ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಾಚೆಗಿನ ಸುರಂಗ ಪತ್ತೆಗೆ ಬಿಎಸ್‌ಎಫ್‌ ಕಾರ್ಯಾಚರಣೆ

ಜಮ್ಮುವಿನ ಸುಂಜ್ವಾನ್‌ ಸೇನೆ ನೆಲೆ ಮೇಲೆ ಆತ್ಮಾಹುತಿ ದಾಳಿ ಹಿನ್ನೆಲೆ
Last Updated 28 ಏಪ್ರಿಲ್ 2022, 14:44 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮುವಿನ ಸುಂಜ್ವಾನ್‌ ಸೇನೆ ನೆಲೆ ಬಳಿ ಇತ್ತೀಚೆಗೆ (ಏ.22) ನಡೆದ ನುಸುಳುಕೋರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಜಮ್ಮುವಿನ ಅಂತರರಾಷ್ಟ್ರೀಯ ಗಡಿಯುದ್ಧಕ್ಕೂ ಗಡಿಯಾಚೆಗಿನ ಭೂಗತ ಸುರಂಗ ಪತ್ತೆಗೆ ಬೃಹತ್‌ ಕಾರ್ಯಾಚರಣೆ ಆರಂಭಿಸಿದೆ.

ಜಮ್ಮು ಪ್ರಾಂತ್ಯದ ಸಾಂಬಾ ಜಿಲ್ಲೆಯ ಪಾಲಿ ಪಂಚಾಯಿತಿ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಮುನ್ನ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಆತ್ಮಾಹುತಿ ದಾಳಿಕೋರರು ದೈಗ್‌ ನುಲ್ಹಾ ಪ್ರದೇಶದ ಬಳಿ ಭಾರತ–ಪಾಕಿಸ್ತಾನದ ಗಡಿಯನ್ನು ನುಸುಳಿದ್ದು, ಟ್ರಕ್‌ನಲ್ಲಿ ಪ್ರಯಾಣ ಬೆಳೆಸಲು ಸ್ವಲ್ಪದೂರ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ ಎಂದು ವರದಿಯಾದ ಹಿನ್ನೆಲೆಯಲ್ಲಿ ಬಿಎಸ್‌ಎಫ್‌ ಈ ಕಾರ್ಯಾಚರಣೆಗೆ ಮುಂದಾಗಿದೆ.

‘ಜಮ್ಮುವಿನ 192 ಕಿ.ಮೀ ಉದ್ದದ ಅಂತರರಾಷ್ಟ್ರೀಯ ಗಡಿಯುದ್ಧಕ್ಕೂ ಗಡಿಯಾಚೆಗಿನ ಸುರಂಗಗಳ ಪತ್ತೆಗೆ ಬಿಎಸ್‌ಎಫ್‌ ಚಾಲನೆ ನೀಡಿದ್ದು, ಭದ್ರತಾ ಪಡೆಗಳು ಕಳೆದ ಐದು ದಿನಗಳಿಂದ ಭೂಗತ ಗಡಿಯಾಚೆಗಿನ ಸುರಂಗಗಳ ಹುಡುಕಾಟದಲ್ಲಿ ತೊಡಗಿವೆ. ಆತ್ಮಾಹುತಿ ದಾಳಿಕೋರರು ಗಡಿ ಬೇಲಿಯ ಮೂಲಕ ನುಸುಳಿರುವ ಯಾವುದೇ ಸುಳಿವು ಕಂಡು ಬಂದಿಲ್ಲ’ ಎಂದು ಬಿಎಸ್ಎಫ್‌ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಗಡಿಯಾಚೆಗಿನ ಸುರಂಗಗಳ ಪತ್ತೆಗಾಗಿ ಬಿಎಸ್‌ಎಫ್‌ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿರುತ್ತದೆ. ಸದ್ಯ ಜಮ್ಮು ವಲಯದ ಅಂತರರಾಷ್ಟ್ರೀಯ ಗಡಿಯ ಎಲ್ಲ ಬೇಲಿಯ 400 ಮೀಟರ್‌ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ಅಧಿಕಾರಿಗಳೇ ಖುದ್ದು ತಪಾಸಣೆ ನಡೆಸುತ್ತಿದ್ದು, ಯಾವುದೇ ಬಗೆಯ ಬೆದರಿಕೆ ಬಗ್ಗೆ ಅತ್ಯಾಧುನಿಕ ಉಪಕರಣಗಳನ್ನು ಬಳಕೆ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

‘ಕಳೆದ ವರ್ಷ ಕತುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್‌ ಎರಡು ಭೂಗತ ಸುರಂಗಗಳನ್ನು ಪತ್ತೆ ಮಾಡಿತ್ತು. ಕಳೆದ ಒಂದು ದಶಕದಲ್ಲಿ 10 ಸುರಂಗಗಳನ್ನು ಪತ್ತೆ ಮಾಡಿದೆ. ಒಂದು ವರ್ಷದಿಂದ ಪಾಕಿಸ್ತಾನವು ಡ್ರೋನ್‌ ಬಳಸಿ ನಡೆಸಲಾಗುತ್ತಿರುವ ದಾಳಿ ಭೀತಿಯ ಬಗ್ಗೆ ನಿಗಾ ವಹಿಸಲಾಗಿದೆ’ ಎಂದು ಅವರು ಹೇಳಿದರು.

‘ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಗಡಿ (ಐಬಿ) ಹಾಗೂ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಕಟ್ಟುನಿಟ್ಟಿನ ಕ್ರಮದಿಂದಾಗಿ ಉಗ್ರರು ಗಡಿಯನ್ನು ನುಸುಳಲು ಕಷ್ಟಕರವಾಗಿದೆ. ಆದರೆ ಕೆಲ ಸಂದರ್ಭಗಳಲ್ಲಿ ಜಮ್ಮು ಪ್ರಾಂತ್ಯದಲ್ಲಿ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಯಾದ ಐಎಸ್‌ಐ, ನುಸುಳುಕೋರರು ಹಾಗೂ ಶಸ್ತ್ರಾಸ್ತ್ರಗಳನ್ನು ಭೂಗತ ಸುರಂಗಗಳ ಮೂಲಕ ಕಳುಹಿಸುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್‌ 22ರಂದು ಸುಂಜ್ವಾನ್‌ ಪ್ರದೇಶದಲ್ಲಿ ಐದು ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಪಾಕಿಸ್ತಾನ ಮೂಲದ ಜೈಶೆ–ಮೊಹಮ್ಮದ್‌ (ಜೆಇಎಂ)ನ ಇಬ್ಬರು ಉಗ್ರರು ಹಾಗೂ ಸಿಐಎಸ್‌ಎಫ್‌ ಅಧಿಕಾರಿಯೊಬ್ಬರು ಮೃತಪಟ್ಟಿದ್ದರು. ಈ ಘಟನೆ ಸಂಬಂಧ ಟ್ರಕ್‌ನ ಇಬ್ಬರು ಚಾಲಕರು ಸೇರಿ ಮೂವರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT