ಗುರುವಾರ , ಜೂನ್ 30, 2022
22 °C

ಬಘೆಲ್‌ ಭದ್ರತಾ ವಾಹನಗಳ ಮೇಲೆ ದಾಳಿ; ನಿರಾಶೆಗೊಂಡ ಬಿಜೆಪಿಯದ್ದೇ ಸಂಚು– ಅಖಿಲೇಶ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸಚಿವ ಸತ್ಯಪಾಲ್‌ ಸಿಂಗ್‌ ಬಘೆಲ್‌ ಅವರ ಭದ್ರತಾ ವಾಹನದ ಮೇಲೆ ನಡೆದಿರುವ ದಾಳಿಯಲ್ಲಿ ಬಿಜೆಪಿಯ ವಿರೋಧ ಪಕ್ಷದವರ ಕೈವಾಡ ಇರುವುದಾಗಿ ಮಾಡಿರುವ ಆರೋಪವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ತಳ್ಳಿ ಹಾಕಿದ್ದಾರೆ. ಎಸ್‌.ಪಿ.ಸಿಂಗ್‌ ಬಘೆಲ್‌ ಅವರು ಕರ್ಹಲ್‌ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಖಿಲೇಶ್‌ ಅವರ ಎದುರು ಕಣಕ್ಕಿಳಿದಿದ್ದಾರೆ.

ಸಮಾಜವಾದಿ ಪಕ್ಷದವರು ದಾಳಿಯ ಹಿಂದಿದ್ದಾರೆ ಎಂದು ಬಘೆಲ್‌, ಅನುರಾಗ್‌ ಠಾಕೂರ್‌ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಆರೋಪಿಸಿದ್ದರು. ದಾಳಿಯ ಪ್ರಯತ್ನದ ಬೆನ್ನಲ್ಲೇ ಬಘೆಲ್‌ ಅವರಿಗೆ ಕೇಂದ್ರ ಸರ್ಕಾರವು 'ಝಡ್‌ ಶ್ರೇಣಿ' ಭದ್ರತೆ ನೀಡಿದೆ. 'ಸೋಲುವ ಸೂಚನೆಯಿಂದ ನಿರಾಶೆಗೊಂಡಿರುವ ಬಿಜೆಪಿ ಪಕ್ಷ ಸ್ವತಃ ತಮ್ಮ ಮುಖಂಡರ ಮೇಲೆ ದಾಳಿಗೆ ಸಂಚು ರೂಪಿಸಿದೆ' ಎಂದು ಅಖಿಲೇಶ್‌ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ.

'ಬಿಜೆಪಿಗೆ ಚುನಾವಣೆಯಲ್ಲಿ ಗೆಲ್ಲುವುದು ಸಾಧ್ಯವಿಲ್ಲ ಎಂದು ತಿಳಿದು ನಿರಾಶೆಗೊಂಡಿದ್ದು, ತನ್ನ ಮೇಲೆ ತಾನೇ ದಾಳಿ ಮಾಡಿಕೊಳ್ಳುತ್ತಿದೆ. ಅವರಲ್ಲಿ ಕೇಂದ್ರದ ಭದ್ರತಾ ಪಡೆಗಳಿವೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆ ಇದೆ. ಉತ್ತರ ಪ್ರದೇಶ ಸರ್ಕಾರವು ಏನು ಮಾಡುತ್ತಿದೆ?' ಎಂದು ಯೋಗಿ ಆದಿತ್ಯನಾಥ್‌ ಸರ್ಕಾರದ ಭದ್ರತಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನಿಸಿದ್ದಾರೆ.

 

ಸಮಾಜವಾದಿ ಪಕ್ಷದ ಗೂಂಡಾಗಳಿಂದಲೇ ದಾಳಿ ನಡೆದಿದೆ ಎಂದು ಅನುರಾಗ್‌ ಠಾಕೂರ್‌ ಆರೋಪಿಸಿದ್ದರು. ಘಟನೆಯ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಅವರು ದಾಳಿಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.

 

ಮೈನ್‌ಪುರಿಯಲ್ಲಿ ಪ್ರಚಾರ ಕಾರ್ಯ ಮುಗಿಸಿ ಹೊರಟಿದ್ದಾಗ ಬಘೆಲ್‌ ಅವರ ಭದ್ರತಾ ವಾಹನಗಳ ಮೇಲೆ ಕಲ್ಲುಗಳು ಹಾಗೂ ದೊಣ್ಣೆಗಳಿಂದ ಕೆಲವು ಮಂದಿ ದಾಳಿ ನಡೆಸಿದ್ದರು. ಘಟನೆಯಲ್ಲಿ ಕಲ್ಲೇಟಿನಿಂದ ವಾಹನದ ಕಿಟಕಿ ಗಾಜು ಒಡೆದಿತ್ತು. ಬಘೆಲ್‌ ಅವರಿಗೆ ಯಾವುದೇ ಹಾನಿ ಆಗಿರಲಿಲ್ಲ. ಬಘೆಲ್‌ ಅವರು ದಾಖಲಿಸಿರುವ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಫೆಬ್ರುವರಿ 20ರಂದು ಮೂರನೇ ಹಂತದ ಮತದಾನ ನಡೆಯಲಿದ್ದು, ಕರ್ಹಲ್‌ ಕ್ಷೇತ್ರದ ಮತದಾನವೂ ಅದೇ ದಿನ ನಿಗದಿಯಾಗಿದೆ. ಮಾರ್ಚ್‌ 10ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು