ಶುಕ್ರವಾರ, ಆಗಸ್ಟ್ 12, 2022
20 °C
2022ಕ್ಕೆ ಹೊಸ ಪಠ್ಯಕ್ರಮ: ಪ್ರಧಾನಿ ನರೇಂದ್ರ ಮೋದಿ

ಭಾರತಕ್ಕೆ ಹೊಸ ದಿಕ್ಕು ತೋರಲಿದೆ ಶಿಕ್ಷಣ ನೀತಿ: ನರೇಂದ್ರ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) 21ನೇ ಶತಮಾನದಲ್ಲಿ ಭಾರತಕ್ಕೆ ಹೊಸ ದಿಕ್ಕು ತೋರಲಿದೆ. ನವ ಯುಗಕ್ಕೆ ನಾಂದಿ ಹಾಡಲಿದೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ–2020ರ ಅಡಿಯಲ್ಲಿ ಆಯೋಜಿಸಿರುವ ‘21ನೇ ಶತಮಾನದಲ್ಲಿ ಶಾಲಾ ಶಿಕ್ಷಣ’ ಕುರಿತ ಆನ್‌ಲೈನ್‌ ಸಮಾವೇಶ ಉದ್ದೇಶಿಸಿ ಶುಕ್ರವಾರ ಅವರು ಮಾತನಾಡಿದರು.

ಕನಿಷ್ಠ ಐದನೇ ತರಗತಿವರೆಗೂ ಮಕ್ಕಳು, ಮಾತೃಭಾಷೆ ಇಲ್ಲವೇ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಪಡೆಯುವುದರ ಅಗತ್ಯವನ್ನು ಒತ್ತಿ ಹೇಳಿದ ಮೋದಿ, ಇಂಗ್ಲಿಷ್‌ ಸೇರಿದಂತೆ ತಮಗೆ ಅನುಕೂಲಕರವಾಗುವ ಯಾವುದೇ ಭಾಷೆಯನ್ನಾದರೂ ಮಕ್ಕಳು ಕಲಿಯಬಹುದು. ಇದಕ್ಕೆ ಎನ್‌ಇಪಿ ಅಡ್ಡಿಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.

‘ಹಿಂದಿನ ಮೂರು ದಶಕಗಳಲ್ಲಿ ಜಗತ್ತು ಸಾಕಷ್ಟು ಬದಲಾಗಿದೆ. ಆದರೆ ನಮ್ಮ ಶಿಕ್ಷಣ ನೀತಿ ಹಾಗೆಯೇ ಇದೆ. ಈಗಿನ ವ್ಯವಸ್ಥೆಯಲ್ಲಿ ಅಂಕ ಪಟ್ಟಿಯು ವಿದ್ಯಾರ್ಥಿಗಳ ಪಾಲಿಗೆ ‘ಒತ್ತಡದ ಪಟ್ಟಿ’ಯಾಗಿದೆ. ಅವರ ಕುಟುಂಬದವರ ಪಾಲಿಗೆ ಅದು ‘ಪ್ರತಿಷ್ಠೆಯ ಪಟ್ಟಿ’ಯಾಗಿ ಪರಿಣಮಿಸಿದೆ. ಈ ಒತ್ತಡವನ್ನು ನಿವಾರಿಸುವುದು ಹೊಸ ಶಿಕ್ಷಣ ನೀತಿಯ ಗುರಿ’ ಎಂದು ಮೋದಿ ಪ್ರತಿಪಾದಿಸಿದರು. 

‘75ನೇ ಸ್ವಾತಂತ್ರ್ಯೋತ್ಸವದ ವರ್ಷದಲ್ಲಿ ಅಂದರೆ 2022ಕ್ಕೆ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಅಡಿಯಲ್ಲಿ ಸಿದ್ಧಪಡಿಸಿರುವ ಹೊಸ ಪಠ್ಯಕ್ರಮವನ್ನು ಅಭ್ಯಸಿಸುವಂತಾಗಬೇಕು. ಇದು ನಮ್ಮೆಲ್ಲರ ಜವಾಬ್ದಾರಿ’ ಎಂದು ಶಿಕ್ಷಕರು, ಪೋಷಕರು, ರಾಜ್ಯಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳನ್ನು ಉದ್ದೇಶಿಸಿ ಹೇಳಿದರು.

‘ಕೆಲಸ ಇನ್ನೂ ಅಂತಿಮವಾಗಿಲ್ಲ. ಎನ್‌ಇಪಿ ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕಿದೆ. ಈ ದಿಶೆಯಲ್ಲಿ ನಾವೆಲ್ಲಾ ಒಗ್ಗೂಡಿ ಕೆಲಸ ಮಾಡಬೇಕು. ಎನ್‌ಇಪಿ ಬಗ್ಗೆ ಜನರಲ್ಲಿ ಹಲವು ಪ್ರಶ್ನೆಗಳಿದ್ದು, ಅವು ನ್ಯಾಯಸಮ್ಮತವಾಗಿವೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವ ಪೀಳಿಗೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಎನ್‌ಇಪಿಯು ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಿದೆ’ ಎಂದರು.

ಭಾಷಣದ ಮುಖ್ಯಾಂಶಗಳು:

*ಕಲಿಕೆಗೆ ಸುಲಭ ಮತ್ತು ಹೊಸ ತಂತ್ರಗಳನ್ನು ನಾವು ಉತ್ತೇಜಿಸಬೇಕು. 

*ತೊಡಗಿಸಿಕೊಳ್ಳುವಿಕೆ, ಶೋಧನೆ, ಅನುಭವ, ಅಭಿವ್ಯಕ್ತಿ ಮತ್ತು ಉತ್ತಮ ಕಾರ್ಯನಿರ್ವಹಣೆಯು ಸುಲಭ ಹಾಗೂ ಹೊಸ ತಂತ್ರಗಳ ಮೂಲಗಳಾಗಿವೆ.

*ದೇಶದ ಪ್ರತಿ ಪ್ರದೇಶವೂ ಅದರದ್ದೇ ಆದ ಕೆಲ ವಿಶೇಷತೆಗಳನ್ನು ಹೊಂದಿರುತ್ತದೆ. ಆಯಾ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಅವುಗಳ ಬಗ್ಗೆ ತಿಳಿದುಕೊಳ್ಳಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು