ಭಾನುವಾರ, ಸೆಪ್ಟೆಂಬರ್ 26, 2021
21 °C

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಅತ್ಯಾಚಾರಕ್ಕೆ ಸಮ: ಅಲಹಾಬಾದ್ ಹೈಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಲಖನೌ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರಕ್ಕೆ ಸಮ. ಅಂತಹ ಪ್ರಕರಣಗಳನ್ನು ನಿರ್ವಹಿಸಲು ಕಾನೂನು ರೂಪಿಸುವ ಅಗತ್ಯವಿದೆ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.

ಮದುವೆಯಾಗುವುದಾಗಿ ಭರವಸೆ ನೀಡಿ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ ವ್ಯಕ್ತಿಯೊಬ್ಬ ಬಳಿಕ ಮದುವೆಯಾಗಲು ನಿರಾಕರಿಸಿದ್ದ. ಈ ಸಂಬಂಧ ಸಂತ್ರಸ್ತ ಮಹಿಳೆಯು ಉತ್ತರ ಪ್ರದೇಶದ ಕಾನ್ಪುರದಲ್ಲಿ ದೂರು ದಾಖಲಿಸಿದ್ದರು. ಸದ್ಯ ಬಂಧನಕ್ಕೊಳಗಾಗಿರುವ ವ್ಯಕ್ತಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪ್ರದೀಪ್‌ ಕುಮಾರ್‌ ಶ್ರೀವಾಸ್ತವ ನೇತೃತ್ವದ ಪೀಠ ಜಾಮೀನು ನೀಡಲು ನಿರಾಕರಿಸಿದೆ.

ʼಅತ್ಯಾಚಾರವು ಸಮಾಜದಲ್ಲಿ ಅತ್ಯಂತ ಖಂಡನೀಯ ಅಪರಾಧವಾಗಿದೆ. ಇದು ಸಂತ್ರಸ್ತೆಯ ಮನಸ್ಸಿನ ಮೇಲೆ ದೀರ್ಘಕಾಲದವರೆಗೆ ಪರಿಣಾಮ ಬೀರುತ್ತದೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರಕ್ಕೆ ಸಮ ಎಂದು ಪರಿಗಣಿಸಲಾಗುತ್ತದೆʼ ಎಂದು ಪೀಠ ಹೇಳಿದೆ.

ʼಆರೋಪಿಯು ಸಂತ್ರಸ್ತೆಗೆ ಮೋಸ ಮಾಡುವ ಉದ್ದೇಶದಿಂದಲೇ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ್ದಾನೆ. ಆರೋಪಿಗಳು ಕಾನೂನಿನ ಲಾಭ ಪಡೆದು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸುವುದರಿಂದ ಇಂತಹ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆʼ ಎಂದೂ ಹೇಳಿದೆ.

ಮುಂದುವರಿದು, ಇಂತಹ ಪ್ರಕರಣಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸ್ಪಷ್ಟ ಮತ್ತು ನಿರ್ದಿಷ್ಟವಾದ ಕಾನೂನು ರೂಪಿಸುವ ಅಗತ್ಯವಿದೆ. ಕಾನೂನು ಜಾರಿಯಾಗುವವರೆಗೂ, ದೀರ್ಘಕಾಲ ಸಂಬಂಧ ಹೊಂದಿರದ ಹೊರತು ಮದುವೆಯ ಭರವಸೆಯನ್ನು ನಂಬಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡುವುದನ್ನು ಮುಂದುವರಿಸಬೇಕು ಎಂದು ಕೋರ್ಟ್‌ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು