ಶುಕ್ರವಾರ, ಆಗಸ್ಟ್ 12, 2022
21 °C

ಶಿವಸೇನಾ ಈಗ ಸೋನಿಯಾ ಸೇನೆ: ಕಂಗನಾ ರನೋಟ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಳಾಸಾಹೇಬ್ ಠಾಕ್ರೆ ಅವರು ಸ್ಥಾಪಿಸಿದ ಶಿವಸೇನಾ ಸಂಘಟನೆ ಈಗ ‘ಸೋನಿಯಾ ಸೇನೆ’ ಯಾಗಿ ಮಾರ್ಪಟ್ಟಿದೆ ಎಂದು ಬಾಲಿವುಡ್‌ ನಟಿ ಕಂಗನಾ ರನೋಟ್‌ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಪಾಲ್ಘರ್‌‌ ಜಿಲ್ಲೆಯಲ್ಲಿ ಇಬ್ಬರು ಸಾಧು ಮತ್ತು ಅವರ ಚಾಲಕನ ಗುಂಪು ಹತ್ಯೆ ಹಾಗೂ ಸುಶಾಂತ್ ಸಿಂಗ್ ರಜಪೂತ್ ಸಾವಿನ‌ ಪ್ರಕರಣದ ಕುರಿತಾಗಿ ಕಂಗನಾ ರನೋಟ್‌ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಆಡಳಿತ ಮಹಾ ವಿಕಾಸ್‌ ಅಘಾಡಿ ಸರ್ಕಾರವನ್ನು ಟೀಕಿಸಿದ್ದಾರೆ.

‘ಬೆದರಿಕೆಯೊಡ್ಡುವವರ ಎದುರು ಎಂದೂ ನಾವು ಮಣಿಯಬಾರದು. ಶಿವಸೇನೆ ಚುನಾವಣೆಯಲ್ಲಿ ಸೋತರೂ ನಾಚಿಕೆ ಬಿಟ್ಟು ಮೈತ್ರಿ ಸರ್ಕಾರವನ್ನು ರಚಿಸಿತು. ಇದರಿಂದಾಗಿ ಶಿವಸೇನೆ ಈಗ ಸೋನಿಯಾ ಸೇನೆಯಾಗಿ ಮಾರ್ಪಟ್ಟಿದೆ’ ಎಂದು ಅವರು ಹೇಳಿದ್ದಾರೆ.

ಮುಂಬೈನ ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ಬಾಲಿವುಡ್‌ ನಟಿ ಕಂಗನಾ ರನೋತ್‌‌ ಬಂಗಲೆಯ ಅನಧಿಕೃತ ಎಂದು ಹೇಳಲಾದ ಭಾಗದಲ್ಲಿದ್ದ ‘ಮಣಿಕರ್ಣಿಕಾ ಫಿಲ್ಮ್ಸ್‌ ಪ್ರೈವೇಟ್‌ ಲಿಮಿಟೆಡ್’‌ ಕಚೇರಿಯ ಒಂದು ಭಾಗವನ್ನು ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸಿಬ್ಬಂದಿ ಬುಧವಾರ ನೆಲಸಮಗೊಳಿಸಿದ್ದರು. 

ಸದ್ಯ ಈ ಕಾರ್ಯಕ್ಕೆ ಬಾಂಬೆ ಹೈಕೋರ್ಟ್‌ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಗುರುವಾರ ಮಧ್ಯಾಹ್ನ ಇದರ ವಿಚಾರಣೆ ನಡೆಸಲಿದೆ. 

ಕಂಗನಾ ವಿರುದ್ಧ ದೂರು

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರನ್ನು ಏಕವಚನದಲ್ಲಿ ನಿಂದಿಸಿದ ಆರೋಪದ ಮೇಲೆ ನಟಿ ಕಂಗನಾ ರನೋತ್‌ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದರು. 

ಇಲ್ಲಿಯ ವಕೀಲ ನಿತಿನ್ ಮಾನೆ ಎಂಬುವರು‌ ನೀಡಿದ ದೂರಿನ ಅನ್ವಯ ಕಂಗನಾ ವಿರುದ್ಧ ಉದ್ದೇಶಪೂರ್ವಕವಲ್ಲದ ಅಪರಾಧ ಪ್ರಕರಣ ದಾಖಲಿಸಲಾಗಿದೆ.

‘ಕಂಗನಾ ವಿರುದ್ಧ ಎಫ್‌ಐಆರ್‌ ದಾಖಲಾಗಿಲ್ಲ. ದೂರುದಾರರಿಗೆ ನ್ಯಾಯಾಲಯದ ಮೊರೆ ಹೋಗುವಂತೆ ತಿಳಿಸಿದ್ದೇವೆ’ ಎಂದು ಡಿಸಿಪಿ ಪ್ರಶಾಂತ್‌ ಕದಂ‌ ತಿಳಿಸಿದ್ದಾರೆ.  

‘ಎಫ್‌ಐಆರ್‌ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ. ಮುಖ್ಯಮಂತ್ರಿ ಅವರನ್ನು ಅವಹೇಳನ ಮಾಡಿರುವುದರಿಂದ ನಟಿಯ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ನಡೆಸಿದ್ದೇನೆ’ ಎಂದು ವಕೀಲ ನಿತಿನ್‌ ತಿಳಿಸಿದ್ದಾರೆ.  

 ‘ಉದ್ಧವ್‌ ಠಾಕ್ರೆ, ನಿನ್ನನ್ನು ನೀನು ಏನೆಂದುಕೊಂಡಿರುವೆ? ಮೂವಿ‌ ಮಾಫಿಯಾ ಜತೆ ಶಾಮೀಲಾಗಿ ನನ್ನ ಮನೆ ಧ್ವಂಸಗೊಳಿಸಿ, ಸೇಡು ತೀರಿಸಿಕೊಂಡೆಯಾ? ಇಂದು ನನ್ನ ಮನೆ ನೆಲಸಮವಾಗಿರಬಹುದು. ನಾಳೆ ನಿನ್ನ ಅಹಂಕಾರ ಅಳಿಯಲಿದೆ. ಕಾಲಚಕ್ರ ಬದಲಾಗುತ್ತಿರುತ್ತದೆ’ ಎಂದು ಸರಣಿ ಟ್ವೀಟ್‌ ಮತ್ತು ವಿಡಿಯೊಗಳ ಮೂಲಕ ಕಂಗನಾ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ದುರುದ್ದೇಶದಿಂದ ಕಟ್ಟಡ ಧ್ವಂಸ ಆರೋಪ ನಿರಾಕರಿಸಿದ ಬಿಎಂಸಿ

ಮುಂಬೈ (ಪಿಟಿಐ): ನಟಿ ಕಂಗನಾ ರನೋತ್‌‌ ಬಂಗಲೆಯ ಅನಧಿಕೃತ ಎಂದು ಹೇಳಲಾದ ಭಾಗವನ್ನು ದುರುದ್ದೇಶದಿಂದ ಧ್ವಂಸಗೊಳಿಸಲಾಗಿದೆ ಎಂಬ ಆರೋಪವನ್ನು ಬಾಂಬೆ ಹೈಕೋರ್ಟ್‌ನಲ್ಲಿ ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಗುರುವಾರ ನಿರಾಕರಿಸಿದೆ.

ಪ್ರಕರಣ ಸಂಬಂಧ, ಬಿಎಂಸಿ ಬಾಂಬೆ ಹೈಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಿದೆ. ಅಕ್ರಮ ಕಟ್ಟಡ ತೆರವುಗೊಳಿಸುವ ಸಂಬಂಧ ಬಿಎಂಸಿ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಕಂಗನಾ ಅವರು ಬಾಂಬೆ ಹೈಕೋರ್ಟ್‌ ಮೊರೆ ಹೋದ ಮರುದಿನವೇ ಈ ಬೆಳವಣಿಗೆ ನಡೆದಿದೆ.

‘ಅರ್ಜಿದಾರರು (ಕಂಗನಾ) ನಿಯಮ ಉಲ್ಲಂಘಿಸಿ ತನ್ನ ಕಚೇರಿಯಲ್ಲಿ ಕೆಲವು ಭಾಗಗಳನ್ನು ನಿರ್ಮಿಸಿದ್ದಾರೆ. ಆದರೆ ಅವರು ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ’ ಎಂದು ಬಿಎಂಸಿ ಆರೋಪಿಸಿದೆ. 

‘ನ್ಯಾಯಾಲಯವು ನಿರ್ದೇಶಿಸಿದ ಕೂಡಲೇ ಕಟ್ಟಡ ಧ್ವಂಸ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವ ಜೊತೆಗೆ ಯಾವುದೇ ನವೀಕರಣ ಕೆಲಸವನ್ನು ಪ್ರಾರಂಭಿಸದಂತೆ ಅರ್ಜಿದಾರರಿಗೆ ನ್ಯಾಯಾಲಯ ನಿರ್ದೇಶಿಸಬೇಕು’ ಎಂದು ಬಿಎಂಸಿ ಕೋರಿದೆ.

‘ಕಂಗನಾಗೆ ಸೇರಿದ ಆಸ್ತಿಯನ್ನು ಬಿಎಂಸಿ ಹಾನಿಗೊಳಿಸಿದೆ. ಇದರಿಂದ ವಿದ್ಯುತ್‌ ಮತ್ತು ನೀರಿನ ಸಂಪರ್ಕ ಅಸ್ತವ್ಯಸ್ತವಾಗಿದೆ. ಈ ಸೌಕರ್ಯಗಳನ್ನು ಪುನರ್‌ಕಲ್ಪಿಸಬೇಕು’ ಎಂದು ಕಂಗನಾ ಪರ ವಕೀಲರು ಮನವಿ ಮಾಡಿದ್ದರು.

ಪ್ರಕರಣದ ಸಂಬಂಧ ಆದೇಶ ನೀಡಲು ನಿರಾಕರಿಸಿರುವ ನ್ಯಾಯಾಲಯ, ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್‌ 22ಕ್ಕೆ ಮುಂದೂಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು