ಸೋಮವಾರ, ಸೆಪ್ಟೆಂಬರ್ 20, 2021
21 °C
ಕೋವಿಡ್‌–19 ಮಕ್ಕಳ ಆಸ್ಪತ್ರೆಗಳನ್ನು ಬಲಪಡಿಸಲು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸಲಹೆ

ಕೋವಿಡ್‌ ಪೀಡಿತ ಮಕ್ಕಳಿಗೆ ಮಾನಸಿಕ, ಸಾಮಾಜಿಕ ಬೆಂಬಲ ಅಗತ್ಯ: ಎನ್‌ಎಚ್‌ಆರ್‌ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani
ನವದೆಹಲಿ: ಮಕ್ಕಳ ಕೋವಿಡ್‌ ಆಸ್ಪತ್ರೆಗಳನ್ನು ಬಲಪಡಿಸುವ ಜೊತೆಗೆ, ಕೊರೊನಾ ಸೋಂಕಿನ ಕಾರಣಕ್ಕಾಗಿ ಪ್ರತ್ಯೇಕವಾಗಿರುವ ಮಕ್ಕಳಿಗೆ ಮಾನಸಿಕ ಮತ್ತು ಸಾಮಾಜಿಕ ಬೆಂಬಲ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳು ಆಯೋಗವು (ಎನ್‌ಎಚ್‌ಆರ್‌ಸಿ) ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದೆ.
 
ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಸಿಬ್ಬಂದಿ ಲಸಿಕೆ ಬಗ್ಗೆ ಇರುವ ಅನುಮಾನಗಳನ್ನು ಹೋಗಲಾಡಿಸಬೇಕು. ಇದರ ಜತೆಗೆ ಸಂಪರ್ಕಕ್ಕೆ ಬರುವ ಮಕ್ಕಳಿಗೆ ವೈರಸ್ ಸೋಂಕು ತಗುಲದಂತೆ ತಡೆಯಲು ಅಗತ್ಯವಾದ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಒದಗಿಸಬೇಕು ಎಂದೂ ಆಯೋಗವು ಶಿಫಾರಸು ಮಾಡಿದೆ.
 
 
ಕೋವಿಡ್–19 ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತು ಈ ತಿಂಗಳ ಆರಂಭದಲ್ಲಿ ಎನ್‌ಎಚ್‌ಆರ್‌ಸಿಯ ಸಲಹಾ ಸಮಿತಿಯು ನೀಡಿರುವ ಈ ಶಿಫಾರಸುಗಳ ಜೊತೆಗೆ ಇತರ ಅಂಶಗಳೂ ಇವೆ. ಕೋವಿಡ್‌ 3ನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದ ಸಂದರ್ಭದಲ್ಲಿ ಆಯೋಗವು ಈ ಸಲಹೆಗಳನ್ನು ನೀಡಿತ್ತು. ಆದರೆ, ತಜ್ಞರು ಈ ವರದಿಗಳನ್ನು ಅಲ್ಲಗಳೆದಿದ್ದರು. 
 
ಮಕ್ಕಳ ಕೋವಿಡ್ ಆಸ್ಪತ್ರೆಗಳು, ಕೋವಿಡ್ ಶಿಷ್ಟಾಚಾರಗಳನ್ನು ಬಲಪಡಿಸುವ ಅವಶ್ಯಕತೆ ಇದೆ. ಮಕ್ಕಳ ಆಸ್ಪತ್ರೆಗಳಲ್ಲಿ ಹಾಸಿಗೆ ಸಂಖ್ಯೆಗಳ ಹೆಚ್ಚಳ, ತರಬೇತಿ ಪಡೆದ ಸಿಬ್ಬಂದಿ, ಔಷಧಿ, ಉಪಕರಣಗಳ ಲಭ್ಯತೆಯನ್ನೂ ಖಾತ್ರಿಪಡಿಸಲು ಎನ್‌ಎಚ್‌ಆರ್‌ಸಿ ಸೂಚಿಸಿದೆ.
 
ಇವುಗಳ ಜೊತೆಗೆ ಕೊರೊನಾ ಸೋಂಕಿಗೊಳಗಾಗುವ ಮಕ್ಕಳು ಪ್ರತ್ಯೇಕವಾಗಿ ಇರುವಂಥ ಸಂದರ್ಭದಲ್ಲಿ ಅವರ ಮಾನಸಿಕ ಸ್ಥಿತಿಯ ಮೇಲಾಗುವ ಪರಿಣಾಮಗಳ ಬಗ್ಗೆಯೂ ಎನ್‌ಎಚ್‌ಆರ್‌ಸಿಯು ತನ್ನ ವರದಿಯಲ್ಲಿ ಪ್ರಮುಖವಾಗಿ ಗಮನ ಸೆಳೆದಿದೆ.
 
ಇಂಥ ಸಂದರ್ಭದಲ್ಲಿ ಬೇರೆ ಪರಿಸರದಲ್ಲಿ ವಾರಗಟ್ಟಲೇ ಕುಟುಂಬದಿಂದ ದೂರವಿರಬೇಕಾದ ಸಂದರ್ಭದಲ್ಲಿ, ಆಸ್ಪತ್ರೆಯ ಆಡಳಿತವು, ಮಕ್ಕಳ ವಯಸ್ಸಿಗೆ ಅನುಗುಣವಾಗಿ ಮಾನಸಿಕ–ಸಾಮಾಜಿಕ ಬೆಂಬಲಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪೋಷಕರೊಂದಿಗೆ ಆನ್‌ಲೈನ್ ಮತ್ತು ದೂರವಾಣಿ ಸಂವಾದ ನಡೆಸುವ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಆಯೋಗವು ಅಭಿಪ್ರಾಯಪಟ್ಟಿದೆ.
 
ಶಾಲೆಗಳು ಬಂದ್ ಆಗಿರುವ ಕಾರಣ, ಎಲ್ಲಾ ಮಕ್ಕಳಿಗೆ ವಿಶೇಷವಾಗಿ ಸಾಮಾಜಿಕ– ಆರ್ಥಿಕವಾಗಿ ಕೆಳಸ್ತರದಲ್ಲಿರುವ ಮಕ್ಕಳಿಗೆ ಇಂಟರ್‌ನೆಟ್ ಸೌಲಭ್ಯ ಸೇರಿದಂತೆ ಇತರ ಸೂಕ್ತ ಸಾಧನ ಮತ್ತು ಸಂಪನ್ಮೂಲಗಳನ್ನು ಒದಗಿಸಬೇಕು. ಈ ಮೂಲಕ ಎಲ್ಲ ಮಕ್ಕಳಿಗೆ ಆನ್‌ಲೈನ್ ತರಗತಿಗಳ ಪ್ರವೇಶವನ್ನು ಖಚಿತಗೊಳಿಸಬೇಕು ಎಂದು ಆಯೋಗವು ಶಿಫಾರಸು ಮಾಡಿದೆ.ಈ ಉದ್ದೇಶಕ್ಕಾಗಿ ಸರ್ಕಾರವು ನಿರ್ದಿಷ್ಟ ಬಜೆಟ್ ಅನ್ನೂ ನಿಗದಿಪಡಿಸಬೇಕು ಎಂದೂ ಎನ್‌ಎಚ್‌ಆರ್‌ಸಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು