಶರ್ಮಾ ಎಂಬುವವರು ಅ.23ರಂದು ಅಜರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪರೀಕ್ಷಾ ಕೇಂದ್ರದಲ್ಲಿ ಬಯೋಮೆಟ್ರಿಕ್‌ ಹಾಜರಾತಿಯ ಬಳಿಕ ಪರೀಕ್ಷಾ ಕೇಂದ್ರ ಸಿಬ್ಬಂದಿ ಸಹಾಯದೊಂದಿಗೆ ಅಭ್ಯರ್ಥಿ ಪರೀಕ್ಷಾ ಕೇಂದ್ರದಿಂದ ಹೊರಬಂದಿದ್ದ. ಈತನ ಬದಲಾಗಿ ಮತ್ತೊಬ್ಬ ಪರೀಕ್ಷೆ ಬರೆದಿದ್ದ. ಅಭ್ಯರ್ಥಿಯ ಪಾಲಕರು ಕೋಚಿಂಗ್‌ ಕೇಂದ್ರದ ಮಾಲೀಕನಿಗೆ ₹15–20 ಲಕ್ಷ ನೀಡಿದ್ದಾರೆ ಎಂದೂ ದೂರಿನಲ್ಲಿ ಶರ್ಮಾ ಉಲ್ಲೇಖಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು