ಗುರುವಾರ , ಆಗಸ್ಟ್ 11, 2022
27 °C

ಮೊದಲು ಮಹಾರಾಷ್ಟ್ರ ರೈತರ ಬಗ್ಗೆ ಮಾತನಾಡಿ: ಠಾಕ್ರೆಗೆ ತಿರುಗೇಟು ನೀಡಿದ ಫಡಣವೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ತಿರುಗೇಟು ನೀಡಿದ್ದಾರೆ.

‘ಮುಖ್ಯಮಂತ್ರಿಯವರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಪ್ರತಿಕ್ರಿಯಿಸುವ ಬದಲು ಮಹಾರಾಷ್ಟ್ರ ರೈತರ ಬಗ್ಗೆ ಮೊದಲು ಮಾತನಾಡಬೇಕು. ಇಲ್ಲಿ (ಮಹಾರಾಷ್ಟ್ರದಲ್ಲಿ) ಪ್ರತಿಭಟಿಸುವವರನ್ನು ಥಳಿಸಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರವು ದೆಹಲಿ ಪ್ರತಿಭಟನಾಕಾರರ ಬಗ್ಗೆ ಮಾತನಾಡುತ್ತಿದೆ ಮತ್ತು ಅದನ್ನು ತುರ್ತುಪರಿಸ್ಥಿತಿ ಹೇಳುತ್ತಿದೆ’ ಎಂದು ಟೀಕಿಸಿದ್ದಾರೆ.

ಸರ್ಕಾರದ ವಿರುದ್ಧ ಭಾನುವಾರವೂ ಗುಡುಗಿದ್ದ ಫಡಣವೀಸ್‌, ‘ಮಹಾರಾಷ್ಟ್ರದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಠಾಕ್ರೆ, ‘ಮಹಾರಾಷ್ಟ್ರದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ ಎಂದಾದರೆ, ದೆಹಲಿ ಹೊರವಲಯದಲ್ಲಿ ಪ್ರತಿಭಟನಾನಿರತ ರೈತರನ್ನು ಗುರಿಯಾಗಿಸಿರುವ ರೀತಿಯನ್ನು ಗಮನಿಸಿದರೆ ದೇಶದ ಉಳಿದ ಭಾಗಗಳಲ್ಲಿ ಘೋಷಿತ ತುರ್ತುಪರಿಸ್ಥಿತಿ ಇದೆ’ ಎಂದಿದ್ದರು.

ಮಾತ್ರವಲ್ಲದೆ, ಶೀತದ ವಾತಾವರಣದಲ್ಲಿ ಪ್ರತಿಭಟಿಸುತ್ತಿರುವ ರೈತರ ಮೇಲೆ ನೀರು ಸುರಿದದ್ದು ಸಾಮರಸ್ಯದ ಸಂಕೇತವೇ ಎಂದು ಪ್ರಶ್ನಿಸಿದ್ದರು. ಜೊತೆಗೆ ಬಿಜೆಪಿಯು ಪ್ರತಿಭಟನಾನಿರತ ರೈತರನ್ನು ‘ರಾಷ್ಟ್ರವಿರೋಧಿಗಳು’ ಎಂದಿದ್ದನ್ನು ಖಂಡಿಸಿದ್ದರು.

ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಈ ಇಬ್ಬರು ನಾಯಕರು ಪರಸ್ಪರ ಟೀಕೆಗಳನ್ನು ಮಾಡಿದ್ದಾರೆ. ಹರಿಯಾಣ ಮತ್ತು ಪಂಜಾಬ್‌ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಸರ್ಕಾರ ಹಾಗೂ ರೈತರ ನಡುವೆ 5 ಸುತ್ತಿನ ಮಾತುಕತೆ ನಡೆದಿದೆಯಾದರೂ ಸಮಸ್ಯೆ ಬಗೆಹರಿದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು