ಮಂಗಳವಾರ, ಡಿಸೆಂಬರ್ 7, 2021
22 °C

ಬಿಎಸ್‌ಎಫ್ ವ್ಯಾಪ್ತಿ ಹೆಚ್ಚಳ ಒಕ್ಕೂಟ ವ್ಯವಸ್ಥೆಗೆ ಮಾರಕ: ಸಿಧು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಬಿಎಸ್‌ಎಫ್‌ನ ಕಾರ್ಯಾಚರಣೆಯ ವ್ಯಾಪ್ತಿ ಹೆಚ್ಚಳದ ವಿಷಯವಾಗಿ ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ. ಇದು ‘ರಾಜ್ಯದೊಳಗೆ ರಾಜ್ಯವನ್ನು ರಚಿಸುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ’ಎಂದು ಕಿಡಿ ಕಾರಿದ್ದಾರೆ.

ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ‘ಪಂಜಾಬ್ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಡೆಗಣಿಸಲಾಗಿದೆ’ ಎಂದು ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದರು. ಇದೇವೇಳೆ, ರಾಜ್ಯದಲ್ಲಿ ಚಿತ್ರಹಿಂಸೆ, ಸುಳ್ಳು ಪ್ರಕರಣಗಳು, ಅನಿಯಂತ್ರಿತ ಮತ್ತು ಕಾನೂನುಬಾಹಿರ ಬಂಧನಗಳ ಭಯವನ್ನು ವ್ಯಕ್ತಪಡಿಸಿದರು.

ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಅಂತರರಾಷ್ಟ್ರೀಯ ಗಡಿಯಲ್ಲಿ ಇರುವ ಬಿಎಸ್‌ಎಫ್‌ನ 15 ಕಿಲೋಮೀಟರ್‌ ಕಾರ್ಯಾಚರಣೆ ವ್ಯಾಪ್ತಿಯನ್ನು 50 ಕಿಮೀ ಹೆಚ್ಚಿಸುವ ಕುರಿತಂತೆ ಕೇಂದ್ರ ಸರ್ಕಾರವು ಇತ್ತೀಚೆಗೆ ಬಿಎಸ್‌ಎಫ್ ಕಾಯ್ದೆಗೆ ತಿದ್ದುಪಡಿ ತಂದಿದೆ.

ಬಿಎಸ್‌ಎಫ್‌ನ ಕಾರ್ಯಾಚರಣೆ ವ್ಯಾಪ್ತಿಯ ವಿಸ್ತರಣೆ ಕುರಿತ ಕೇಂದ್ರದ ನಿರ್ಧಾರದ ಬಗ್ಗೆ ಚರ್ಚಿಸಲು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದ ಸಿಧು, ಸರಣಿ ಟ್ವೀಟ್ ಮೂಲಕ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಒಂದು ರಾಜ್ಯದೊಳಗೆ ಒಂದು ರಾಜ್ಯವನ್ನು ರಚಿಸುವ ಮೂಲಕ ಕೇಂದ್ರವು ದೇಶದ ಒಕ್ಕೂಟ ರಚನೆಯನ್ನು ದುರ್ಬಲಗೊಳಿಸುತ್ತಿದೆ, ಬಿಎಸ್‌ಎಫ್ ಎಂದರೆ ಗಡಿ ಭದ್ರತಾ ಪಡೆ, ಗಡಿಯ ವ್ಯಾಖ್ಯಾನ ಏನು? 50 ಕಿಮೀ ?? ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವುದು ಪ್ರಾಥಮಿಕವಾಗಿ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಇದು ರಾಜ್ಯ ಪಟ್ಟಿಗೆ ಸೇರುತ್ತದೆ’ ಎಂದು ಸಿಧು ಟ್ವೀಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಭದ್ರತೆಯ ಹೆಸರಿನಲ್ಲಿ ಬಿಎಸ್‌ಎಫ್ ದೇಶದ ಸಾಂವಿಧಾನಿಕ ನಿಬಂಧನೆಯನ್ನು ‘ದಿನನಿತ್ಯ ಉಲ್ಲಂಘಿಸುತ್ತಿದೆ’ಮತ್ತು ‘ಪಂಜಾಬ್‌ನಲ್ಲಿ ಚಿತ್ರಹಿಂಸೆ, ಸುಳ್ಳು ಪ್ರಕರಣಗಳು, ಅನಿಯಂತ್ರಿತ ಮತ್ತು ಕಾನೂನುಬಾಹಿರ ಬಂಧನಗಳು ಸಂಭವಿಸುವ ಸಾಧ್ಯತೆಯಿದೆ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು