ಭಾನುವಾರ, ಜೂನ್ 26, 2022
24 °C

ಹಡಗಿನಲ್ಲಿ ಮಾದಕವಸ್ತು ಪಾರ್ಟಿ ಪ್ರಕರಣದ ತನಿಖೆಯಲ್ಲಿ ಗಂಭೀರ ಲೋಪ: ಎನ್‌ಸಿಬಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂಬೈ ಐಷಾರಾಮಿ ಹಡಗಿನಲ್ಲಿ ಮಾದಕವಸ್ತು ಪಾರ್ಟಿ ಪ್ರಕರಣದ ತನಿಖೆಯಲ್ಲಿ ಹಲವು ಗಂಭೀರ ಲೋಪಗಳಾಗಿವೆ ಎಂದು ಎನ್‌ಸಿಬಿ ಹೇಳಿದೆ. ಈ ಕಾರಣದಿಂದಲೇ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ, ಬಾಲಿವುಡ್ ನಟ ಶಾರುಕ್‌ ಖಾನ್ ಅವರ ಮಗ ಆರ್ಯನ್ ಖಾನ್‌ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಎನ್‌ಸಿಬಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿಯ ಮೊದಲ ಎಸ್‌ಐಟಿಯು ನಡೆಸಿದ್ದ ತನಿಖೆಯಲ್ಲಿ ಹಲವು ಗಂಭೀರ ಲೋಪಗಳಾಗಿವೆ. ಆರ್ಯನ್ ಖಾನ್ ಮಾದಕವಸ್ತು ಸೇವಿಸಿದ್ದಾರೆ, ಅವರ ಬಳಿ ಮಾದಕವಸ್ತು ಇತ್ತು ಮತ್ತು ಅವರಿಗೆ ಮಾದಕವಸ್ತುವಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಸಂಪರ್ಕ ಇತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಹಡಗಿನಲ್ಲಿ ಕಾರ್ಯಾಚರಣೆ ನಡೆಸಿದ್ದ ತಂಡದ ನಿರ್ಲಕ್ಷ್ಯದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆರ್ಯನ್ ಅವರನ್ನು ಆರೋಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಎನ್‌ಸಿಬಿ ಮಹಾನಿರ್ದೇಶಕ (ಡಿ.ಜಿ) ಎಸ್‌.ಎನ್. ಪ್ರಧಾನ್ ಅವರು ಹೇಳಿದ್ದಾರೆ. 

‘ಐಷಾರಾಮಿ ಹಡಗಿನಲ್ಲಿ ಶೋಧಕಾರ್ಯ ನಡೆಸಿದ್ದ ಎನ್‌ಸಿಬಿಯ ಎಸ್‌ಐಟಿ ತಂಡವು, ಕಾರ್ಯಾಚರಣೆ ವೇಳೆ ನಿಯಮಗಳನ್ನು ಪಾಲಿಸಿಲ್ಲ. ಆರ್ಯನ್ ಖಾನ್ ಬಂಧನದ ನಂತರ ಅವರನ್ನು ಕಡ್ಡಾಯ ವೈದ್ಯಕೀಯ ತಪಾಸಣೆಗೆ ಒಳಪಡಿಸಿಲ್ಲ. ಶೋಧಕಾರ್ಯದ ವೇಳೆ ವಿಡಿಯೊ ಚಿತ್ರೀಕರಣ ನಡೆಸಿಲ್ಲ. ಜತೆಗೆ ಆರ್ಯನ್ ಖಾನ್ ಅವರ ವಾಟ್ಸ್‌ಆ್ಯಪ್‌ ಚಾಟ್‌ಅನ್ನು ಧೃಡೀಕೃತ ಭೌತಿಕ ಸಾಕ್ಷ್ಯವಾಗಿ ಸಲ್ಲಿಸುವಲ್ಲಿ ತನಿಖಾ ತಂಡ ವಿಫಲವಾಗಿದೆ’ ಎಂದು ಎನ್‌ಸಿಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಆರ್ಯನ್‌ ಖಾನ್‌ಗಾಗಿ ಆತನ ಸ್ನೇಹಿತ ಅರ್ಬಾಜ್‌ ಖಾನ್‌ ಮಾದಕ ದ್ರವ್ಯ ಸಾಗಿಸುತ್ತಿದ್ದರು ಎನ್ನುವುದನ್ನೇ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಆರ್ಯನ್‌ಗಾಗಿ ಮಾದಕವಸ್ತು ಕೊಂಡೊಯ್ದಿರುವುದನ್ನು ಅರ್ಬಾಜ್ ಖಾನ್ ನಿರಾಕರಿಸಿದ್ದಾರೆ. ವಾಸ್ತವವಾಗಿ, ಎನ್‌ಸಿಬಿ ತುಂಬ ಸಕ್ರಿಯವಾಗಿರುವುದರಿಂದ ಹಡಗಿಗೆ ಯಾವುದೇ ಮಾದಕವಸ್ತು ತರದಂತೆ ಆರ್ಯನ್ ಸೂಚಿಸಿದ್ದಾಗಿ ಅರ್ಬಾಜ್‌ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾರೆ’ ಎಂದು ಎನ್‌ಸಿಬಿ ಉಪ ಮಹಾನಿರ್ದೇಶಕ (ಕಾರ್ಯಾಚರಣೆ) ಮತ್ತು ಎಸ್‌ಐಟಿ ಮುಖ್ಯಸ್ಥ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ. 

‘ಎಲ್ಲ ಆರೋಪಿಗಳಿಗೆ ಪರಸ್ಪರ ಸಂಪರ್ಕವಿಲ್ಲ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ. ತನಿಖಾ ತಂಡ ವಶಪಡಿಸಿಕೊಂಡಿದ್ದ ಆರ್ಯನ್ ಅವರ ಮೊಬೈಲ್‌ ಫೋನ್ ಅನ್ನು ತೆರೆಯುವಾಗಲೂ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿಲ್ಲ’ ಎಂದು ಅವರು ಮಾಹಿತಿ
ನೀಡಿದ್ದಾರೆ.

'ವಾಂಖೆಡೆ ವಿರುದ್ಧ ಕ್ರಮ ಕೈಗೊಳ್ಳಿ'
ನವದೆಹಲಿ
: ‘ಐಷಾರಾಮಿ ಹಡಗಿನಲ್ಲಿ ಮಾದಕವಸ್ತು’ ಪ್ರಕರಣದಲ್ಲಿ ಶಾರುಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಅವರನ್ನು ಬಂಧಿಸಿದ್ದ ಮಾದಕ ದ್ರವ್ಯ ನಿಯಂತ್ರಣ ದಳದ (ಎನ್‌ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಣಕಾಸು ಸಚಿವಾಲಯಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಆರ್ಯನ್ ಖಾನ್ ಪ್ರಕರಣದಲ್ಲಿ ನಿರ್ಲಕ್ಷ್ಯದ ಆರೋಪ ಎದುರಿಸುತ್ತಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವ ಸರ್ಕಾರ, ನಕಲಿ ಜಾತಿ ಪ್ರಮಾಣ ಸಲ್ಲಿಕೆ ಆರೋಪ ಸಂಬಂಧ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಹೇಳಿದೆ.  ವಾಂಖೆಡೆ ಅವರು ಭಾರತೀಯ ಕಂದಾಯ ಸೇವೆಗಳ ಅಧಿಕಾರಿಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಣಕಾಸು ಸಚಿವಾಲಯವು ನೋಡಲ್ ಪ್ರಾಧಿಕಾರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು