ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾ ಹತ್ಯೆ | ಆರೋಪಿಗೆ ನಾರ್ಕೋ ಪರೀಕ್ಷೆ: ಕೋರ್ಟ್‌ ಅನುಮತಿ ಕೇಳಿದ ಪೊಲೀಸರು

ಶ್ರದ್ಧಾ ವಾಲಕರ್‌ ದೇಹದ ತುಂಡುಗಳಿಗೆ ಮುಂದುವರಿದ ಶೋಧ
Last Updated 26 ನವೆಂಬರ್ 2022, 11:30 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನ ಸಹಜೀವನದ ಸಂಗಾತಿ, ಭೀಕರ ಹತ್ಯೆಗೊಳಗಾದ ಶ್ರದ್ಧಾ ವಾಲಕರ್‌ ದೇಹದ ಉಳಿದ ಭಾಗಗಳಿಗೆ ಶೋಧ ಕಾರ್ಯ ಸತತ ಎರಡನೇ ದಿನವೂ ಛತ್ತರ್‌ಪುರದ ಅರಣ್ಯ ಪ್ರದೇಶದಲ್ಲಿಮುಂದುವರಿದಿದೆ. ಆರೋಪಿಯನ್ನು ಮಾದಕ ದ್ರವ್ಯ ಸೇವನೆ (ನಾರ್ಕೋ) ಪರೀಕ್ಷೆಗೆ ಒಳಪಡಿಸಲು ಪೊಲೀಸರು ಅನುಮತಿ ಕೇಳಿದ್ದಾರೆ ಎಂದು ಬುಧವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಶ್ರದ್ಧಾ ದೇಹದ ತುಂಡುಗಳನ್ನು ಎಸೆದಿರುವಅರಣ್ಯ ಪ್ರದೇಶ ಸೇರಿ ಅನೇಕ ಸ್ಥಳಗಳಿಗೆಆರೋಪಿಯನ್ನು ಬುಧವಾರ ಕರೆದೊಯ್ದು ಪರಿಶೀಲಿಸಲಾಯಿತು. ಆರೋಪಿಯನ್ನುನಾರ್ಕೋ ಪರೀಕ್ಷೆಗೆ ಒಳಪಡಿಸಲು ಅರ್ಜಿ ಸಲ್ಲಿಸಿದ್ದೇವೆ. ನ್ಯಾಯಾಲಯದಿಂದ ಇನ್ನೂ ಅನುಮತಿ ಸಿಕ್ಕಿಲ್ಲ’ ಎಂದು ಅವರು ಹೇಳಿದರು.

ತನಿಖಾಧಿಕಾರಿಗಳ ಪ್ರಕಾರ, ಪೂನಾವಾಲಾ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿರುವುದರಿಂದ ಮತ್ತು ತನಿಖೆಗೆ ಸಹಕರಿಸದ ಕಾರಣ ನಾರ್ಕೋ ಪರೀಕ್ಷೆ ಅಗತ್ಯವಾಗಿದೆ. ಇದುವರೆಗೆ ಸಂಗ್ರಹಿಸಿದ ಶ್ರದ್ಧಾ ಶವದ 13 ಭಾಗಗಳ ಡಿಎನ್‌ಎ ವಿಶ್ಲೇಷಣೆಗಾಗಿ ಶ್ರದ್ಧಾ ಅವರ ತಂದೆಯ ರಕ್ತದ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದೆ.

ಶ್ರದ್ಧಾ ಅವರ ದೇಹದ್ದು ಎನ್ನಲಾದಕೆಲವು ಮೂಳೆಗಳು ಮತ್ತು ಬ್ಯಾಗ್‌ ವಶಪಡಿಸಿಕೊಳ್ಳಲಾಗಿದೆ. ಬ್ಯಾಗ್‌ನಲ್ಲಿಬಟ್ಟೆ ಮತ್ತು ಇತರ ವಸ್ತುಗಳು ಇವೆ. ಶ್ರದ್ಧಾ ಅವರ ರುಂಡ,ಫೋನ್ ಮತ್ತು ಹತ್ಯೆಗೆ ಬಳಸಿದ ಆಯುಧ ಈವರೆಗೆ ಪತ್ತೆಯಾಗಿಲ್ಲ.ಮೇ 22ರ ನಂತರ ಶ್ರದ್ಧಾ ಅವರ ಬ್ಯಾಂಕ್ ಖಾತೆಯಿಂದ ₹54,000 ಪೂನಾವಾಲಾ ಖಾತೆಗೆ ವರ್ಗಾಯಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.ಕೆಲವು ಅನುಮಾನಾಸ್ಪದ ಬ್ಯಾಂಕ್ ವಹಿವಾಟುಗಳೂ ನಡೆದಿರುವ ದಾಖಲೆ ಲಭಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರೂ ನಡೆಸಿರುವ ಚಾಟ್‌ಗಳನ್ನು ಸಹ ಪರಿಶೀಲಿಸಲಾಗುತ್ತಿದೆ.ಈ ಹಿಂದೆಯೂ ಪೂನಾವಾಲಾ ಆಕೆಯನ್ನು ಕೊಲ್ಲಲು ಪ್ರಯತ್ನಿಸಿರುವ ಶಂಕೆ ಇರುವುದರಿಂದ ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ತನಿಖೆ ವೇಳೆ, ಪೂನಾವಾಲಾ ಮತ್ತು ಶ್ರದ್ಧಾ ನಡುವಿನ ಹಳಸಿದ ಸಂಬಂಧದ ಬಗ್ಗೆ ಹೆಚ್ಚಿನ ವಿವರಗಳು ಬೆಳಕಿಗೆ ಬಂದಿವೆ. ಆಕೆ ಆತನೊಂದಿಗಿನ ಸಂಬಂಧದಲ್ಲಿ ಅತೃಪ್ತಿ ಹೊಂದಿದ್ದಳು. ಹಣಕಾಸಿನ ಸಮಸ್ಯೆಗಳು ಮತ್ತು ದಾಂಪತ್ಯ ದ್ರೋಹದ ಶಂಕೆ ಮೇಲೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಶ್ರದ್ಧಾ ಅವರ ಕುಟುಂಬದವರು ಮತ್ತು ಸ್ನೇಹಿತರು ಆರೋಪಿಸಿದ್ದಾರೆ.

ಆರೋಪಿಯನ್ನು ಗುರುವಾರ ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ನೀಡಲು ಕೋರಲಾಗುತ್ತದೆ.

‘ಶ್ರದ್ಧಾಗೆ ಸಹಜೀವನ ಸಂಗಾತಿ ಮೇಲಿತ್ತು ವಂಚನೆಯ ಶಂಕೆ’

ಮುಂಬೈ: ತನ್ನ ಸಹಜೀವನ ಸಂಗಾತಿ ಅಫ್ತಾಬ್‌ ಪೂನಾವಾಲಾ ತನಗೆ ವಂಚಿಸುತ್ತಿದ್ದಾನೆ ಎನ್ನುವ ಅನುಮಾನ ಪ್ರಿಯಕರನಿಂದಲೇ ದೆಹಲಿಯಲ್ಲಿ ಭೀಕರವಾಗಿ ಹತ್ಯೆಯಾದ,ಕಾಲ್‌ ಸೆಂಟರ್‌ ಉದ್ಯೋಗಿ‌ ಶ್ರದ್ಧಾ ವಾಲಕರ್‌ಗೆ ಇತ್ತು ಎಂದು ಸಾಮಾಜಿಕ ಕಾರ್ಯಕರ್ತೆಯೊಬ್ಬರು ಬುಧವಾರ ಹೇಳಿದ್ದಾರೆ.

ಮುಂಬೈ ಬೀಚ್ ಸ್ವಚ್ಛತಾ ಆಂದೋಲನದಲ್ಲಿಪಾಲ್ಗೊಂಡಿದ್ದ ಶ್ರದ್ಧಾ ವಾಲಕರ್‌ ತುಂಬಾ ಮೌನಿಯಾಗಿದ್ದರು. ಶ್ರದ್ಧಾ ಅವರಿಗೆ ಹಣಕಾಸಿನ ಸಮಸ್ಯೆ ಇತ್ತು. ಆಕೆ ಮತ್ತು ಆಕೆಯ ಸಂಗಾತಿ ಅಫ್ತಾಬ್‌ ಪೂನಾವಾಲಾ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಎನ್‌ಜಿಒವೊಂದರ ಮುಖ್ಯಸ್ಥೆ, ಸಾಮಾಜಿಕ ಕಾರ್ಯಕರ್ತೆ ಶ್ರೇಹಾ ಧರಗಲ್ಕರ್ ತಿಳಿಸಿದ್ದಾರೆ.

ಕಳೆದ ವರ್ಷ ಮರಾಠಿ ನಟಿ ಮಾಧುರಿ ಸಂಗೀತಾ ಪಾಟೀಲ್ ಅವರೊಂದಿಗೆ ಶ್ರೇಹಾ ಧರಗಲಕರ್‌ ಮುಂಬೈನ ಜುಹು, ವರ್ಸೋವಾ, ಮಾಧ್ ಮತ್ತು ಅಕ್ಸಾ ಬೀಚ್‌ಗಳಲ್ಲಿ ಸ್ವಚ್ಛತಾ ಆಂದೋಲನ ನಡೆಸಿದ್ದರು. ಇದರಲ್ಲಿಪಾಲ್ಗೊಂಡಿದ್ದ ಶ್ರದ್ಧಾ ಮುಂಬೈನ ಮಲಾಡ್‌ನಲ್ಲಿ ಮಾಡುತ್ತಿದ್ದ ಕಾಲ್ ಸೆಂಟರ್ ಉದ್ಯೋಗ ತೊರೆಯಲು ಬಯಸುವುದಿಲ್ಲವೆಂದುಶ್ರೇಹಾ ಬಳಿ ಹೇಳಿಕೊಂಡಿದ್ದರಂತೆ.

‘ಶ್ರದ್ಧಾವಾಲಕರ್ ಅವರ ಕುಟುಂಬ ನೆಲೆಸಿದ್ದ ಮುಂಬೈ ಮತ್ತು ವಸೈನಿಂದ ಆಕೆಯನ್ನು ಆಕೆಯ ಪ್ರಿಯಕರ ಬಲವಂತವಾಗಿ ದೂರ ಕರೆದೊಯ್ದಿದ್ದ. ಕಾರಣ,ಆಕೆಯ ಪೋಷಕರು ಪೊಲೀಸರನ್ನು ಸಂಪರ್ಕಿಸಬಹುದೆಂಬ ಹೆದರಿಕೆಯಿಂದ ಆತ ಹೀಗೆ ಮಾಡಿದ್ದ.ಶ್ರದ್ಧಾಗೆ ಹಲವು ವಿಷಯಗಳಲ್ಲಿ ಚಿಂತೆ ಕಾಡುತ್ತಿತ್ತು. ‘ಯಾಕಾಗಿ ಗುಂಪಿನಲ್ಲಿ ಬೆರೆಯುವುದಿಲ್ಲ, ಯಾವಾಗಲೂ ಪ್ರತ್ಯೇಕವಾಗಿಯೇ ಇರುತ್ತೀರಲ್ಲಾ’ ಎಂದು ಕೇಳಿದ್ದಾಗ, ಆಕೆ ‘ತುಂಬಾ ಚಿಂತೆ ಆವರಿಸಿದೆ. ನನಗೆ ಆರ್ಥಿಕ ಸಮಸ್ಯೆಗಳಿವೆ’ ಎಂದಿದ್ದರು. ತನ್ನ ಲಿವ್-ಇನ್ ರಿಲೇಷನ್‌ಶಿಪ್‌ ಬಗ್ಗೆ ಆಕೆ ಹೇಳಿರಲಿಲ್ಲ. ಆದರೆ, ತನ್ನ ಗೆಳೆಯ ಮಹಾರಾಷ್ಟ್ರ ತೊರೆಯಲು ಬಯಸುತ್ತಿದ್ದಾನೆ ಎಂದಿದ್ದಳು’ ಎಂದು ಶ್ರೇಹಾ ತಿಳಿಸಿದ್ದಾರೆ.

‘ಪೂನಾವಾಲಾ ತನಗೆ ವಂಚಿಸುತ್ತಿರಬಹುದು ಎಂಬ ಶಂಕೆ, ಇಬ್ಬರ ತಪ್ಪು ಗ್ರಹಿಕೆಗಳು ಮತ್ತು ಜಗಳದಿಂದಾಗಿ ಶ್ರದ್ಧಾಗೆ ತನ್ನ ಕೆಲಸದ ಮೇಲೆ ಸರಿಯಾಗಿ ಗಮನ ಹರಿಸಲು ಆಗುತ್ತಿರಲಿಲ್ಲ.ಅವರ ಸಂಬಂಧ ಬಿಗಡಾಯಿಸಿತ್ತು. ಇಬ್ಬರ ಬಳಿಯೂ ಹಣವಿಲ್ಲದ ಸಂದರ್ಭಗಳೂ ಇದ್ದವು. ಕಾಲ್‌ಸೆಂಟರ್‌ ಉದ್ಯೋಗದ ಜತೆಗೆ ಒಂದಿಷ್ಟು ಹೆಚ್ಚುವರಿ ಹಣ ಸಂಪಾದಿಸಲು ಎನ್‌ಜಿಒದಲ್ಲಿಅರೆಕಾಲಿಕ ಕೆಲಸ ಅಥವಾ ವರ್ಕ್‌ ಫ್ರಂ ಹೋಂ ಕೆಲಸದ ಅವಕಾಶವಿದೆಯೇ ಎಂದು ಶ್ರದ್ಧಾ ವಿಚಾರಿಸಿದ್ದಳು. ಆಕೆ ಮುಂಬೈಯನ್ನು ತುಂಬಾ ಪ್ರೀತಿಸುತ್ತಿದ್ದಳು. ನಗರಕ್ಕೆ ವಿಶೇಷವಾಗಿ ಏನನ್ನಾದರೂ ಮಾಡಬೇಕೆಂಬ ತುಡಿತ ಆಕೆಯಲ್ಲಿತ್ತು. ಆಕೆ ಶ್ರಮಜೀವಿ,ಕಷ್ಟಪಟ್ಟು ದುಡಿಯುತ್ತಿದ್ದಳು’ ಎಂದು ಶ್ರೇಹಾ ಹೇಳಿದ್ದಾರೆ.

‘ಬಂಧನದ ನಂತರ ದೆಹಲಿ ಪೊಲೀಸರು ಮಾಹಿತಿ ನೀಡಿಲ್ಲ’

ರಾಷ್ಟ್ರ ರಾಜಧಾನಿಗೆ ಸ್ಥಳಾಂತರವಾಗುವ ಮೊದಲು ಮುಂಬೈನ ವಸೈ ಬಳಿ ವಾಸಿಸುತ್ತಿದ್ದ ಶ್ರದ್ಧಾ ವಾಲಕರ್ ಹತ್ಯೆ ಆರೋಪಿ ಅಫ್ತಾಬ್ ಪೂನಾವಾಲಾನನ್ನು ಕಳೆದ ಶನಿವಾರ ಬಂಧಿಸಿದ ನಂತರ ದೆಹಲಿ ಪೊಲೀಸರು ಹೆಚ್ಚಿನ ವಿವರಗಳಿಗಾಗಿ ಮಹಾರಾಷ್ಟ್ರದ ಪಾಲ್‌ಘರ್‌ ಜಿಲ್ಲೆಯ ಪೊಲಿಸರನ್ನು ಸಂಪರ್ಕಿಸಿಲ್ಲ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

‘ಮಾಣಿಕ್‌ಪುರ ಪೊಲೀಸ್ ಠಾಣೆಯ ತಂಡವು ನ.8 ಮತ್ತು 12 ರ ನಡುವೆ ದೆಹಲಿಯಲ್ಲಿ ಹಾಜರಿತ್ತು. ಮಹರೌಲಿ ಠಾಣೆ ಪೊಲೀಸರೊಂದಿಗೆ ಸಮನ್ವಯ ಸಾಧಿಸಿತ್ತು.ನಾಪತ್ತೆ ದೂರು ಸೇರಿ ಎಲ್ಲ ವಿವರಗಳನ್ನು ಅವರಿಗೆ ನೀಡಲಾಗಿತ್ತು.ಆದಾಗ್ಯೂ, ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸಿದ ನಂತರ ಯಾವುದೇ ಮಾಹಿತಿ ನೀಡಿಲ್ಲ.ತನಿಖೆಯಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ಆದರೆ, ಅವರು ಯಾವುದೇ ರೀತಿಯ ನೆರವು ಬಯಸಿದರೂ ಒದಗಿಸಲು ಸಿದ್ಧ’ ಎಂದುಮೀರಾ-ಭಾಯಂದರ್ ವಸೈ ವಿರಾರ್ (ಎಂಬಿವಿವಿ)ನ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಅಫ್ತಾಬ್‌ ಮುಖದಲ್ಲಿ ಇರಲಿಲ್ಲ ಪಶ್ಚಾತ್ತಾಪ, ಇತ್ತು ಆತ್ಮವಿಶ್ವಾಸ’

ಅಫ್ತಾಬ್‌ ಪೂನಾವಾಲಾನನ್ನು ಆರಂಭದಲ್ಲಿ ವಿಚಾರಣೆಗಾಗಿ ಮಾಣಿಕ್‌ಪುರ ಪೊಲೀಸ್‌ ಠಾಣೆಗೆ ಕರೆಸಿದಾಗಆತನ ಮುಖದಲ್ಲಿ ಎಳ್ಳಷ್ಟು ಪಶ್ಚಾತ್ತಾಪ ಕಾಣಿಸಿರಲಿಲ್ಲ, ಆತ್ಮವಿಶ್ವಾಸವಿತ್ತು ಎಂದು ಮಹಾರಾಷ್ಟ್ರ ಪೊಲೀಸ್‌ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.

ಶ್ರದ್ಧಾಅವರ ಕುಟುಂಬ ಸದಸ್ಯರು, ಶ್ರದ್ಧಾ ಪತ್ತೆಯಾಗದಿದ್ದಾಗನಾಪತ್ತೆ ದೂರು ದಾಖಲಿಸಿದ್ದರು. ಪಾಲ್‌ಘರ್‌ನ ವಸೈ ಪಟ್ಟಣದ ಮಾಣಿಕ್‌ಪುರ ಪೊಲೀಸರು ಪೂನಾವಾಲಾನನ್ನುಕಳೆದ ತಿಂಗಳುಎರಡು ಬಾರಿ ಮತ್ತು ನವೆಂಬರ್ 3 ರಂದು ವಿಚಾರಣೆಗೆ ಕರೆಸಿದ್ದರು.

‘ವಿಚಾರಣೆ ವೇಳೆ ಅಫ್ತಾಬ್‌, ‘ಶ್ರದ್ಧಾ ನನ್ನೊಂದಿಗೆ ಇಲ್ಲ, ನನ್ನನ್ನು ತೊರೆ‌ದು ಹೋಗಿದ್ದಾಳೆ’ ಎಂದೇ ಹೇಳಿದ್ದ’ ಎಂದು ಎಎಸ್‌ಐ ಸಂಪತ್‌ರಾವ್‌ ಪಾಟೀಲ್‌ ಹೇಳಿದ್ದಾರೆ.

‘ಮತಾಂತರಕ್ಕೆ ಯತ್ನಿಸಿದ ಸಾಧ್ಯತೆ ಇದೆ’

ಶ್ರದ್ಧಾ ಆಪ್ತ ಸ್ನೇಹಿತ ರಜತ್‌ ಶುಕ್ಲಾ ‘ಪೂನಾವಾಲಾ ಆಕೆಯನ್ನು ಮತಾಂತರಿಸಲು ಒತ್ತಾಯಿಸಿರುವ ಸಾಧ್ಯತೆಯಿದೆ. ಅವನು ಸಾಮಾನ್ಯ ವ್ಯಕ್ತಿಯಲ್ಲ. ಲವ್ ಜಿಹಾದ್, ಭಯೋತ್ಪಾದನೆ ನಂಟು ಹೊಂದಿರಬಹುದು ಅಥವಾ ಇಡೀ ಪ್ರಕರಣದಲ್ಲಿ ಯಾವುದೋ ಸಂಚು ಇರಬಹುದು. ಪೂನಾವಾಲಾ ಆಕೆಯ ಪ್ರೇಮಿಯಂತೆ ಕಾಣಿಸುತ್ತಿಲ್ಲ. ಆತ ನಿಜವಾದ ಪ್ರೇಮಿಯಾಗಿದ್ದರೆ ಪ್ರೇಯಸಿಯ ದೇಹವನ್ನು ಈ ರೀತಿ ಕತ್ತರಿಸುವಂತಹ ಘೋರ ಅಪರಾಧ ಎಸಗಲು ಸಾಧ್ಯವಿಲ್ಲ. ಸಹಜೀವನ ಸಂಬಂಧವನ್ನೂ ರಹಸ್ಯವಾಗಿರಿಸಿದ್ದ. ಪ್ರಕರಣದ ಸಮಗ್ರ ತನಿಖೆ ಆಗಬೇಕು, ಸತ್ಯ ಹೊರಬರಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT