ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಕಾಮಗಾರಿ ಸ್ಥಳದಲ್ಲಿ ಭಾರಿ ಭೂಕುಸಿತ: 14 ಮಂದಿ ಸಾವು

ಘಟನಾ ಸ್ಥಳದಲ್ಲಿ 55 ಮಂದಿ ನಾಪತ್ತೆ
Last Updated 1 ಜುಲೈ 2022, 0:56 IST
ಅಕ್ಷರ ಗಾತ್ರ

ಇಂಫಾಲ/ಗುವಾಹಟಿ/ ಇಟಾನಗರ: ಮಣಿಪುರದ ನೊನಿ ಜಿಲ್ಲೆಯ ರೈಲ್ವೆ ಕಾಮಗಾರಿ ಪ್ರದೇಶದಲ್ಲಿ ಭಾರಿ ಭೂಕುಸಿತವಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ. 25 ಮಂದಿಯನ್ನು ರಕ್ಷಿಸಲಾಗಿದ್ದು, 50ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ.

ತುಪುಲ್‌ ಯಾರ್ಡ್‌ ರೈಲ್ವೆ ಕಾಮಗಾರಿ ಶಿಬಿರದ ಬಳಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.

‘ಈವರೆಗೆ ಒಟ್ಟು 8 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇದರಲ್ಲಿ ‘ಟೆರಿಟೋರಿಯಲ್‌ ಆರ್ಮಿಯ’ ಏಳು ಮಂದಿ ಸೇರಿದ್ದಾರೆ. 50ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಅವರೆಲ್ಲಾ ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದ್ದು ರಕ್ಷಣಾ ಕಾರ್ಯ ಚುರುಕುಗೊಳಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಕುಸಿದಿರುವ ಮಣ್ಣೆಲ್ಲಾಇಜೆಯಿ ನದಿಯಲ್ಲಿ ಸಂಗ್ರಹವಾಗಿದೆ. ಅದರಿಂದ ನದಿ ನೀರಿನ ಸರಾಗ ಹರಿಯುವಿಕೆಗೆ ತೊಡಕಾಗಿದೆ. ಸ್ಥಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಶೇಖರಣೆಯಾಗಿ ಜಲಾಶಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೀರು ನದಿ ಪಾತ್ರದ ತಗ್ಗು ಪ್ರದೇಶಗಳಿಗೆ ನುಗ್ಗುವ ಸಾಧ್ಯತೆ ಇರುವುದರಿಂದ ಸಾಧ್ಯವಿದ್ದಲ್ಲಿಂದ ನಾಗರಿಕರನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಅವಶೇಷಗಳ ಅಡಿ ಸಿಲುಕಿರುವವರನ್ನು ಪತ್ತೆಹಚ್ಚುವುದಕ್ಕಾಗಿ ಶ್ವಾನ ದಳವನ್ನೂ ನಿಯೋಜಿಸಲಾಗಿದೆ. ಸ್ಥಳೀಯ ಆಡಳಿತವು ಜೆಸಿಬಿ ಹಾಗೂಇತರ ಬೃಹತ್‌ ಯಂತ್ರಗಳ ಸಹಾಯ
ದಿಂದ ಘಟನಾ ಸ್ಥಳದಲ್ಲಿ ಸಂಗ್ರಹವಾಗಿರುವ ಭಾರಿ ಪ್ರಮಾಣದ ಮಣ್ಣನ್ನು ಹೊರತೆಗೆಯುವ ಕೆಲಸ ಮಾಡುತ್ತಿದೆ.

‘ತುರ್ತು ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಸ್ಥಳಕ್ಕೆ ಆಂಬುಲೆನ್ಸ್‌ ಹಾಗೂ ವೈದ್ಯರನ್ನು ನಿಯೋಜಿಸಲಾಗಿದೆ. ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ನೆರವು ನೀಡಲಾಗುತ್ತದೆ’ ಎಂದು ಮಣಿಪುರದ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ಮಾಹಿತಿ ಪಡೆದ ಅಮಿತ್‌ ಶಾ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರುಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಮಣಿಪುರದ ಮುಖ್ಯಮಂತ್ರಿ ಬಿರೇನ್‌ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಘಟನೆ ಕುರಿತ ಮಾಹಿತಿ ಪಡೆದಿದ್ದಾರೆ.

‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ತಂಡವೊಂದು ಈಗಾಗಲೇ ಘಟನಾ ಸ್ಥಳ ತಲುಪಿದೆ. ಎನ್‌ಡಿಆರ್‌ಎಫ್‌ನ ಮತ್ತೆರಡು ತಂಡಗಳೂ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳಲಿವೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಭೂ ಕುಸಿತ–ಮಹಿಳೆ ಮೃತದೇಹ ಪತ್ತೆ: ಅರುಣಾಚಲಪ್ರದೇಶದ ಪಪುಮ್‌ ಪರೆ ಜಿಲ್ಲೆಯಲ್ಲಿ ನಡೆದಿದ್ದ ಭೂ ಕುಸಿತದಲ್ಲಿ ಮತ್ತೊಬ್ಬ ಮಹಿಳೆ ಮೃತಪಟ್ಟಿದ್ದಾರೆ.

‘27 ವರ್ಷದ ಮೊಮಿತಾ ಚಾಕ್ಮ ಮೃತ ಮಹಿಳೆ. ಬಲಿಜಾನ್‌ನ ಚಕ್ಮಾ ಶಿಬಿರ–1ರ ಬಳಿಯ ಅವಶೇಷಗಳ ಅಡಿ
ಯಲ್ಲಿ ಸಿಲುಕಿದ್ದ ಮೃತದೇಹವನ್ನು ಗುರುವಾರ ಹೊರತೆಗೆಯಲಾಗಿದೆ. ಇದ
ರೊಂದಿಗೆ ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ಈ ವರ್ಷ ರಾಜ್ಯದಲ್ಲಿ ಮೃತರಾದವರ ಸಂಖ್ಯೆ 18ಕ್ಕೆ
ಹೆಚ್ಚಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT