ಗುರುವಾರ , ಮಾರ್ಚ್ 30, 2023
24 °C

ಮೋದಿ ಮಂತ್ರಿ ಪರಿಷತ್ತಿನಲ್ಲಿ 11ಕ್ಕೇರಿದ ಮಹಿಳೆಯರ ಸಂಖ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಏಳು ಸಂಸದೆಯರು ಸ್ಥಾನ ಪಡೆಯುವ ಮೂಲಕ ಕೇಂದ್ರ ಸಚಿವ ಸಂಪುಟದಲ್ಲಿ ಮಹಿಳಾ ಸಚಿವರ ಸಂಖ್ಯೆ 11ಕ್ಕೆ ಏರಿದೆ.

2019ರಲ್ಲಿ ಸಚಿವೆ ಆಗಲು ವಿಫಲರಾಗಿದ್ದ ಅಪ್ನಾ ದಳದ ಅನುಪ್ರಿಯಾ ಪಟೇಲ್‌ ಈ ಬಾರಿ ಸಚಿವ ಸ್ಥಾನಕ್ಕೆ ಮರಳಿದ್ದಾರೆ. ಇನ್ನುಳಿದಂತೆ ಸಂಸದರಾದ ಶೋಭಾ ಕರಂದ್ಲಾಜೆ, ದರ್ಶನಾ ಜಾರ್ದೋಶ್‌, ಮೀನಾಕ್ಷಿ ಲೇಖಿ, ಪ್ರತಿಮಾ ಭೌಮಿಕ್‌ ಮತ್ತು ಡಾ. ಭಾರತಿ ಪವಾರ್‌ ಹೊಸದಾಗಿ ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ.

ಸಚಿವೆಯರಾಗಿ ಕರ್ತವ್ಯ ನಿಭಾಯಿಸುತ್ತಿರುವ ನಿರ್ಮಲಾ ಸೀತಾರಾಮನ್‌, ಸ್ಮೃತಿ ಇರಾನಿ, ರೇಣುಕಾ ಸಿಂಗ್‌ ಮತ್ತು ಸಾಧ್ವಿ ನಿರಂಜನ್‌ ಜ್ಯೋತಿ ಅವರು ಸಂಪುಟ ಪುನರ್ರಚನೆ ಬಳಿಕವೂ ಮುಂದುವರಿದಿದ್ದಾರೆ. ಆದರೆ ಸಹಾಯಕ ಸಚಿವೆಯಾಗಿದ್ದ ದೇವಶ್ರೀ ಚೌಧರಿಯನ್ನು ಸಂಪುಟದಿಂದ ಕೈಬಿಡಲಾಗಿದೆ.

ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯಲ್ಲಿ ಆರು ಮಹಿಳಾ ಸಚಿವರಿದ್ದರು. ಅಕಾಲಿ ದಳವು ಬಿಜೆಪಿ ಜೊತೆಗೆ ಮೈತ್ರಿ ಮುರಿದುಕೊಂಡ ಬಳಿಕ ಹರ್‌ಸಿಮ್ರತ್‌ ಕೌರ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೊದಲ ಅವಧಿಯಲ್ಲಿ ಸಚಿವರಾಗಿದ್ದ ಸುಷ್ಮಾ ಸ್ವರಾಜ್‌ ಮತ್ತು ಮೇನಕಾ ಗಾಂಧಿ ಅವರಿಗೆ ಎರಡನೇ ಅವಧಿಯಲ್ಲಿ ಸ್ಥಾನ ನೀಡಲಾಗಿರಲಿಲ್ಲ. ಕೆಲವು ವರ್ಷಗಳಿಂದ ದೇಶದಲ್ಲಿ ಮಹಿಳಾ ಸಚಿವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಮೋದಿ ಆಡಳಿತದಲ್ಲಿ ಮಹಿಳಾ ಸಂಪುಟ ಸಚಿವರ ಸಂಖ್ಯೆಯೂ ಹೆಚ್ಚಿದೆ. ಮೊದಲ ಅವಧಿಯಲ್ಲಿ ನಿರ್ಮಲಾ ಸೀತಾರಾಮನ್‌ ರಕ್ಷಣಾ ಸಚಿವೆ ಕೂಡ ಆಗಿದ್ದರು. ಸದ್ಯ ಸಂಸತ್ತಿನಲ್ಲಿ 78 ಮಹಿಳಾ ಸದಸ್ಯರಿದ್ದಾರೆ. ಅವರಲ್ಲಿ 41 ಸಂಸದರು ಬಿಜೆಪಿಯವರು.

ಹೊಸದಾಗಿ ಸಚಿವ ಸ್ಥಾನ ಪಡೆದಿರುವ ಮಹಿಳೆಯರಲ್ಲಿ ಒಬ್ಬರಾಗಿರುವ ಶೋಭಾ ಕರಂದ್ಲಾಜೆ, ಎಲ್ಲಾ ಸಂದರ್ಭಗಳಲ್ಲೂ ಪಕ್ಷದ ಬೆನ್ನಿಗೆ ನಿಲ್ಲುವ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು.

ಮೀನಾಕ್ಷಿ ಲೇಖಿ ಅವರು ಪ್ರಧಾನಿ ಮೋದಿ ಅವರ ಸ್ಥಿರ ಬೆಂಬಲಿಗರು. 2014ರ ಲೋಕಸಭೆ ಚುನಾವಣೆಗೂ ಮುನ್ನವೇ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆ ಆಗುಬೇಕು ಎಂದು ಪ್ರತಿಪಾದಿಸುತ್ತಿದ್ದವರು. ಸಂಸತ್ತಿನ ಹೊರಗೂ ಬಿಜೆಪಿ ಪರವಾಗಿ ಹೋರಾಟ ಮಾಡಿರುವವರು. ರಫೇಲ್‌ ಹಗರಣವನ್ನು ಮುಂದಿಟ್ಟು ಕಾಂಗ್ರೆಸ್‌ ಪಕ್ಷವು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾಗ ಅದರ ವಿರುದ್ಧ ಗಟ್ಟಿ ದನಿಯಲ್ಲಿ ಮಾತನಾಡಿದ್ದರು. ಆರ್‌ಜೆಡಿಯ ಮಾಜಿ ಅಧ್ಯಕ್ಷರಾದ ಅನ್ನಪೂರ್ಣ ಸಿಂಗ್‌, 2019ರ ಲೋಕಸಭಾ ಚುನಾವಣೆಗೂ ಮೊದಲೇ ಬಿಜೆಪಿ ಸೇರ್ಪಡೆಯಾಗಿ, ಜಾರ್ಖಂಡ್‌ನ ಕೋಡರಮಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.

ಉಳಿದಂತೆ ಸೂರತ್‌ನಿಂದ ಮೂರು ಬಾರಿ ಸಂಸದರಾಗಿ ಆಯ್ಕೆ ಆಗಿರುವ ದರ್ಶನಾ ಜಾರ್ದೋಶ್‌, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಭಾರತಿ ಪವಾರ್‌, ತ್ರಿಪುರಾ ಪಶ್ಚಿಮ ಕ್ಷೇತ್ರದಿಂದ ಆರಿಸಿ ಬಂದಿರುವ ಪ್ರತಿಮಾ ಭೌಮಿಕ್‌ ಸ್ಥಾನ ಪಡೆದಿದ್ದಾರೆ.

ದಾಖಲೆ ಬರೆಯಲು ವಿಫಲ
ಮೊತ್ತೊಬ್ಬ ಮಹಿಳೆಗೆ ಸಚಿವೆ ಸ್ಥಾನ ನೀಡಿದ್ದರೆ, ಮೋದಿ ನೇತೃತ್ವದ ಸರ್ಕಾರವು ಹೆಚ್ಚು ಮಹಿಳಾ ಸಚಿವರನ್ನು ಹೊಂದಿರುವ ಭಾರತದ ಸರ್ಕಾರ ಎಂದು ಇತಿಹಾಸದಲ್ಲಿ ದಾಖಲಾಗುತ್ತಿತ್ತು. 2013ರಲ್ಲಿ ಮನಮೋಹನ್‌ ಸಿಂಗ್‌ ಅವರ ಸರ್ಕಾರದಲ್ಲಿ 12 ಮಹಿಳಾ ಸಚಿವರಿದ್ದರು. ಭಾರತದಲ್ಲಿ ಮಹಿಳಾ ಸಚಿವೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ, ಒಟ್ಟು ಸಚಿವರಲ್ಲಿ ಶೇ 50ರಷ್ಟು ಮಹಿಳಾ ಸಚಿವರನ್ನು ಹೊಂದಿರುವ 9 ದೇಶಗಳ ಪಟ್ಟಿಗೆ ಸೇರಲು ಕ್ರಮಿಸಬೇಕಿರುವ ಹಾದಿ ಬಹಳವಿದೆ.

ಶೋಭಾ ಕರಂದ್ಲಾಜೆಗೆ ಒಲಿದ ಕೇಂದ್ರ ಮಂತ್ರಿಗಿರಿ
ಉಡುಪಿ:
ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಗೆಲುವು ಸಾಧಿಸಿರುವ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಕ್ಟೋಬರ್‌ 23, 1966ರಂದು ಜನಿಸಿದ ಶೋಭಾ ಕರಂದ್ಲಾಜೆ, ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚಿಕ್ಕಂದಿನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರ್ಪಡೆಗೊಂಡು ಪೂರ್ಣಾವಧಿ ಸ್ವಯಂಸೇವಕರಾಗಿದ್ದರು

2004ರಿಂದ 2008ರವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿದ್ದ ಅವರು, 2008ರಲ್ಲಿ ಯಶವಂತಪುರ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಈ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಹಾಗೂ ಇಂಧನ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿದ್ದರು.

2014ರಲ್ಲಿ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಮೊದಲ ಪ್ರಯತ್ನದಲ್ಲಿಯೇ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ 1,81,643 ಮತಗಳ ಅಂತರದಿಂದ ಗೆದ್ದಿದ್ದರು. ಈ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ದಾಖಲಿಸಿದ ಅತಿ ದೊಡ್ಡ ಅಂತರದ ಗೆಲುವು ಇದಾಗಿತ್ತು.

2019ರ ಲೋಕಸಭಾ ಚುನಾವಣೆಯಲ್ಲೂ ಅದೃಷ್ಟ ಶೋಭಾ ಅವರ ಕೈ ಹಿಡಿಯಿತು. ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ವಿರುದ್ಧ ಸ್ಪರ್ಧಿಸಿ, ಬರೋಬ್ಬರಿ 3,49,599 ಮತಗಳ ಅಂತರದ ಜಯಭೇರಿ ಬಾರಿಸಿದರು.

 ಇವುಗಳನ್ನೂ ಓದಿ..

 

ವಿಧಾನಸಭಾ ಚುನಾವಣೆ ಮೇಲೆ ದೃಷ್ಟಿ: ಉತ್ತರ ಪ್ರದೇಶಕ್ಕೆ ಮತ್ತೆ 7 ಮಂತ್ರಿ ಸ್ಥಾನ
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು