ನವದೆಹಲಿ: ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಶಿಕ್ಷೆ ಮತ್ತು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುತಾತ್ಮ ಪ್ರಧಾನ ಮಂತ್ರಿಯ ಮಗನಾಗಿರುವ ರಾಹುಲ್ ಗಾಂಧಿಯನ್ನು ಮೀರ್ ಜಾಫರ್ ಎಂದು ನಿಂದಿಸಲಾಗಿದೆ. ಅವರ ಕುಟುಂಬದ ಮೇಲೆ ಅಪಮಾನಕರ ಹೇಳಿಕೆಗಳನ್ನು ಮಾಡಲಾಗಿದೆ. ರಕ್ತದಿಂದ ಪ್ರಜಾಪ್ರಭುತ್ವವನ್ನು ಪೋಷಿಸಿರುವ ಕುಟುಂಬದಿಂದ ಬಂದಿರುವ ಅವರು, ಯಾವತ್ತೂ ತಲೆಬಾಗುವುದಿಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.
2019ರಲ್ಲಿ ಮೋದಿ ಉಪನಾಮವನ್ನು ವ್ಯಂಗ್ಯ ಮಾಡಿದ್ದ ಆರೋಪ ಮೇಲೆ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ನಿನ್ನೆ ಸೂರತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ, ಶುಕ್ರವಾರ ರಾಹುಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಮುಗಿಬಿದ್ದಿರುವ ಪ್ರಿಯಾಂಕಾ ಗಾಂಧಿ, ‘ನರೇಂದ್ರ ಮೋದಿ ಜೀ, ನಿಮ್ಮ ಹೊಗಳುಭಟ್ಟರು ಹುತಾತ್ಮ ಪ್ರಧಾನಿಯ ಮಗನನ್ನು ದೇಶದ್ರೋಹಿ, ಮೀರ್ ಜಾಫರ್ ಎಂದು ಕರೆದಿದ್ದಾರೆ. ತಂದೆ ಸತ್ತ ಬಳಿಕ ಕಾಶ್ಮೀರಿ ಪಂಡಿತ್ ಸಂಪ್ರದಾಯದಂತೆ ಪಗ್ಡಿ ಧರಿಸಿದ್ದಕ್ಕೆ ನಿಮ್ಮ ಪಕ್ಷದಿಂದ ಮುಖ್ಯಮಂತ್ರಿಯಾಗಿರುವವರೊಬ್ಬರು ರಾಹುಲ್ ಗಾಂಧಿಯವರ ತಂದೆ ಯಾರು ಎಂದು ಪ್ರಶ್ನೆಗಳನ್ನು ಎತ್ತಿದ್ದಾರೆ’ಎಂದು ಹಿಂದಿಯಲ್ಲಿ ಮಾಡಿರುವ ಟ್ವೀಟ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
'ಇಡೀ ಕುಟುಂಬ ಮತ್ತು ಕಾಶ್ಮೀರಿ ಪಂಡಿತ್ ಸಮುದಾಯವನ್ನು ಅವಮಾನಿಸಿ, ನಾವೇಕೆ ನೆಹರು ಉಪನಾಮ ಇಟ್ಟುಕೊಂಡಿಲ್ಲ ಎಂದು ನೀವು ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದ್ದೀರಿ? ಆದರೂ ನಿಮಗೆ ಯಾವ ನ್ಯಾಯಾಧೀಶರೂ ಎರಡು ವರ್ಷ ಸಜೆ ವಿಧಿಸಿಲ್ಲ. ನಿಮ್ಮನ್ನು ಸಂಸತ್ತಿನಿಂದ ಅನರ್ಹಗೊಳಿಸಲಿಲ್ಲ’ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಲಂಡನ್‌ನಲ್ಲಿ ರಾಹುಲ್ ಹೇಳಿಕೆಗೆ ಪ್ರತಿಯಾಗಿ, ಪ್ರಸ್ತುತ ಭಾರತದ ಮೀರ್ ಜಾಫರ್, ಭಾರತದಲ್ಲಿ ನವಾಬನಾಗಲು ವಿದೇಶಿ ಶಕ್ತಿಗಳ ನೆರವು ಕೋರಿದ್ದಾರೆ ಎಂದು ಮಂಗಳವಾರ ಬಿಜೆಪಿ ಟೀಕಿಸಿತ್ತು.
ಈ ಬಗ್ಗೆ ಕಿಡಿಕಾರಿರುವ ಅವರು, ರಾಹುಲ್ ಗಾಂಧಿ ನೈಜ ದೇಶಪ್ರೇಮಿ, ಹಾಗಾಗಿಯೇ ಅದಾನಿ ಸಮೂಹದ ಲೂಟಿ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಂಚನೆಯನ್ನು ಪ್ರಶ್ನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
‘ನಿಮ್ಮ ಸ್ನೇಹಿತ ಗೌತಮ್ ಅದಾನಿ ದೇಶದ ಸಂಸತ್ತಿಗಿಂತಲೂ ದೊಡ್ಡವರಾಗಿದ್ದಾರೆ. ನಿಮ್ಮ ಸ್ನೇಹಿತನ ಬಗ್ಗೆ ಪ್ರಶ್ನೆ ಎತ್ತಿದಾಗ ವಿಚಲಿತರಾಗುತ್ತೀರಿ. ನಮ್ಮದು ವಂಶಪಾರಂಪರ್ಯ ರಾಜಕಾರಣ ಎಂದು ನೀವು ಟೀಕಿಸುತ್ತೀರಿ? ಈ ಕುಟುಂಬ ರಕ್ತದಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಪೋಷಿಸಿದೆ’ಎಂದು ಪ್ರಿಯಾಂಕಾ ಹೇಳಿದ್ದಾರೆ.
ಈ ಕುಟುಂಬ ದೇಶದ ಜನರ ಪರವಾಗಿ ಧ್ವನಿ ಎತ್ತಿದೆ. ಹಲವು ಪೀಳಿಗೆಗಳಿಂದ ಸತ್ಯಕ್ಕಾಗಿ ಹೋರಾಡುತ್ತಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.