ಸೋಮವಾರ, ಆಗಸ್ಟ್ 15, 2022
21 °C

ರೈತರ ಪ್ರತಿಭಟನೆಗೆ ಪಾಕಿಸ್ತಾನ, ಚೀನಾ ಕುಮ್ಮಕ್ಕು: ಸಚಿವ ದಾನವೆ ಹೇಳಿಕೆಗೆ ಆಕ್ಷೇಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ಚೀನಾ ಹಾಗೂ ಪಾಕಿಸ್ತಾನದ ಕೈವಾಡವಿದೆ’ ಎಂದು ಕೇಂದ್ರದ ಸಚಿವ ರಾವ್‌ಸಾಹೇಬ್‌ ದಾನವೆ ಅವರು ಹೇಳಿರುವುದು ವಿವಾದ ಸೃಷ್ಟಿಸಿದೆ.

ಪ್ರತಿಭಟನೆಯೊಳಗೆ ಸಮಾಜ ವಿರೋಧಿ ಶಕ್ತಿಗಳು ಹಾಗೂ ಮಾವೊವಾದಿಗಳು ಸೇರಿಕೊಂಡಿದ್ದಾರೆ ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಸಹ ಶನಿವಾರ ಹೇಳಿದ್ದರು.

‘ರೈತರ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಕೇಂದ್ರದ ಸಚಿವರು ಟೀಕೆಗಳ ಮೂಲಕ ಪ್ರತಿಭಟನಾಕಾರರನ್ನು ಅಪಮಾನಿಸಿದ್ದಾರೆ. ಸಚಿವರ ಆರೋಪಗಳಲ್ಲಿ ಹುರುಳಿದೆಯೇ ಎಂಬ ಬಗ್ಗೆ ಪ್ರಧಾನಿ ಅವರು ಸ್ಪಷ್ಟನೆ ನೀಡಬೇಕು’ ಎಂದು ಎನ್‌ಸಿಪಿ ಒತ್ತಾಯಿಸಿದೆ.

‘ಸಚಿವರು ಹೇಳಿದ್ದು ನಿಜವೇ ಆಗಿದ್ದರೆ ಸರ್ಕಾರವು ಆ ರಾಷ್ಟ್ರಗಳ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಲಿ’ ಎಂದು ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಸವಾಲು ಹಾಕಿದ್ದಾರೆ.

ಪ್ರತಿಭಟನೆಯ ಬಗ್ಗೆ ಕೇಂದ್ರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ರೈತರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಎರಡು ಹೆಜ್ಜೆ ಹಿಂದಿಟ್ಟರೆ ಅದರಿಂದ ಘನತೆಗೆ ಕುಂದು ಉಂಟಾಗುವುದಿಲ್ಲ’ ಎಂದಿದ್ದಾರೆ.

ತನಿಖೆ ನಡೆಯಲಿ: ‘ರೈತ ಪ್ರತಿಭಟನೆಯೊಳಗೆ ಮಾವೊವಾದಿಗಳು ಸೇರಿಕೊಂಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುವುದು ಅಗತ್ಯ’ ಎಂದು ಕೇಂದ್ರದ ಸಚಿವ, ಎನ್‌ಡಿಎ ಮಿತ್ರಪಕ್ಷವಾದ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ ಮುಖಂಡ ರಾಮದಾಸ ಆಠವಳೆ ಹೇಳಿದ್ದಾರೆ.

ಪ್ರತಿಭಟನೆಯ ಹಿಂದೆ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿದೆ ಎಂಬ ದಾನವೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ‘ಅದು ಸರ್ಕಾರದ ನಿಲುವು ಅಲ್ಲ’ ಎಂದರು.

ಕಠಿಣ ಕ್ರಮ: ‘ದೇಶ ಒಡೆಯುವ ಟುಕಡೆಟುಕಡೆ ಗ್ಯಾಂಗ್‌ನವರು ರೈತರ ಪ್ರತಿಭಟನೆಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇಂಥವರ ವಿರುದ್ಧ ಮೋದಿ ನೇತೃತ್ವದ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದು ಕೇಂದ್ರದ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಹೇಳಿದ್ದಾರೆ.

ಡಿಐಜಿ ರಾಜೀನಾಮೆ
ಪಂಜಾಬ್‌ನ ಡಿಐಜಿ (ಕಾರಾಗೃಹ) ಲಖ್ಮಿಂದರ್‌ಸಿಂಗ್‌ ಜಖಾರ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಪ್ರತಿಭಟನಾನಿರತ ರೈತರಿಗೆ ಬೆಂಬಲ ಸೂಚಿಸಿದ್ದಾರೆ.

‘ನಾನು ಯಾವತ್ತೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ. ಈಗ ನಾನು ನನ್ನ ಸಹೋದರರ ಜತೆಗೆ ಇರಬೇಕು ಎಂಬುದನ್ನು ಮನಗಂಡು ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅವರು ಸರ್ಕಾರಕ್ಕೆ ಶನಿವಾರ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ಗಾಂಧಿ ಪ್ರತಿಮೆಗೆ ಹಾನಿ
ವಾಷಿಂಗ್ಟನ್‌ (ಪಿಟಿಐ):
ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಇಲ್ಲಿನ ಖಲಿಸ್ತಾನ ಪ್ರತ್ಯೇಕತಾವಾದಿ ಗುಂಪಿನ ನೂರಾರು ಯುವಕರು ಭಾರತೀಯ ದೂತಾವಾಸದ ಆವರಣದಲ್ಲಿ ಪ್ರತಿಭಟನೆ ನಡೆಸಿ, ಗಾಂಧೀಜಿಯ ಪ್ರತಿಮೆಗೆ ಹಾನಿ ಉಂಟುಮಾಡಿದ್ದಾರೆ.

ವಿವಿಧ ರಾಜ್ಯಗಳಿಂದ ಬಂದಿದ್ದ ಅಮೆರಿಕನ್‌ ಸಿಖ್ಖ್‌ ಸಮುದಾಯದ ಯುವಕರು ವಾಷಿಂಗ್ಟನ್‌ ಡಿಸಿಯಲ್ಲಿರುವ ದೂತಾವಾಸದ ಮುಂದೆ ಪ್ರತಿಭಟನೆ ಆರಂಭಿಸಿದ್ದರು. ಸ್ವಲ್ಪ ಸಮಯದಲ್ಲೇ ಪ್ರತಿಭಟನೆಯ ನೇತೃತ್ವವನ್ನು ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಕೈಗೆತ್ತಿಕೊಂಡರು. ಇವರು ಖಲಿಸ್ತಾನದ ಧ್ವಜ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಹೊಂದಿದ್ದ ಫಲಕಗಳನ್ನು ಹಿಡಿದಿದ್ದರು.

ಅವರಲ್ಲಿ ಕೆಲವರು ಮಹಾತ್ಮ ಗಾಂಧಿ ಅವರ ಪ್ರತಿಮೆಯ ಮೇಲೆ ಹತ್ತಿ, ಅದರ ಮೇಲೂ ಪೋಸ್ಟರ್‌ ಅಂಟಿಸಿದರು. ಬಳಿಕ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಸ್ವಲ್ಪ ಹೊತ್ತಿನ ಬಳಿಕ ಆ ಗುಂಪು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ನೇಣಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿತು.

ಎರಡು ಕೋಟಿ ಇ–ಮೇಲ್‌
ಸಿಖ್‌ ಸಮುದಾಯವನ್ನು ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ 13 ನಿರ್ಧಾರಗಳ ವಿವರಗಳನ್ನು ಹೊಂದಿರುವ ಇ-ಮೇಲ್‌ ಅನ್ನು ರೈಲ್ವೆ ಇಲಾಖೆಯ ಐಆರ್‌ಸಿಟಿಸಿ ಸಂಸ್ಥೆಯು ಎರಡು ಕೋಟಿ ಗ್ರಾಹಕರಿಗೆ ಕಳುಹಿಸಿದೆ.

ಸಿಖ್‌‌ ಸಮುದಾಯದ ಜತೆಗೆ ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರ ಹೊಂದಿರುವ ಬಾಂಧವ್ಯದ ವಿವರ ಹೊಂದಿರುವ, 47 ಪುಟಗಳ
ಕಿರು ಪುಸ್ತಿಕೆಯನ್ನು ಡಿ.8ರಿಂದ 12ರ ಒಳಗಿನ ಅವಧಿಯಲ್ಲಿ ಮೇಲ್‌ ಮಾಡಲಾಗಿದೆ.

ಸಿಖ್‌ ಸಮುದಾಯದವರಿಗೆ ಮಾತ್ರ ಮೇಲ್‌ ಕಳುಹಿಸಲಾಗಿದೆ ಎಂಬ ವಾದವನ್ನು ಸಂಸ್ಥೆ ತಳ್ಳಿಹಾಕಿದೆ.  ಸಂಸ್ಥೆಯ ಡಾಟಾಬೇಸ್‌ನಲ್ಲಿರುವ ಎಲ್ಲಾ ವಿಳಾಸಗಳಿಗೂ ಇದರ ಪ್ರತಿಯನ್ನು ಕಳುಹಿಸಲಾಗಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳ ವಿವರಗಳನ್ನು ಜನರಿಗೆ ತಲುಪಿಸಲು ಈ ಹಿಂದೆಯೂ ಇಂಥ ಕ್ರಮ ಕೈಗೊಳ್ಳಲಾಗಿತ್ತು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು